ಮಾರುತಿ ಸುಜುಕಿಯಿಂದ ಮೂರು ಎಸ್‌ಯುವಿಗಳು ಮಾರುಕಟ್ಟೆಗೆ: ಜಿಮ್ನಿಯೇ ಹಾಟ್ ಫೇವರೇಟ್
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಭಾರತದ ಅತ್ಯಂತ ದೊಡ್ಡ ಕಾರು ತಯಾರಿಕಾ ಕಂಪನಿ. 1981 ರಲ್ಲಿ ಆರಂಭವಾದ ಮಾರುತಿ ಸುಜುಕಿ, ಅಲ್ಲಿಂದ ಇಲ್ಲಿಯವರೆಗೆ ಹಲವಾರು ಮಾದರಿಯ ಕಾರುಗಳನ್ನು ಕಾಲಕ್ಕೆ ತಕ್ಕಂತೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಗೆ ಪರಿಚಯಿಸುತ್ತಾ ಜನಮಾನಸದಲ್ಲಿ ನೆಲೆಯಾಗಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಮಾರುತಿ ಸುಜುಕಿ ಅಚ್ಚುಮೆಚ್ಚು.
ಇದೇ ಮಾರುತಿಯ ಸುಜುಕಿಯ ಮೂರು ಎಸ್‌ಯುವಿ ಕಾರುಗಳು ಇದೇ ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈಗಾಗಲೇ ಎಲ್ಲಾ ವಿಭಾಗಗಳಲ್ಲೂ ಕಾರುಗಳನ್ನು ಹೊಂದಿರುವ ಮಾರುತಿ ಸುಜುಕಿ ಎಸ್‌ಯುವಿ ವಿಭಾಗದಲ್ಲಿ ಮತ್ತೆ ಮೂರು ಕಾರುಗಳನ್ನು ಬಿಡುಗಡೆ ಮಾಡುತ್ತಿರುವುದು ಮಾರುತಿ ಕಾರು ಪ್ರಿಯರಲ್ಲಿ ಸಂತಸ ಮೂಡಿಸಿದೆ. ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ, ಹೊಸ ಫ್ರಾಂಕ್ಸ್ ಮತ್ತು ಜಿಮ್ನಿ ಕಾರುಗಳನ್ನು ಮಾರುತಿಯು ಈ ವರ್ಷದ ಮಧ್ಯಂತರದಲ್ಲಿ ಮಾರುಕಟ್ಟೆಗೆ ಬಿಡಲಿದೆ ಎಂದು ತಿಳಿದು ಬಂದಿದೆ.
ಮಾರುತಿ ಸುಜುಕಿ ಭ್ರೆಝಾ ಸಿಎನ್‌ಜಿ:
ಮಾರುತಿ ಸುಜುಕಿ ಮಾರುಕಟ್ಟೆಗೆ ತರಲಿರುವ ಮೊದಲ ಎಸ್‌ಯುವಿ ಎಂದರೆ ಅದೇ ಈ ಬ್ರೆಝಾ ಸಿಎನ್‌ಜಿ. ಈಗಾಗಲೇ ಮಾರುಕಟ್ಟೆಯಲ್ಲಿ ಬ್ರೆಝಾ ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿದ್ದು, ಇದೀಗ ಸಿಎನ್‌ಜಿ ಆವೃತ್ತಿಯನ್ನೂ ಸಹ ಮಾರುತಿ ಮಾರುಕಟ್ಟೆಗೆ ಪರಿಚಯಿಸಲಿದೆ. ಇನ್ನು ಇದರ ಔದ್ಯೋಗಿಕ ಲಾಂಚ್ ಸದ್ಯದಲ್ಲೇ ನಡೆಯಲಿದ್ದು ಬೆಲೆಯೂ ಸಹ ಅದರೊಂದಿಗೆ ತಿಳಿಯಲಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ಇದು ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಬಂದರೂ ಬರಬಹುದು ಎಂಬ ಸುದ್ದಿಗಳು ಸಹ ಹರಿದಾಡುತ್ತಿದೆ.

ಈ ಮಾರುತಿ ಬ್ರೆಝಾ ಸಿಎನ್‌ಜಿ ಆವೃತ್ತಿಯನ್ನು ಇದೇ ವರ್ಷ ಜನವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ಪೋ 2023 ರಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇನ್ನು ಈ ಕಾರಿನಲ್ಲಿ 1.5 ಲೀಟರ್‌ನ K15C ಪೆಟ್ರೋಲ್ ಇಂಜಿನ್ ಜೊತೆಗೆ ಸಿಎನ್‌ಜಿ ಕಿಟ್‌ನಲ್ಲಿ ಇರಲಿದ್ದು, ಮೂಲಗಳ ಪ್ರಕಾರ 88 ಪಿಎಸ್ ಮತ್ತು 121.5 ಎನ್‌ಎಮ್ ಟಾರ್ಕನ್ನು ಉತ್ಪಾದಿಸಲಿದೆ ಎಂದು ತಿಳಿದು ಬಂದಿದೆ. ಸಿಎನ್‌ಜಿ ಯ ಸಹಾಯದೊಂದಿಗೆ ಈ ಕಾರು ಸುಮಾರು 27 ಕಿಲೋ ಮೀಟರ್ ಮೈಲೇಜನ್ನು ನೀಡಲಿದ್ದು, ಮೈಲೇಜ್ ಪ್ರಿಯರಿಗೆ ಇದೊಂದು ಉತ್ತಮ ಆಯ್ಕೆಯಾಗಬಹುದು.
ಮಾರುತಿ ಸಿಜುಕಿ ಫ್ರಾಂಕ್ಸ್:
ಈ ಬಾರಿಯ ಆಟೋ ಎಕ್ಸ್ಪೋ 2023 ರಲ್ಲಿ ಮಾರುತಿ ಜನರಿಗೆ ಪರಿಚಯಿಸಿದ ಕ್ರಾಸ್‌ಓವರ್ ಎಸ್‌ಯುವಿ ಮಾರುತಿ ಸುಜುಕಿ ಫ್ರಾಂಕ್ಸ್. ಮೂಲಗಳ ಪ್ರಕಾರ ಇದು ಇದೇ ವರ್ಷ ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬರಲಿದ್ದು ಜನರಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಿದೆ. ಇದಕ್ಕೆ ಕಾರಣವೆಂದರೆ ಮಾರುತಿ ಸುಜುಕಿ ಇತ್ತೀಚಿನ ವರ್ಷಗಳಲ್ಲಿ ಲಾಂಚ್ ಮಾಡಿದ ಅತ್ಯಾಕರ್ಷಕ ಎಸ್‌ಯುವಿಯೇ ಇದು. ಇದರ ಕ್ರಾಸ್‌ಓವರ್ ಡಿಸೈನ್ ಶೈಲಿಯು ಜನರನ್ನು ಬೇಗ ಆಕರ್ಷಿಸುತ್ತದೆ.

