Mahindra XUV 700: ಟಾಟಾ ಸಫಾರಿ ಪ್ರತಿಸ್ಪರ್ಧಿ.. 5 ಸ್ಟಾರ್ ಸೇಫ್ಟಿ ಎಸ್‌ಯುವಿ ಮಹೀಂದ್ರಾ XUV 700 ಹೊಸ ದಾಖಲೆ
ಭಾರತದಲ್ಲಿ ಖರೀದಿಗೆ ಸಿಗುವ ಮಹೀಂದ್ರಾ (Mahindra) ಕಂಪನಿ ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಿವೆ. ಅದರಲ್ಲೂ XUV 700, ಸ್ಕಾರ್ಪಿಯೋಗಳು ಸೇಫ್ಟಿ ಸಲುವಾಗಿ ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿವೆ. ಸದ್ಯ, ಜನಪ್ರಿಯ XUV 700 ಎಸ್‌ಯುವಿ ದೊಡ್ಡದೊಂದು ದಾಖಲೆ ಮಾಡಿದ್ದು, ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಹೀಂದ್ರಾ, ದೇಶೀಯ ಮಾರುಕಟ್ಟೆಯಲ್ಲಿ ಆಗಸ್ಟ್ 14, 2021ರಲ್ಲಿ 'XUV 700' ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ ಒಂದು ಲಕ್ಷ ಯುನಿಟ್ ಈ ಕಾರುಗಳನ್ನು ಮಾರಾಟ ಮಾಡಿ, ಐತಿಹಾಸಿಕ ದಾಖಲೆ ನಿರ್ಮಿಸಿದೆ. XUV 700 ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಹೊಂದಿದ್ದು, ಟಾಪ್ ಎಂಡ್ 'AX7 L' ರೂಪಾಂತರವನ್ನು ಇವತ್ತು ಬುಕಿಂಗ್ ಮಾಡಿದರೂ ವಿತರಣೆ ಪಡೆಯಲು ಆರು ತಿಂಗಳು ಕಾಯಬೇಕು.

ಈ ಕಾರು, ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದು, ರೂ 14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಜೊತೆಗೆ ಸ್ಮಾರ್ಟ್ ಲುಕ್ ನೊಂದಿಗೆ ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದಂತಹ ವಾಹನವಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿರುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗುತ್ತದೆ.
ಮಹೀಂದ್ರಾ XUV 700 ಯಾವೆಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, ADAS ತಂತ್ರಜ್ಞಾನ (ಇದು ಅಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಹೊಂದಿರುತ್ತದೆ), TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಇದಿಷ್ಟೇ ಅಲ್ಲದೆ, ಈ ಎಸ್‌ಯುವಿ, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಆಕರ್ಷಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಎಲೆಕ್ಟ್ರಿಕಲಿ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, LED ಹೆಡ್ ಲ್ಯಾಂಪ್ಸ್, 12 ಸ್ವೀಕರ್ ಗಳೊಂದಿಗೆ 3D ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಮಹೀಂದ್ರಾ XUV 700 ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದರ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 hp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮತ್ತೊಂದು 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 155 hp ಪವರ್, 360 Nm ಪೀಕ್ ಟಾರ್ಕ್, ಹೈಯರ್ ವೇರಿಯೆಂಟ್ 85 hp ಪವರ್, 420 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು ಕೂಡ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಆದರೆ, ಡಿಸೇಲ್ ಎಂಜಿನ್ ಕಾರು, ಜಿಪ್, ಜ್ಯಾಪ್, ಜೂಮ್ ಮತ್ತು ಕಸ್ಟಮ್ ಎಂಬ ಡ್ರೈವ್ ಮೋಡ್ ಹೊಂದಿದೆ.
ಇನ್ನು, ಮಹೀಂದ್ರಾ XUV 700ಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಮತ್ತು ಜೀಪ್ ಕಂಪಾಸ್ ಗಳು ಭಾರತದ ಮಾರುಕಟ್ಟೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿವೆ. ಸದ್ಯ, ಒಂದು ಲಕ್ಷ ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಐತಿಹಾಸಿಕ ದಾಖಲೆ ನಿರ್ಮಿಸಿರುವ XUV 700 ಮುಂಬರುವ ದಿನಗಳಲ್ಲಿಯೂ ಇದೆ ಹಾದಿಯಲ್ಲಿ ಸಾಗಲು ಕಂಪನಿ ಬಯಸುತ್ತಿದೆ.


Click it and Unblock the Notifications