ಕಮ್ಮಿ ಪೆಟ್ರೋಲ್ ಬಳಕೆಯ ಮಾರುತಿ ಸುಜುಕಿ ವ್ಯಾಗನ್ಆರ್ ಬರುತ್ತೆ: ದಿನಾಂಕ ನಿಗದಿ!
ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ, ತನ್ನ ಮುಂಬರುವ ಫ್ಲೆಕ್ಸ್ ಫ್ಯುಯೆಲ್ ಚಾಲಿತ ವ್ಯಾಗನ್ಆರ್ ಬಿಡುಗಡೆ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಇದು ಕಡಿಮೆ ಪೆಟ್ರೋಲ್ ಬಳಕೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡಲಿದ್ದು, ಆ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.
ಹೆಚ್ಚುತ್ತಿರುತ್ತಿರುವ ವೆಚ್ಚಕ್ಕೆ ಕಡಿವಾಣ ಹಾಕಲು ಮಾರುತಿ ಸುಜುಕಿ, ತನ್ನ ಲೈನ್-ಅಪ್ ನಿಂದ ಡಿಸೇಲ್ ಎಂಜಿನ್ ಚಾಲಿತ ಕಾರುಗಳ ಉತ್ಪಾದನೆಯನ್ನು ಈಗಾಗಲೇ ನಿಲ್ಲಿಸಿದ್ದು, ತನ್ನ ಗಮನವನ್ನು ಪೆಟ್ರೋಲ್, ಹೈಬ್ರಿಡ್ ಹಾಗೂ ಎಲ್‌ಪಿಜಿ ಎಂಜಿನ್ ಚಾಲಿತ ಕಾರುಗಳ ಮೇಲೆ ಹರಿಸಿದೆ. ಇದೀಗ ಫ್ಲೆಕ್ಸ್ ಫ್ಯುಯೆಲ್ ಚಾಲಿತ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಕಳೆದ ತಿಂಗಳು ಮುಕ್ತಾಯಗೊಂಡ ಬಹುನೀರಿಕ್ಷಿತ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಇದೇ ಎಂಜಿನ್ (flex fuel) ಆಧಾರಿತ ವ್ಯಾಗನ್ಆರ್ ಕಾರನ್ನು ಪ್ರದರ್ಶಿಸಿತ್ತು. ಈ ಕಾರು 2025ಕ್ಕೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಬಹುತೇಕರಿಗೆ 'ಫ್ಲೆಕ್ಸ್ ಫ್ಯುಯೆಲ್' ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಹೀಗೆಂದರೇ, ಎಥೆನಾಲ್ (ಜೈವಿಕ ಇಂಧನ) ಪೆಟ್ರೋಲ್ ಮಿಶ್ರಣ ಎಂದರ್ಥ. ಫ್ಲೆಕ್ಸ್ ಫ್ಯುಯೆಲ್ ಮೂಲಕ ಚಲಿಸುವ ಕಾರುಗಳಲ್ಲಿ ಶೇಕಡ 20% ಎಥೆನಾಲ್ (E20) ಹಾಗೂ ಶೇಕಡ 80% (E85) ಪೆಟ್ರೋಲ್ ಉಪಯೋಗ ಮಾಡಲಾಗುತ್ತದೆ. ಈ ರೀತಿಯ ಕಾರುಗಳನ್ನು ಅಭಿವೃದ್ಧಿಪಡಿಸುವುದರಿಂದ ಕಚ್ಚಾ ತೈಲದ ಆಮದು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ನಮ್ಮ ಕೃಷಿ ಕ್ಷೇತ್ರಕ್ಕೆ ಉತ್ತೇಜನ ದೊರೆತು ಆರ್ಥಿಕತೆ ಸುಧಾರಿಸುತ್ತದೆ. ಎಥೆನಾಲ್ ಇಂಧನವನ್ನು ಕೃಷಿ ತ್ಯಾಜ್ಯಗಳಿಂದ ತಯಾರಿಸಲಾಗುತ್ತದೆ.
ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಫ್ಲೆಕ್ಸ್ ಫ್ಯುಯೆಲ್ ಚಾಲಿತ ವ್ಯಾಗನ್ಆರ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಸ್ತುತ ಖರೀದಿಗೆ ದೊರೆಯುವ ಕಾರಿನಂತೆಯೇ ಕಾರ್ಯಕ್ಷಮತೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.100ಕ್ಕಿಂತ ಹೆಚ್ಚಿದ್ದು, 1 ಲೀಟರ್ ಡಿಸೇಲ್ ಬೆಲೆ ರೂ.90 ಆಗಿದೆ. ಆದರೆ, ಎಥೆನಾಲ್ ದರ ತುಂಬಾ ಕಡಿಮೆ ಇದ್ದು, ಲೀಟರ್ ಗೆ ರೂ.62.65 ಇದೆ. ಹಾಗಾಗಿ, ಎಥನಾಲ್ ವಿಶ್ರಿತ ಪೆಟ್ರೋಲ್ ಬಳಸುವುದರಿಂದ ಇಂಧನ ವೆಚ್ಚವನ್ನು ಗಣನೀಯವಾಗಿ ಇಳಿಕೆಯಾಗುತ್ತದೆ.
ಇಷ್ಟೇಅಲ್ಲದೆ, ಮಾರುತಿ ಸುಜುಕಿ, 2025ರ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. 2030ರೊಳಗೆ ತನ್ನ ಒಟ್ಟು ಮಾರಾಟ ಪ್ರಮಾಣದಲ್ಲಿ ಶೇಕಡ 15% ಎಲೆಕ್ಟ್ರಿಕ್ ಕಾರುಗಳು, 25% ಹೈಬ್ರಿಡ್ ಕಾರುಗಳು ಹಾಗೂ ಶೇಕಡ 60% ಎಲ್‌ಪಿಜಿ ಒಳಗೊಂಡಂತೆ ICE ಚಾಲಿತ ಕಾರುಗಳು ಹೊಂದಿರುವ ಗುರಿಯನ್ನು ಹಾಕಿಕೊಂಡಿದ್ದು, ಅದರ ಭಾಗವಾಗಿ ಫ್ಲೆಕ್ಸ್ ಫ್ಯುಯೆಲ್ ಆಧಾರಿತ ವ್ಯಾಗನ್ಆರ್ ಕಾರನ್ನು 2025ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
ಸದ್ಯ, ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ವ್ಯಾಗನ್ಆರ್ ರೂ.5.53 ಲಕ್ಷದಿಂದ ರೂ.7.41 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದ್ದು, ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಪಡೆದಿದೆ. ಅವುಗಳೆಂದರೆ, 1-ಲೀಟರ್ ಯುನಿಟ್, 67 PS ಪವರ್ ಹಾಗೂ 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 1.2-ಲೀಟರ್ ಯುನಿಟ್, 90 PS ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.
ಈ ನೂತನ ಮಾರುತಿ ಸುಜುಕಿ ವ್ಯಾಗನ್ಆರ್ CNG ಕಿಟ್ ಅನ್ನು ಒಳಗೊಂಡಿದ್ದು, 34.05km/kg ಮೈಲೇಜ್ ನೀಡುತ್ತದೆ. ಪೆಟ್ರೋಲ್ ಅವೃತ್ತಿ 24.43kmpl ಮೈಲೇಜ್ ಕೊಡುತ್ತದೆ. ಈ ಕಾರು ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಸೇರಿ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯೆಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.
ಹೆಚ್ಚುತ್ತಿರುವ ಇಂಧನ ವೆಚ್ಚದಿಂದ ಗ್ರಾಹಕರಿಗೆ ಮುಕ್ತಿ ನೀಡಲು ಮಾರುತಿ ಸುಜುಕಿ ಫ್ಲೆಕ್ಸ್ ಫ್ಯುಯೆಲ್ ಚಾಲಿತ ವ್ಯಾಗನ್ಆರ್ ಅಭಿವೃದ್ಧಿಪಡಿಸುತ್ತಿದೆ. ಇದು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿದ್ದು, ಖರೀದಿದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಜೊತೆಗೆ ಈ ನೂತನ ವ್ಯಾಗನ್ಆರ್ ಕೂಡ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ವ್ಯಾಗನ್ಆರ್ ರೀತಿಯೇ ಕಡಿಮೆ ಬೆಲೆಯನ್ನು ಹೊಂದಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸಬಹುದು. ಈಗಾಗಲೇ ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಫ್ಲೆಕ್ಸ್ ಫ್ಯುಯೆಲ್ ಚಾಲಿತ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತವೆ.


Click it and Unblock the Notifications