ಮಾರುತಿ ಸಿಜುಕಿ ಫ್ರಾಂಕ್ಸ್ ಸುಮಾರು ಐದು ವೇರಿಯೆಂಟ್‌ಗಲಲ್ಲಿ ಲಭ್ಯವಾಗಲಿದ್ದು, ಗ್ರಾಹಕರು ತಮಗೆ ಬೇಕಾದ ವೇರಿಯೆಂಟನ್ನು ಆಯ್ಕೆ ಮಾಡಿಕೊಳ್ಳಬಹುದು. 1.2 ಲೀಟರ್ ಫೋರ್ ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಮತ್ತು ಹೊಸ ಮೂರು ಸಿಲಿಂಡರ್‌ನ 1.0 ಲೀಟರ್ ಟರ್ಬೋ ಪೆಟ್ರೋಲ್ ಬೂಸ್ಟರ್‌ಜೆಟ್ ಇಂಜಿನ್ ಆಯ್ಕೆಗಳಲ್ಲಿ ಈ ಫ್ರಾಂಕ್ಸ್ ಕಾರು ಲಭ್ಯವಿದೆ. ಒಂದು ಆಕರ್ಷಕ ಶೈಲಿಯ ಕ್ರಾಸ್‌ಓವರ್ ಎಸ್‌ಯುವಿಯನ್ನು ಹುಡುಕುತ್ತಿರುವವರಿಗೆ ಮಾರುತಿ ಸುಜುಕಿ ಫ್ರಾಂಕ್ಸ್ ಉತ್ತಮ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ.
ಮಾರುತಿ ಸುಜುಕಿ ಜಿಮ್ನಿ:
ಭಾರತೀಯರು ಅತೀ ಹೆಚ್ಚು ಕಾತುರದಿಂದ ಕಾಯುತ್ತಿದ್ದ ಮಾರುತಿ ಸುಜುಕಿಯ ಕಾರು ಈ ಜಿಮ್ನಿ. ಆಕರ್ಷಕ ಡಿಸೈನ್‌ನಿಂದ ನೋಡುಗರನ್ನು ಆಕರ್ಷಿಸುವ ಈ ಎಸ್‌ಯುವಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇರಲಿದೆ ಎಂದು ಸ್ವತಃ ಹಲವಾರು ಕಾರು ತಜ್ಞರ ಅಭಿಪ್ರಾಯವಾಗಿದೆ. ಜಿಮ್ನಿಯು ಮೇ ತಿಂಗಳಲ್ಲಿ ಮಾರುಕಟ್ಟೆಗೆ ಧಾಪುಗಾಲಿಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸುಜುಕಿಯ ಆಲ್‌ಗ್ರಿಪ್ ಪ್ರೋ ಟೆಕ್ನಾಲಜಿ ಈ ಕಾರ್‌ನಲ್ಲಿ ಬರಲಿದ್ದು ಆಫ್‌ರೋಡ್ ಪ್ರಿಯರಿಗೆ ಜಿಮ್ನಿಯು ಹಾಟ್ ಫೇವರೀಟ್ ಆಗಲಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಮಾರುತಿ ಸುಜುಕಿ ಈ ವರ್ಷ ತನ್ನ ಫ್ಯಾನ್ಸ್‌ಗೆ ರಸದೌತಣ ನೀಡುವುದಂತೂ ಖಂಡಿತ. ಮೇಲೆ ತಿಳಿಸಿರುವ ಮೂರು ಕಾರುಗಳೂ ಸಹ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಲಿದೆಯಾದರೂ ಅದರಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದು ಹೆಜ್ಜೆ ಮುಂದು ಎಂದರೆ ತಪ್ಪಾಗಲಾರದು. ಯಾಕೆಂದರೆ ವಿದೇಶದಲ್ಲಿ ಈಗಾಗಲೇ ಜಿಮ್ನಿ ಬಿಡುಗಡೆಯಾಗಿದೆ ಮತ್ತು ಅದರ ಬಗ್ಗೆ ಒಳ್ಳೆಯ ಅಭಿಪ್ರಾಯಗಳೂ ಸಹ ವ್ಯಕ್ತವಾಗಿದೆ. ಇದೇ ಕಾರಣದಿಂದ ಭಾರತೀಯರು ಸಹ ಜಿಮ್ನಿಗಾಗಿ ಎದುರು ನೋಡುತ್ತಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದ್ದು ಜನರು ಯಾವ ರೀತಿ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು.


Click it and Unblock the Notifications