Maruti Suzuki Invicto: ಬಿಡುಗಡೆಯಾಗಿ ಕೆಲವೇ ದಿನ.. ಸೆನ್ಸೇಷನ್ ಸೃಷ್ಟಿಸಿದ ಮಾರುತಿ ಸುಜುಕಿ ಇನ್ವಿಕ್ಟೋ!
ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ಇನ್ವಿಕ್ಟೋ (Invicto) ಬಿಡುಗಡೆಯಾದ ಕೆಲವೇ ದಿನಗಳಲ್ಲಿ ತೀವ್ರ ಸಂಚಲನ ಸೃಷ್ಟಿಸುತ್ತಿದೆ. ಗರಿಷ್ಠ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡಿರುವ ಈ ಕಾರು ಫುಲ್ ಡಿಮ್ಯಾಂಡ್ ಹೊಂದಿದ್ದು, ವಿತರಣೆಯಾಗಲು ಸುಮಾರು ಎರಡು ತಿಂಗಳು ಬೇಕೆಂದು ವರದಿಯಾಗಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಪ್ರೀಮಿಯಂ ಎಂಪಿವಿಯಾಗಿರುವ ಮಾರುತಿ ಸುಜುಕಿ ಇನ್ವಿಕ್ಟೋ ಅಲ್ಪ ಅವಧಿಯಲ್ಲಿ 7,000ಕ್ಕೂ ಹೆಚ್ಚಿನ ಬುಕ್ಕಿಂಗ್ ಪಡೆದುಕೊಂಡಿದೆ. ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ಕಾರು ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿರುವುದರಿಂದ ದೇಶದ ಹಲವು ಭಾಗಗಳಲ್ಲಿ ವಿತರಣೆಗಳು ಎರಡು ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ ಎಂಬ ವಿವರಗಳು ಲಭ್ಯವಾಗಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ರೂಪಾಂತರಗಳು ಭಾರತದಲ್ಲಿ 8 - 10 ಕಾಯುವಿಕೆ ಸಮಯವನ್ನು ಹೊಂದಿವೆ. ಮಾರುತಿ ಸುಜುಕಿ ಇನ್ವಿಕ್ಟೋ ಸಹ ಹೆಚ್ಚು - ಕಡಿಮೆ ಅದೇ ರೀತಿಯ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದಿರುವುದರಿಂದ ಹೆಚ್ಚಿನ ಗ್ರಾಹಕರು, ಇನ್ನೋವಾ ಹೈಕ್ರಾಸ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ, ಇನ್ವಿಕ್ಟೋ ಎಂಪಿವಿಯನ್ನು ಖರೀದಿಸಲು ಆಸಕ್ತಿ ತೋರಿಸಿದ್ದಾರಂತೆ.
ಬೆಲೆ ವಿಚಾರಕ್ಕೆ ಬರುವುದಾದರೆ, ಏಳು ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಇನ್ವಿಕ್ಟೊ ರೂ.24.84 ಲಕ್ಷದಿಂದ ರೂ.28.42 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಆನ್-ರೋಡ್ ದರಗಳು ರೂ.34 ಲಕ್ಷವರೆಗೆ ಹೋಗುತ್ತವೆ. ಈ ಕಾರು, ಇನ್ನೋವಾ ಹೈಕ್ರಾಸ್ ಆಧಾರಿತವಾಗಿದ್ದರೂ ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಪಡೆದಿದೆ.

ಮಾರುತಿ ಸುಜುಕಿ ಇನ್ವಿಕ್ಟೋ, 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ e-CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಕೇವಲ 9.5 ಸೆಕೆಂಡುಗಳಲ್ಲಿ 0 ಯಿಂದ 100 kmph ವೇಗವನ್ನು ಪಡೆಯಲಿದ್ದು, 23.24 kmpl ಮೈಲೇಜ್ ನೀಡುತ್ತದೆ.
ಈ ಕಾರು, 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ರೂಫ್ ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಇನ್ವಿಕ್ಟೋ ಸುರಕ್ಷತೆಯ ದೃಷ್ಟಿಯಿಂದ ಭರಪೂರ ಫೀಚರ್ಸ್ ಪಡೆದಿದೆ. ಪ್ರಮುಖವಾಗಿ ಆರು ಏರ್‌ಬ್ಯಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360 ಡಿಗ್ರಿ ಕ್ಯಾಮೆರಾ ಮತ್ತು ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಒಳಗೊಂಡಿದೆ. ಈ ಮೂಲಕ ಸೇಫ್ಟಿ ವಿಚಾರವಾಗಿಯು ಅತ್ಯುತ್ತಮವಾಗಿದೆ.
ಇನ್ನು, ಇನ್ವಿಕ್ಟೋ ಎಂಪಿವಿಗೆ ಭಾರತದ ಮಾರುಕಟ್ಟೆಯಲ್ಲಿ ನೇರ ಪ್ರತಿಸ್ಪರ್ಧಿಗಳೆಂದರೆ, ಟೊಯೊಟಾ ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾ ಹಾಗೂ ಕಿಯಾ ಕ್ಯಾರೆನ್ಸ್. ಸದ್ಯ, ಈ ಕಾರು ಪಡೆದುಕೊಂಡಿರುವ ಬುಕ್ಕಿಂಗ್ ಸಂಖ್ಯೆಯನ್ನು ಗಮನಿಸಿದರೆ, ದೇಶೀಯ ಎಂಪಿವಿ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.


Click it and Unblock the Notifications