Maruti Suzuki Swift: ಎಲ್ಲರ ಇಷ್ಟದ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ನೂತನ ಎಂಜಿನ್.. 35-40 kmpl ಮೈಲೇಜ್!
ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಮುಂಬರುವ ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಲು ಅತ್ಯಾಧುನಿಕವಾಗಿ ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆ ಬಗ್ಗೆ ಒಂದಷ್ಟು ವಿವರವನ್ನು ತಿಳಿಯೋಣ ಬನ್ನಿ.
ಬಹುತೇಕ ಇದೇ ತಿಂಗಳು ಮಾರುತಿ ಸುಜುಕಿ ತನ್ನ ಜನಪ್ರಿಯ 'ಫ್ರಾಂಕ್ಸ್' ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಆ ಬಳಿಕ, ಮುಂದಿನ ಒಂದೆರಡು ತಿಂಗಳಲ್ಲಿ ಆಫ್ ರೋಡ್ ಎಸ್‌ಯುವಿ 'ಜಿಮ್ಮಿ' 5 ಡೋರ್ ಅನ್ನು ಅದ್ದೂರಿಯಾಗಿ ಲಾಂಚ್ ಮಾಡಲಿದೆ. ಜೊತೆಗೆ ಟೊಯೊಟಾ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿರುವುದರಿಂದ ಇನ್ನೋವಾ ಹೈಕ್ರಾಸ್ ಆಧಾರಿತ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ.

ಇದಿಷ್ಟೇ ಅಲ್ಲದೆ, ಏಳು ಆಸನಗಳ ಗ್ರ್ಯಾಂಡ್ ವಿಟಾರಾ ಹಾಗೂ eVX ಕಾನ್ಸೆಪ್ಟ್ ಒಳಗೊಂಡ ಎಲೆಕ್ಟ್ರಿಕ್ ಎಸ್‌ಯುವಿ ತಯಾರಿಕೆಯಲ್ಲಿಯೂ ತೊಡಗಿದೆ. ಜೊತೆಗೆ ಕಂಪನಿಯು ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿ ಮಾರಾಟ ಮಾಡುವ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳನ್ನು ಮೇಲ್ದರ್ಜೆಗೇರಿಸುತ್ತಿದೆ. ಆ ಬಗ್ಗೆ ಹೇಳುವುದಾದರೆ, ಇವರೆಡು ಕಾರುಗಳು ಹೊಸ ಎಂಜಿನ್ ಆಯ್ಕೆಯನ್ನು ಪಡೆಯುತ್ತಿದ್ದು, ಮುಂದಿನ ವರ್ಷ (2024) ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ.
ಆದರೆ, ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಲಿವೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ವರದಿಗಳ ಪ್ರಕಾರ, ಮಂದಿನ ವರ್ಷದ ಮಧ್ಯಭಾಗದಲ್ಲಿ ಲಾಂಚ್ ಆಗಬಹುದು. ಸ್ವಿಫ್ಟ್, ಡಿಜೈರ್ ಕಾರುಗಳು 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಹೊಸದಾದ 1.2 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಬಹುದು. ಇದು 35-40 kmpl ಮೈಲೇಜ್ ನೀಡಲಿದೆಯಂತೆ.
ಬಹಳ ವರ್ಷಗಳಿಂದ 'ಸ್ವಿಫ್ಟ್' ಸ್ಪೋರ್ಟ್ ಆವೃತ್ತಿಯಾಗಿ ಕಾರು ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ರೀತಿಯ ಎಂಜಿನ್ ತಯಾರಿಕೆಗೆ ಹೆಚ್ಚಿನ ವೆಚ್ಚವಾಗುವುದರಿಂದ ಮಾರುತಿ ಸುಜುಕಿ ಹಿಂದೇಟು ಹಾಕಿಕೊಂಡೆ ಬಂದಿದೆ. ಅಂತೋ ಕಾಲ ಕೂಡಿಬಂದತೆ ಕಾಣುತ್ತಿದ್ದು, 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಹೊಂದಿರುವ ಸ್ವಿಫ್ಟ್ RS ಆವೃತ್ತಿ ಬಿಡುಗಡೆ ಮಾಡಲು ಕಂಪನಿ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ಮಾತನಾಡೋಣ. ಇದು ರೂ.5.99 ಲಕ್ಷದಿಂದ ರೂ. 9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದ್ದು, ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 22.38 - 22.56 kmpl ಮೈಲೇಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಮತ್ತು ಎಲ್ಇಡಿ ಹೆಡ್‌ಲೈಟ್ಸ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಡಿಸೈರ್, ರೂ.6.51 - ರೂ.9.39 ಲಕ್ಷ ಬೆಲೆಯಲ್ಲಿಸಿಗಲಿದೆ. ಇದರ 1.2 ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್ 90 PS ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಹೊಂದಿದೆ. CNG ಕಿಟ್ ಹೊಂದಿರುವ ಕಾರು, 77 PS ಪವರ್, 98.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 22.41 - 22.61 kmpl ಮೈಲೇಜ್ ನೀಡುತ್ತದೆ.
ಒಟ್ಟಾರೆಯಾಗಿ, ಪ್ರಸ್ತುತ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಸ್ವಿಫ್ಟ್, ಡಿಸೈರ್ ಕಾರಿಗೆ ಹೋಲಿಸಿದರೆ, ಮುಂಬರಲಿರುವ ಹೊಸ ತಲೆಮಾರಿನ ಕಾರುಗಳ ಮೈಲೇಜ್ ದುಪ್ಪಟ್ಟಿರಲಿದೆ ಎಂದು ಹೇಳಲಾಗಿದ್ದು, ಇವುಗಳಿಗೆ ಗ್ರಾಹಕರು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿ ಕಾಯಬೇಕಾಗಿದೆ. ಜೊತೆಗೆ ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ದೊರೆಯುವ ನಿರೀಕ್ಷೆಯಿದ್ದು, ಹೆಚ್ಚಿನ ಖರೀದಿದಾರರಿಗೆ ಇಸ್ಟವಾಗುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications