Mahindra XUV400: ಟಾಟಾಗೆ ಠಕ್ಕರ್.. 456 Km ರೇಂಜ್ ನೀಡುವ ಮಹೀಂದ್ರಾ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ
ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾದ ಕಾರುಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿವೆ. ದೇಶದ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿಯತ್ತ ಮುಖ ಮಾಡುತ್ತಿದ್ದು, ಕಂಪನಿಯು ಜನವರಿಯಲ್ಲಿ ಬಹುನೀರಿಕ್ಷಿತ 'XUV400' ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿತ್ತು. ಸದ್ಯ, ಈ ಇವಿ ದೊಡ್ಡಮಟ್ಟದ ಡಿಮ್ಯಾಂಡ್ ಹೊಂದಿದೆ ಎಂದು ವರದಿಯಾಗಿದೆ.
ಮಹೀಂದ್ರಾ XUV400 ಬೇಡಿಕೆ ಬಗ್ಗೆ ಮಾತನಾಡುವುದಾದರೆ, ಈ ಕಾರು, 23,000ಕ್ಕೂ ಹೆಚ್ಚಿನ ಬುಕಿಂಗ್ ಪಡೆದುಕೊಂಡಿದೆ. ವಿತರಣೆಯಾಗಲು ಸರಿ ಸುಮಾರು ಆರು ತಿಂಗಳು ಹಿಡಿಯಲಿದೆ. ಕಂಪನಿ ಈಗಾಗಲೇ 4,000 ( ಶೇಕಡ 18%) ಯುನಿಟ್ XUV400 ಕಾರನ್ನು ಡೆಲಿವರಿ ಮಾಡಿದೆ. ಆಸಕ್ತ ಗ್ರಾಹಕರು, ರೂ.20,000 ಮುಂಗಡ ಹಣ ಪಾವತಿಸಿ, ಈಗಲೂ ಬುಕಿಂಗ್ ಮಾಡಬಹುದು.

ಈ ಕಾರಿನ ಬೆಲೆ ಕುರಿತು ಹೇಳುವುದಾದರೆ, ಮಹೀಂದ್ರಾ XUV400 ರೂ.15.99 ಲಕ್ಷದಿಂದ ರೂ.18.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರಮುಖವಾಗಿ ಎರಡು ರೂಪಾಂತರಗಳಲ್ಲಿ ಸಿಗಲಿದೆ. ಅವುಗಳೆಂದರೆ, ಇಎಲ್ ಹಾಗೂ ಇಸಿ. ಟಾಪ್ ಎಂಡ್ ಇಸಿ ವಿತರಣೆಗಳು ದೀಪಾವಳಿ ಹಬ್ಬದಿಂದ ಆರಂಭವಾಗಲಿದೆ. ಎಂಟ್ರಿ ಲೆವೆಲ್ ಇಎಲ್ ಅನ್ನು ಈಗಾಗಲೇ ಡೆಲಿವರಿ ಮಾಡಲಾಗುತ್ತಿದೆ.
ಮಹೀಂದ್ರಾ XUV400 ಬ್ಯಾಟರಿ ಪ್ಯಾಕ್ ಹಾಗೂ ಕಾರ್ಯಕ್ಷಮತೆ ಬಗ್ಗೆ ತಿಳಿಯುವುದಾದರೆ, ಇದು 34.5kWh ಹಾಗೂ 39.4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇವುಗಳಿಗೆ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್, 150 hp ಗರಿಷ್ಠ ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದ ಹೊಂದಿದೆ. ಫನ್, ಫಾಸ್ಟ್ ಹಾಗೂ ಫಿಯರ್‌ಲೆಸ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಪಡೆದಿದೆ.

ಈ ಕಾರು, ಕೇವಲ 8.3 ಸೆಕೆಂಡುಗಳಲ್ಲಿ 0 ಯಿಂದ 100 kph ವೇಗವನ್ನು ಪಡೆಯಲಿದ್ದು, 150 kmph ಟಾಪ್ ಸ್ವೀಡ್ ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ 34.5kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 375 km ರೇಂಜ್ ನೀಡಿದರೇ, 39.4kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 456 km ರೇಂಜ್ ಕೊಡಲಿದೆ.
ಮಹೀಂದ್ರಾ XUV400 ಚಾರ್ಜಿಂಗ್ ಆಯ್ಕೆ ಬಗ್ಗೆ ಹೇಳುವುದಾದರೆ, ಈ ಕಾರಿನ ಬ್ಯಾಟರಿ ಪ್ಯಾಕ್ 50kW DC ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಕೇವಲ 50 ನಿಮಿಷದಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗುತ್ತದೆ. 7.2kW ಚಾರ್ಜರ್ ಆಯ್ಕೆಯಲ್ಲಿ ಶೇಕಡ 0 ರಿಂದ 100% ಚಾರ್ಜ್ ಆಗಲು 6 ಗಂಟೆ 30 ನಿಮಿಷ ಹಾಗೂ 3.3kW AC ಚಾರ್ಜರ್ ಬಳಕೆಯಲ್ಲಿ 13 ಗಂಟೆ ಬೇಕಾಗುತ್ತದೆ.
ಇದು ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 7.0 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್ನಲಾಜಿ, OTA ಅಪ್ಡೇಟ್ಸ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಆಕರ್ಷಕ ಸನ್‌ರೂಫ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ನವೀನ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್ ಸೇರಿದಂತೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.
ಈ ಮಹೀಂದ್ರಾ XUV400 ಕಾರಿಗೆ ಟಾಟಾ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಪ್ರೈಮ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಈ ಕಾರು ಪಡೆದುಕೊಂಡಿರುವ ಬುಕಿಂಗ್ ಸಂಖ್ಯೆಯನ್ನು ಗಮನಿಸಿದರೆ, ದೇಶದಲ್ಲಿ ಜನರು ಎಲೆಕ್ಟ್ರಿಕ್ ಕಾರುಗಳತ್ತ ವಾಲುತ್ತಿದ್ದಾರೆ ಎಂದು ಸುಲಭವಾಗಿ ಹೇಳಬಹುದು. ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications