Maruti Suzuki: ಮಾರುತಿ ಸುಜುಕಿ ಎಸ್‌ಯುವಿಗಳಿಗೆ ಸಖತ್ ಡಿಮ್ಯಾಂಡ್.. ಫ್ರಾಂಕ್ಸ್, ವಿಟಾರಾಗೆ ಸರಿಸಾಟಿಯೇ ಇಲ್ಲ
ದೇಶದಲ್ಲಿ ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಸದ್ಯ, ನವೆಂಬರ್ ತಿಂಗಳ (2023) ಮಾರಾಟ ವರದಿಯನ್ನು ಪ್ರಕಟಿಸಿದ್ದು, ಕಂಪನಿಯು ಸಾಧಾರಣ ಮಟ್ಟದಲ್ಲಿ ಪ್ರಗತಿ ಸಾಧಿಸಿದೆ. ಆದರೆ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ ಸೇರಿದಂತೆ ಹಲವು ಎಸ್‌ಯುವಿಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿವೆ.
ನವೆಂಬರ್‌ನಲ್ಲಿ ಮಾರುತಿ ಸುಜುಕಿ ಇಂಡಿಯಾ (Maruti Suzuki India), 164,439 ಯುನಿಟ್ ವಾಹನಗಳನ್ನು ಸೇಲ್ ಮಾಡಿದ್ದು, ಶೇಕಡ 3.39% ಪ್ರಗತಿ ಸಾಧಿಸಿದೆ. ಅದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 136,667 ಯುನಿಟ್ ಮಾರಾಟ ಮಾಡಿದ್ದು, ವಿದೇಶಗಳಿಗೆ 22,950 ಯುನಿಟ್ ರಫ್ತು ಮಾಡಿದೆ. ಮಿನಿ ಸೆಗ್ಮೆಂಟ್ ವಿಭಾಗದ ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾರಾಟದಲ್ಲಿ ಹಿನ್ನೆಡೆ ಅನುಭವಿಸಿದ್ದು, ಕೇವಲ 9,959 ಯುನಿಟ್ ಕಾರುಗಳನ್ನು ಸೇಲ್ ಮಾಡಿದೆ.

ಮಾರುತಿ ಸುಜುಕಿ ಈ ನವೆಂಬರ್ ತಿಂಗಳಲ್ಲಿ ಕಾಂಪ್ಯಾಕ್ಟ್ ಕಾರುಗಳಾದ ಬಲೆನೊ (Baleno), ಸೆಲೆರಿಯೊ (Celerio), ಡಿಜೈರ್ (Dzire), ಸ್ವಿಫ್ಟ್ (Swift), ಇಗ್ನಿಸ್ (Ignis), ವ್ಯಾಗನ್ಆರ್ (WagonR) ಮತ್ತು ಟೂರ್ ಎಸ್ (Tour S) ಸೇಲ್ಸ್ ನಲ್ಲಿಯೂ ಹಿಂದೆ ಬಿದಿದ್ದು, ಕೇವಲ 64,679 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 72,844 ಯುನಿಟ್ ಸೇಲ್ ಮಾಡಿತ್ತು.
ಮಿನಿ ಹಾಗೂ ಕಾಂಪ್ಯಾಕ್ಟ್ ಸೆಗ್ಮೆಂಟ್ ನಲ್ಲಿ ಬರುವ ಸಿಯಾಜ್ (Ciaz) ಕಾರಿನ ಮಾರಾಟದಲ್ಲೂ ಮಾರುತಿ ಸುಜುಕಿ ಕಂಪನಿ ತೀವ್ರ ನಷ್ಟ ಅನುಭವಿಸಿದೆ. ಕಳೆದ ತಿಂಗಳು, ಕೇವಲ 278 ಯುನಿಟ್ ಸೇಲ್ ಮಾಡಿದೆ. 2022ರ ನವೆಂಬರ್‌ನಲ್ಲಿ 1,554 ಯುನಿಟ್ ಮಾರಾಟಗೊಳಿಸಿತ್ತು. ಇಕೋ (Eeco) ವ್ಯಾನ್ ಅನ್ನು ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಿದ್ದು, 10,226 ಯುನಿಟ್ ಸೇಲ್ ಆಗಿವೆ.

ಈ ನವೆಂಬರ್ ತಿಂಗಳು ಮಾರುತಿ ಸುಜುಕಿ ಭರ್ಜರಿಯಾಗಿ ಯುಟಿಲಿಟಿ ವೆಹಿಕಲ್‌ಗಳನ್ನು ಮಾರಾಟ ಮಾಡಿದೆ. ಬ್ರೆಝಾ (Brezza), ಫ್ರಾಂಕ್ಸ್ (Fronx), ಎಸ್-ಕ್ರಾಸ್ (S-Cross), ಎರ್ಟಿಗಾ (Ertiga), ಎಕ್ಸ್ಎಲ್6 (XL6), ಜಿಮ್ನಿ (Jimny), ಗ್ರ್ಯಾಂಡ್ ವಿಟಾರಾ (Grand Vitara) ಮತ್ತು ಇನ್ವಿಕ್ಟೊ (Invicto) ಕಾರುಗಳನ್ನು ಹಲವಾರು ಖರೀದಿಸಿದ್ದು, ಒಟ್ಟು 49,016 ಯುನಿಟ್ ಸೇಲ್ ಆಗಿವೆ. ಹಿಂದಿನ ವರ್ಷ 32,563 ಯುನಿಟ್ ಮಾರಾಟವಾಗಿತ್ತು.
ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬಗ್ಗೆ ಹೇಳುವುದಾದರೆ, ಇದು ರೂ.10.70 ಲಕ್ಷದಿಂದ ರೂ.19.99 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 19.38 - 27.97 kmpl ಮೈಲೇಜ್ ನೀಡುತ್ತದೆ. 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್, ರೂ.7.46 ಲಕ್ಷದಿಂದ ರೂ.13.13 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಕಾರು, ರೂ.20.01 - 22.89 kmpl ಮೈಲೇಜ್ ನೀಡುತ್ತದೆ. 9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿದೆ.
ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ, ರೂ.24.82 ಲಕ್ಷದಿಂದ ರೂ.28.42 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಈ ಕಾರು, 7, 8 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಲಭ್ಯವಿದೆ. 10.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಸೇರಿದಂತೆ ನಾನಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications