Maruti Suzuki: ಭಾರತದಿಂದ ವಿದೇಶಗಳಿಗೆ ರಫ್ತಾಗುವ 'ಮಾರುತಿ' ಕಾರುಗಳಿಗೆ ಊಹಿಸಲಾಗದಷ್ಟು ಡಿಮ್ಯಾಂಡ್
ವಿವಿಧ ಆರ್ಥಿಕ ಕಾರಣಗಳಿಂದ ಭಾರತದಿಂದ ವಿದೇಶಗಳಿಗೆ ರಫ್ತು ಮಾಡುವ ವಾಹನಗಳ ಪ್ರಮಾಣ ಕುಸಿತ ಕಂಡಿದೆ. ಆದರೂ ದೇಶದಲ್ಲಿ ಉತ್ಪಾದನೆಯಾಗುವ ಮಾರುತಿ ಸುಜುಕಿ (Maruti Suzuki) ಕಂಪನಿ ಕಾರುಗಳಿಗೆ ಅಲ್ಲಿ ಭಾರೀ ಬೇಡಿಕೆಯಿದೆ. ಕಳೆದ ಮೇ ತಿಂಗಳಲ್ಲಿ (2023) ರಫ್ತು ಮಾಡಿರುವ ಕಾರುಗಳ ಸಂಖ್ಯೆಯೇ ಇದಕ್ಕೆ ನಿದರ್ಶನ.
ಮೊದಲಿಗೆ ದೇಶದಿಂದ ವಿದೇಶಗಳಿಗೆ ರಫ್ತು ಮಾಡಲಾದ ಒಟ್ಟು ಕಾರುಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಮಾರುತಿ ಸುಜುಕಿ, ಕಿಯಾ ಸೇರಿದಂತೆ ವಿವಿಧ ಕಂಪನಿಗಳು ಮೇ ತಿಂಗಳಲ್ಲಿ (2023) 53,237 ಯುನಿಟ್ ಕಾರುಗಳನ್ನು ರಫ್ತು ಮಾಡಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (56,888 ಯುನಿಟ್) 6.42% ಕುಸಿತ ದಾಖಲಿಸಿವೆ. ಆದರೆ, ತಿಂಗಳಿಂದ ತಿಂಗಳಿಗೆ ಉತ್ತಮ ಪ್ರಗತಿ ಸಾಧಿಸಿವೆ. ಏಪ್ರಿಲ್ ತಿಂಗಳಲ್ಲಿ 40,940 ಯುನಿಟ್ ರಫ್ತು ಮಾಡಲು ಶಕ್ತವಾಗಿದ್ದವು.

ಮಾರುತಿ ಸುಜುಕಿ ಮಾತ್ರ ತನ್ನ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡುವಲ್ಲಿ ಮೊದಲ ಸ್ಥಾನದಲಿದ್ದು, ಅದರಲ್ಲೂ ಎಸ್-ಪ್ರೆಸ್ಸೊಗೆ ಭಾರೀ ಬೇಡಿಕೆಯಿದೆ. ಮೇ ತಿಂಗಳಲ್ಲಿ ಕಂಪನಿಯು 5925 ಯುನಿಟ್ ಎಸ್-ಪ್ರೆಸ್ಸೊ ಕಾರುಗಳನ್ನು ರಫ್ತು ಮಾಡಲು ಯಶಸ್ವಿಯಾಗಿದೆ. 2022ರ ಮೇ ನಲ್ಲಿ 3692 ಯುನಿಟ್ ಮಾತ್ರ ಎಕ್ಸ್ಪೋರ್ಟ್ ಮಾಡಿತ್ತು. ಈ ಮೂಲಕ ವರ್ಷದಿಂದ ವರ್ಷಕ್ಕೆ (YoY) ಶೇಕಡ 60.18% ಪ್ರಗತಿ ಸಾಧಿಸಿದೆ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೂರೆಯುವ ಎಸ್-ಪ್ರೆಸ್ಸೊ ಕಾರಿನ ಬಗ್ಗೆ ಒಂದಿಷ್ಟು ವಿವರವನ್ನು ನೋಡುವುದಾದರೆ, ಈ ಕಾರು, ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 24.12 - 25.3 kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಸಹ ವಿದೇಶದಲ್ಲಿ ಸಾಕಷ್ಟು ಡಿಮ್ಯಾಂಡ್ ಹೊಂದಿದೆ. ಕಂಪನಿಯು ಮೇ ತಿಂಗಳಲ್ಲಿ (2023) ಬರೋಬ್ಬರಿ 4910 ಯುನಿಟ್ ಬಲೆನೊ ಕಾರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 4214 ಯೂನಿಟ್ ಕಾರುಗಳನ್ನು ಮಾತ್ರ ಎಕ್ಸ್ಪೋರ್ಟ್ ಮಾಡಲು ಯಶಸ್ವಿಯಾಗಿತ್ತು. ಈ ಮೂಲಕ ಶೇಕಡ 16.52% ಬೆಳವಣಿಗೆ ಸಾಧಿಸಿದೆ.
ಈ ಬಲೆನೊ ಕಾರಿನ ಬಗ್ಗೆ ಮಾತನಾಡುವುದಾದರೆ, ಇದು ರೂ.6.61 ಲಕ್ಷದಿಂದ ರೂ.9.88 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದು ಕೂಡ ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. 22.35 - 22.94 kmpl ಮೈಲೇಜ್ ನೀಡುತ್ತದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 6 ಏರ್ ಬ್ಯಾಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಕಾರಾಗಿರುವ ಸೆಲರಿಯೊ ಕೂಡ ವಿದೇಶದಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಕಂಪನಿಯು ಮೇ ತಿಂಗಳಲ್ಲಿ 3413 ಯುನಿಟ್ ಕಾರುಗಳನ್ನು ಎಕ್ಸ್ಪೋರ್ಟ್ ಮಾಡಿದೆ. 2022ರ ಇದೇ ಅವಧಿಯಲ್ಲಿ ಕೇವಲ 1364 ಯೂನಿಟ್ ರಫ್ತು ಮಾಡಿತ್ತು. ಸದ್ಯ, ಶೇಕಡ 150.22% ಪ್ರಗತಿ ಸಾಧಿಸಿದೆ. ಈ ಕಾರು, ರೂ.5.37 - 7.14 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.
ಅದೇಕೋ ಕಂಪನಿಯು ಕಳೆದ ಮೇ ತಿಂಗಳಲ್ಲಿ ಡಿಸೈರ್ (2975 ಯುನಿಟ್) ಹಾಗೂ ಸ್ವಿಫ್ಟ್ (2486 ಯುನಿಟ್) ರಫ್ತಿನಲ್ಲಿ ಹಿನ್ನೆಡೆ ಅನುಭವಿಸಿದೆ. ಆದರೆ, ಎರ್ಟಿಗಾ ಮಾತ್ರ ಉತ್ತಮ ಸಂಖ್ಯೆಯಲ್ಲಿ (2500 ಯುನಿಟ್) ಎಕ್ಸ್ಪೋರ್ಟ್ ಆಗಿದೆ. ಈ ಅಂಕಿಅಂಶವನ್ನು ಗಮನಿಸಿದಾಗ ಮಾರುತಿ ಸುಜುಕಿಯ ಕಾರುಗಳಿಗೆ ವಿದೇಶದಲ್ಲಿ ಬೇಡಿಕೆ ಎಷ್ಟಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ.


Click it and Unblock the Notifications