ಪವರ್ ಫುಲ್ Mahindra ಎಲೆಕ್ಟ್ರಿಕ್ ಕಾರು ಕಾಣಿಸಿತು: ಬೆಂಗಳೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಹೋಗಬಹುದು..!
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಒಂದಾದ ಮೇಲೆ ಒಂದರಂತೆ ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಇದೀಗ, ಮಹೀಂದ್ರಾ (Mahindra)ದ XUV700 ಆಧಾರಿತ ಹೊಸ ಎಲೆಕ್ಟ್ರಿಕ್ ಕಾರು ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡು ಬಂದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ, XUV400 ಹೆಸರಿನ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸುವ ಐದು ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರುಗಳ ಬಗ್ಗೆ ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸಿತ್ತು. ಅದರ ಭಾಗವಾಗಿ XUV700 ಆಧಾರಿತ ಎಲೆಕ್ಟ್ರಿಕ್ ಎಸ್‌ಯುವಿ, ದೇಶದ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಆದರೆ, ಇದು ಎಲೆಕ್ಟ್ರಿಕ್ ಪವರ್ಟ್ರೇನ್ ಪಡೆದಿದೆಯೇ ಎಂಬುದರ ಬಗ್ಗೆ ತಿಳಿದುಬಂದಿಲ್ಲ.

ಸದ್ಯ, ಪರೀಕ್ಷಾರ್ಥ ಸಂಚಾರ ನಡೆಸುವಾಗ ಕ್ಯಾಮೆರಾಗೆ ಸೆರೆ ಸಿಕ್ಕಿರುವ XUV700 ಆಧಾರಿತ ಹೊಸ ಎಲೆಕ್ಟ್ರಿಕ್ ಕಾರು, ಅತ್ಯಾಕರ್ಷಕವಾಗಿದ್ದು, ಫ್ರಂಟ್ ಫಾಸಿಯಾ, ಬಂಪರ್ ಹಾಗೂ ಗ್ರಿಲ್ ನಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಕಾರಿನ ರೇಂಜ್ ಕುರಿತು ಸದ್ಯಕ್ಕೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೂ XUV400 ಎಲೆಕ್ಟ್ರಿಕ್ ಕಾರಿಗಿಂತ ಗರಿಷ್ಠ ರೇಂಜ್ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 450 kmಗಿಂತ ಹೆಚ್ಚಿನ ದೂರವನ್ನು ಕ್ರಮಿಸಲಿದೆಯಂತೆ.
ಪರೀಕ್ಷಾರ್ಥ ಸಂಚಾರ ನಡೆಸುವುದನ್ನು ನೋಡಿದರೆ, XUV700 ಆಧಾರಿತ ಹೊಸ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಬಹುದು ಎಂದು ಊಹಿಸಬಹುದು. ಆದರೆ, ಬಿಡುಗಡೆ ದಿನಾಂಕ, ಬೆಲೆ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಕೆಲವೇ ದಿನಗಳ ಹಿಂದೆ, ಮಹೀಂದ್ರಾದ 'BE.05' ಎಲೆಕ್ಟ್ರಿಕ್ ಎಸ್‌ಯುವಿ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದ್ದವು ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಇಂಧನ ಚಾಲಿತ XUV700 ಕಾರಿಗೆ ಕಾರಿಗೆ ಹೋಲಿಸಿದರೆ, ಮಹೀಂದ್ರಾದ ಪ್ರಮುಖ XUV.e8 (ಕಾನ್ಸೆಪ್ಟ್) ಎಲೆಕ್ಟ್ರಿಕ್ ಕಾರು, ಹೊಸ ರೀತಿಯ ವಿನ್ಯಾಸವನ್ನು ಹೊಂದಿರಲಿದ್ದು, 4,740 ಎಂಎಂ ಉದ್ದ, 1,900 ಎಂಎಂ ಅಗಲ ಹಾಗೂ 1,760 ಎಂಎಂ ಎತ್ತರವಿರುವ ನೀರಿಕ್ಷೆಯಿದೆ. ಜೊತೆಗೆ ಈ ಕಾರು, ಗರಿಷ್ಠ ರೇಂಜ್ ನೀಡಲಿದೆ. ಮೂಲಗಳ ಪ್ರಕಾರ, ಇದೇ XUV700 ಆಧಾರಿತ ಹೊಸ ಎಲೆಕ್ಟ್ರಿಕ್ ಕಾರಂತೆ. ಆದರೆ, ಕಂಪನಿ ಕಡೆಯಿಂದ ಗೊಂದಲಗಳಿಗೆ ಸ್ಪಷ್ಟನೆ ಸಿಗಬೇಕಾಗಿದೆ.
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾದ ಏಕೈಕ ಎಲೆಕ್ಟ್ರಿಕ್ ಕಾರು, XUV400 ಬಗ್ಗೆ ಮಾತನಾಡುವುದಾದರೆ, ರೂ.15.99 ಲಕ್ಷದಿಂದ ರೂ.18.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಈ ಕಾರು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. 34.5kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, ಫುಲ್ ಚಾರ್ಜಿನಲ್ಲಿ 375 km ರೇಂಜ್, 39.4kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 456 km ರೇಂಜ್ ನೀಡುತ್ತದೆ.
ನೂತನ ಮಹೀಂದ್ರಾ XUV400, 8.3 ಸೆಕೆಂಡುಗಳಲ್ಲಿ 0-100 kph ವೇಗವನ್ನು ಪಡೆಯಲಿದ್ದು, 150 kmph ಟಾಪ್ ಸ್ವೀಡ್ ಹೊಂದಿದೆ. ಈ ಕಾರು ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 7.0 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್ನಲಾಜಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.
ಇನ್ನು, ದೇಶದ ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಟಾಟಾ ಕಂಪನಿಯೇ ಆವರಿಸಿಕೊಂಡಿದ್ದು, ಪೈಪೋಟಿ ನೀಡಲು ವಿವಿಧ ಎಲೆಕ್ಟ್ರಿಲ್ ಕಾರುಗಳ ಅಭಿವೃದ್ದಿಯಲ್ಲಿ ಮಹೀಂದ್ರಾ ಕಂಪನಿ ಸಹ ತೊಡಗಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಕಂಪನಿಯಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಎಲೆಕ್ಟ್ರಿಕ್ ಕಾರುಗಳು ಲಾಂಚ್ ಆಗಲಿವೆ. ಇದೀಗ, XUV700 ಆಧಾರಿತ ಹೊಸ ಎಲೆಕ್ಟ್ರಿಕ್ ಪರೀಕ್ಷಾರ್ಥ ಸಂಚಾರ ನಡೆಸಿದೆ ಎಂಬುದು ಮಹೀಂದ್ರಾ ಅಭಿಮಾನಿಗಳಿಗೆ ಖುಷಿ ತಂದಿದೆ.


Click it and Unblock the Notifications