Maruti Fronx: ಟಾಟಾ ಇವಿಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಮಾರುತಿ ಫ್ರಾಂಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ: ಮುಖ್ಯ ಮಾಹಿತಿ
ಭಾರತದ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ತನ್ನ ಬಹುನೀರಿಕ್ಷಿತ ಫ್ರಾಂಕ್ಸ್ ಎಸ್‌ಯುವಿಯನ್ನು ರೂ.7.46 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಗೊಳಿಸಿದೆ. ಈ ಕಾರಿಗೆ ದೇಶಾದ್ಯಂತ ಗ್ರಾಹಕರಿಂದ ದೊಡ್ಡಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ, ಫ್ರಾಂಕ್ಸ್ ಎಸ್‌ಯುವಿ ಎಲೆಕ್ಟ್ರಿಕ್ ರೂಪತಾಳಿ ಬರಬಹುದು ಎಂದು ವರದಿಯಾಗಿದೆ.
2023ರ ವೇಳೆಗೆ ವ್ಯಾಗನ್ ಆರ್ ಸೇರಿದಂತೆ ಆರು ಕಾರುಗಳನ್ನು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿ ಬಿಡುಗಡೆ ಮಾಡಲು ಕಂಪನಿ ತಯಾರಿ ನಡೆಸುತ್ತಿದೆ. ಅದರ ಭಾಗವಾಗಿ 'ಫ್ರಾಂಕ್ಸ್' ಎಸ್‌ಯುವಿ ಕೂಡ ಇವಿಯಾಗಿ ಬದಲಾಗಲಿದೆ ಎಂದು ಹೇಳಲಾಗಿದೆ. ಆದರೆ, ಮಾರುತಿ ಸುಜುಕಿಯಿಂದ ಕಳೆದ ಜನವರಿಯಲ್ಲಿ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ 'eVX' ಕಾನ್ಸೆಪ್ಟ್ ಆಧಾರಿತ ಕಾರು, ಮೊದಲ ಇವಿಯಾಗಿರಲಿದ್ದು, 2024ರ ಕೊನೆ ಅಥವಾ 2025ರ ಆರಂಭದಲ್ಲಿ ಲಾಂಚ್ ಆಗಬಹುದು.

ಎಲೆಕ್ಟ್ರಿಕ್ ಕಾರಾಗಿ ಮುಂಬರುವ ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಗೆ ಬರಲಿರುವ ಫ್ರಾಂಕ್ಸ್ ಎಸ್‌ಯುವಿ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರಲಿದೆ. ಹೊರಭಾಗವು ಮತ್ತಷ್ಟು ಆಕರ್ಷಣೀಯವಾಗಿರಲಿದ್ದು, ಗ್ರಿಲ್‌ನಲ್ಲಿ ಇರುವ ಕ್ರೋಮ್ ಸ್ಟ್ರಿಪ್ ಜಾಗವನ್ನು DRL ಸ್ಟ್ರಿಪ್ ಆವರಿಸಿಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಕೆಲವು ಡಿಸೈನ್ ಫಿಚರ್ಸ್, ಹೀಗಿರುವ ICE ಚಾಲಿತ ಮಾದರಿಯಂತೆಯೇ ಇರಲಿದೆ.
ಯಾವುದೇ ಎಲೆಕ್ಟ್ರಿಕ್ ಕಾರಿಗೆ ಬ್ಯಾಟರಿ ಪ್ಯಾಕ್ ಹಾಗೂ ಪವರ್‌ಟ್ರೇನ್ ಮುಖ್ಯವಾಗುತ್ತದೆ. ಎಲೆಕ್ಟ್ರಿಕ್ ಕಾರಾಗಿ ಬದಲಾಗಲಿರುವ ಫ್ರಾಂಕ್ಸ್ ಎಸ್‌ಯುವಿ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರುವ ಸಾಧ್ಯತೆ ಇದ್ದು, ಟಾಟಾ ನೆಕ್ಸಾನ್ ಇವಿಯಂತೆ 350 km ನಿಂದ 400 km ರೇಂಜ್ ನೀಡಬಹುದು. ICE ಫ್ರಾಂಕ್ಸ್ ಮಾದರಿ ಹೊಂದಿರುವಂತೆ 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾವನ್ನು ಪಡೆದಿರಬಹುದು.
ಫ್ರಾಂಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಹಾಗೂ ಬೆಲೆ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಬಹುತೇಕ ರೂ.12 ಲಕ್ಷ ಎಕ್ಸ್ ಶೋರೂಂ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದು, ಲಾಂಚ್ ಆದ ಮೇಲೆ ಸಿಟ್ರಸ್ ಇಸಿ3, ಟಾಟಾ ನೆಕ್ಸಾನ್ ಇವಿ ಪ್ರೈಮ್ ಮತ್ತು ಮಹೀಂದ್ರಾ ಎಕ್ಸ್‌ಯುವಿ400ಗೆ ಪ್ರತಿಸ್ಪರ್ಧಿಯಾಗಲಿದೆ.
ಮುಂಬರಲಿರುವ ಫ್ರಾಂಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಭಾರೀ ಪೈಪೋಟಿ ನೀಡಬಹುದಾದ ಟಾಟಾ ನೆಕ್ಸಾನ್ ಇವಿ ಪ್ರೈಮ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಇದು ರೂ.14.49 ಲಕ್ಷದಿಂದ ರೂ.17.19 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 30.2 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್ ನೀಡಲಿದೆ.
ಸದ್ಯ, ಕೆಲವೇ ದಿನಗಳ ಹಿಂದೆ, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ICE ಚಾಲಿತ ಮಾರುತಿ ಫ್ರಾಂಕ್ಸ್ ಎಸ್‌ಯುವಿ, ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್, 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್. ರೂಪಾಂತರಗಳಿಗೆ ಅನುಗುಣವಾಗಿ 20.01 km/l - 22.89 km/l ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿಯ ಫ್ರಾಂಕ್ಸ್ ಎಸ್‌ಯುವಿ, ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಳ್ಳುವ ಮೂಲಕ ಖ್ಯಾತಿ ಗಳಿಸಿದೆ. ಮುಂಬರುವ ವರ್ಷಗಳಲ್ಲಿ ಫ್ರಾಂಕ್ಸ್ ಎಲೆಕ್ಟ್ರಿಕ್ ಕಾರಾಗಿ ಬರುವ ನೀರಿಕ್ಷೆ ಇದ್ದು, ಗ್ರಾಹಕರಿಗೆ ಇದರ ಮೇಲೆ ಸಾಕಷ್ಟು ನೀರಿಕ್ಷೆಗಳಿವೆ. ಬಹುತೇಕ ಕೈಗೆಟುಕುವ ಬೆಲೆ ಹಾಗೂ ಹೆಚ್ಚಿನ ರೇಂಜ್ ನೊಂದಿಗೆ ಖರೀದಿಗೆ ಸಿಗುವ ಸಾಧ್ಯತೆಯಿರುವುದರಿಂದ ಭಾರೀ ಬೇಡಿಕೆ ಸೃಷ್ಟಿಯಾಗಬಹುದು.


Click it and Unblock the Notifications