Maruti Suzuki: ಯಾರು ಅಂದಾಜಿಸಿರಲಿಲ್ಲ.. ಮಾರುತಿ ಸುಜುಕಿಯ ಈ ವೇಗದ ಓಟ, ಎಲ್ಲ ಧೂಳಿಪಟ
ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಜನಪ್ರಿಯ ವಾಹನ ತಯಾರಕ ಕಂಪನಿ ಗುರುತಿಸಿಕೊಂಡಿದೆ. ಇದರ ಕಾರುಗಳ ವೈಶಿಷ್ಟ್ಯ, ವಿನ್ಯಾಸ ಹಾಗೂ ಕಾರ್ಯಕ್ಷಮತೆ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ. ಸದ್ಯ, ಮೇ ತಿಂಗಳ (2023) ಮಾರಾಟ ವರದಿಯನ್ನು ಕಂಪನಿ ಪ್ರಕಟಿಸಿದ್ದು, ಅತ್ಯುತ್ತಮ ಪ್ರಗತಿ ದಾಖಲಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಾರುತಿ ಸುಜುಕಿ ಕಳೆದ ಮೇ ತಿಂಗಳಲ್ಲಿ ಒಟ್ಟು 1,78,083 ಯುನಿಟ್ (ದೇಶೀಯ ಮಾರಾಟ ಹಾಗೂ ರಫ್ತು ಸೇರಿ) ವಾಹನಗಳು ಮಾರಾಟ ಮಾಡಿದೆ. ವರ್ಷದಿಂದ ವರ್ಷಕ್ಕೆ (YoY) ಶೇಕಡ 10.33% ಪ್ರಗತಿ ಸಾಧಿಸಿದೆ. 2022ರ ಮೇ ತಿಂಗಳಲ್ಲಿ 1,61,413 ಯುನಿಟ್ ಸೇಲ್ ಮಾಡಿತ್ತು. ಈ ಅಂಕಿಅಂಶಗಳನ್ನು ಗಮನಿಸಿದಾಗ ಉತ್ತಮವಾಗಿಯೇ ಬೆಳವಣಿಗೆ ಸಾಧಿಸಿದೆ.

ಕಂಪನಿ ಮಾರಾಟ ಮಾಡಿರುವ ಒಟ್ಟು 1.78 ಲಕ್ಷ ವಾಹನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 1,46,596 ಯುನಿಟ್ ಸೇಲ್ ಮಾಡಿದೆ. ವಿದೇಶಗಳಿಗೆ 26,477 ಯುನಿಟ್ ರಫ್ತು ಮಾಡಿದೆ. ಅದೇಕೋ ಮಿನಿ ಸೆಗ್ಮೆಂಟ್ (ಆಲ್ಟೊ ಹಾಗೂ ಎಸ್-ಪ್ರೆಸ್ಸೊ) ಕಾರುಗಳ ಮಾರಾಟದಲ್ಲಿ ಕೊಂಚ ಹಿನ್ನೆಡೆ ಅನುಭವಿಸಿದೆ. ಕಳೆದ ತಿಂಗಳು 12,236 ಯುನಿಟ್ ಕಾರು ಮಾರಿದೆ. ಅದೇ 2022ರ ಮೇ ನಲ್ಲಿ 17,408 ಯುನಿಟ್ ಸೇಲ್ ಮಾಡಿತ್ತು.
ಕಾಂಪ್ಯಾಕ್ಟ್ ಕಾರು (ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನ್ ಆರ್) ಮಾರಾಟದಲ್ಲಿ ಮಾರುತಿ ಸುಜುಕಿ ಉತ್ತಮ ಪ್ರಗತಿ ಕಂಡಿದೆ. 2022ರ ಮೇ ತಿಂಗಳಿಗೆ (67,947 ಯುನಿಟ್) ಹೋಲಿಸಿದರೆ, 2023ರ ಮೇ ನಲ್ಲಿ 71,419 ಯುನಿಟ್ ಸೇಲ್ ಮಾಡಿದೆ. ಆದರೆ, ಸಿಯಾಜ್ ಕಾರಿನ ಮಾರಾಟದಲ್ಲಿ ತೀವ್ರ ಹಿನ್ನೆಡೆ ಅನುಭವಿಸುತ್ತಿದ್ದು, ಕೇವಲ 992 ಯುನಿಟ್ ಮಾರಿದೆ.
ಮಾರುತಿ ಸುಜುಕಿ ಎಸ್‌ಯುವಿ ವಿಭಾಗದಲ್ಲಿ ದೊಡ್ಡಮಟ್ಟದ ಮುನ್ನಡೆ ಸಾಧಿಸುತ್ತಿದ್ದು, ಕಳೆದ ವರ್ಷದ ಮೇ ತಿಂಗಳಿಗೆ (28,051 ಯುನಿಟ್) ಹೋಲಿಸಿದರೆ 2023ರ ಮೇ ನಲ್ಲಿ 46,243 ಕಾರುಗಳನ್ನು ಮಾರಾಟ ಮಾಡಿ, ಉತ್ತಮ ಪ್ರಗತಿ ದಾಖಲಿಸಿದೆ. ಈ ವಿಭಾಗದಲ್ಲಿ ಕಂಪನಿಯ ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ ಮತ್ತು XL6 ಯಶಸ್ವಿಯಾಗಿ ಸೇಲ್ ಆಗುತ್ತಿವೆ.
ಇವಷ್ಟೇ ಅಲ್ಲದೆ, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ Eeco ವ್ಯಾನ್ ಉತ್ತಮ ಸಂಖ್ಯೆಯಲ್ಲಿ (12,818 ಯುನಿಟ್) ಮಾರಾಟವಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ 10,482 ಯುನಿಟ್ ಸೇಲ್ ಮಾಡಿತ್ತು. ಮಾರುತಿ ಸುಜುಕಿಯೇ ಹೇಳಿರುವಂತೆ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯಿಂದ ಕಾರುಗಳ ಉತ್ಪಾದನೆಗೆ ಸ್ವಲ್ಪ ಹಿನ್ನೆಡೆಯಾಯಿತು. ಆದರೆ, ಇದನ್ನು ಸರಿದೂಗಿಸಿಕೊಂಡು ತಯಾರಿಕೆಯನ್ನು ಮುಂದುವರಿಸಲಾಯಿತು ಎಂದು ಹೇಳಿದೆ.
ಮಾರುತಿ ಸುಜುಕಿ ಮುಂದಿನ ವಾರವೇ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯನ್ನು ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಭಾರೀ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿರುವುದರಿಂದ ಗ್ರಾಹಕರಿಗೆ ನೀರಿಕ್ಷೆಗಳು ಹೆಚ್ಚಾಗಿವೆ. ಇದು ಬಹುತೇಕ ರೂ.10 - 12 ಲಕ್ಷ ಆರಂಭಿಕ ದರದಲ್ಲಿ ಖರೀದಿಗೆ ಸಿಗಬಹುದು. ಕೇವಲ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications