Monsoon Car Offers: ದೊಡ್ಡ ದೊಡ್ಡ ಕಂಪನಿಗಳಿಂದ ಭಾರೀ ಡಿಸ್ಕೌಂಟ್ ಘೋಷಣೆ
ವಿಶ್ವದಲ್ಲಿಯೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಭಾರತ ಹೊಂದಿದೆ. ಈ ಮಾನ್ಸೂನ್ ಅವಧಿಯಲ್ಲೂ (ಜೂನ್) ಮಾರುತಿ ಸುಜುಕಿ ಹಾಗೂ ಹುಂಡೈ ಕಂಪನಿಗಳು ತಮ್ಮ ಮಾರಾಟವನ್ನು ದ್ವಿಗುಣಗೊಳಿಸಿಕೊಳ್ಳಲು ಭರ್ಜರಿ ರಿಯಾಯಿತಿ ಘೋಷಿಸಿವೆ. ಯಾವ ಕಾರು ಎಷ್ಟು ಡಿಸ್ಕೌಂಟ್ ಪಡೆದಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮೊದಲಿಗೆ ಮಾರುತಿ ಸುಜುಕಿ ನೀಡಿರುವ ರಿಯಾಯಿತಿ ಬಗ್ಗೆ ಮಾತನಾಡೋಣ. ಕಂಪನಿಯು ನೆಕ್ಸಾ ಡೀಲರ್ ಶಿಪ್ ಮೂಲಕ ಸೇಲ್ ಮಾಡುವ ಕೈಗೆಟುಕುವ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಇಗ್ನಿಸ್ ದೊಡ್ಡಮಟ್ಟದ ರಿಯಾಯಿತಿ ಕೊಡುಗೆಯನ್ನು ಪಡೆದಿದೆ. ಇಗ್ನಿಸ್ MT ಹಾಗೂ AGS ರೂಪಾಂತರಗಳು ರೂ.35,000 ನಗದು ರಿಯಾಯಿತಿ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಹೊಂದಿದೆ. ಈ ಕಾರು, ರೂ.5.84 ಲಕ್ಷದಿಂದ ರೂ.8.16 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ಜನಪ್ರಿಯ ಬಲೆನೊ ಕಾರು ಸಹ ಉತ್ತಮ ಡಿಸ್ಕೌಂಟ್ ಹೊಂದಿದೆ. ಇದರ ಸಿಗ್ಮಾ, ಝೀಟಾ, ಆಲ್ಪಾ (MT + AT) CNG ರೂಪಾಂತರಗಳು ರೂ.10,000 ನಗದು ರಿಯಾಯಿತಿ ಒಳಗೊಂಡಂತೆ ಹಲವು ಪ್ರಯೋಜನಗಳನ್ನು ಹೊಂದಿವೆ. ಈ ಕಾರು, ರೂ.6.61 ಲಕ್ಷದಿಂದ ರೂ.9.88 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಲಿದ್ದು, 22.35 - 22.94 kmpl ಮೈಲೇಜ್ ಕೊಡಲಿದೆ.
ಮಾರುತಿ ಸುಜುಕಿಯ ಸಿಯಾಜ್ ಕಾರಿನ ಯಾವುದೇ ರೂಪಾಂತರಗಳು ಕ್ಯಾಶ್ ಡಿಸ್ಕೌಂಟ್ ಪಡೆದಿಲ್ಲ. ಕೇವಲ ಕಾಪೋರೇಟ್ ರಿಯಾಯಿತಿ ಹಾಗೂ ಫ್ಲಾಟ್ ಬೋನಸ್ ಅನ್ನು ಹೊಂದಿವೆ. ಈ ಕಾರು, ರೂ.9.30 ಲಕ್ಷದಿಂದ ರೂ.12.29 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.3,000 ಕಾಪೋರೇಟ್ ಡಿಸ್ಕೌಂಟ್ ಹಾಗೂ ರೂ.25,000 ಫ್ಲಾಟ್ ಬೋನಸ್ ಅನ್ನು ಪಡೆದಿದೆ.

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಸಹ ತನ್ನ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಗ್ರಾಂಡ್ ಐ10 ನಿಯೋಸ್ ರೂ.25,000 ಕ್ಯಾಶ್ ಡಿಸ್ಕೌಂಟ್, ರೂ.10,000 ಎಕ್ಸ್ಚೇಂಜ್ ಬೋನಸ್, ರೂ.3,000 ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿದೆ. ಈ ಕಾರು, ರೂ.5.73 ಲಕ್ಷದಿಂದ ರೂ.8.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಹುಂಡೈನ ಮತ್ತೊಂದು ಕಾರಾಗಿರುವ ಔರಾ ಪಡೆದಿರುವ ಡಿಸ್ಕೌಂಟ್ ಆಫರ್ ಬಗ್ಗೆ ಹೇಳುವುದಾದರೆ, ಈ ಕಾರು, ರೂ.20,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.3,000 ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿದೆ. ಇದು, ರೂ.6.33 ಲಕ್ಷದಿಂದ ರೂ.8.90 ಲಕ್ಷ ಬೆಲೆಗೆ ಖರೀದಿಗೆ ಸಿಗುತ್ತದೆ. ಜೊತೆಗೆ ಪೆಟ್ರೋಲ್ ಹಾಗೂ CNG ಆಯ್ಕೆಯಲ್ಲಿ ದೊರೆಯುತ್ತದೆ.

ಐ20 ಹುಂಡೈ ಕಂಪನಿ ಪ್ರಮುಖ ಕಾರಾಗಿದೆ. ಇದು, ರೂ.10,000 ನಗದು ರಿಯಾಯತಿ ಹಾಗೂ ರೂ.10,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಹೊಂದಿದೆ. ಈ ಕಾರು, ರೂ.7.46 ಲಕ್ಷದಿಂದ ರೂ.11.88 ಲಕ್ಷ ಬೆಲೆಯಲ್ಲಿ ದೊರೆಯುತ್ತದೆ. 1.2-ಲೀಟರ್ ಪೆಟ್ರೋಲ್ ಹಾಗೂ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 19.65 - 21.0 kmpl ಮೈಲೇಜ್ ನೀಡುತ್ತದೆ.
ಒಟ್ಟಾರೆ, ಮಾರುತಿ ಸುಜುಕಿ ಹಾಗೂ ಹುಂಡೈ ಕಂಪನಿಗಳು ಈ ಮಾನ್ಸೂನ್ ಅವಧಿಯಲ್ಲೂ ತಮ್ಮ ಮಾರಾಟವನ್ನು ದ್ವಿಗುಣಗೊಳಿಕೊಳ್ಳಲು ಭರ್ಜರಿ ಡಿಸ್ಕೌಂಟ್ ನೀಡಿರುವುದು ಉತ್ತಮ ಬೆಳೆವಣಿಗೆಯಾಗಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಈ ರಿಯಾಯತಿ ಸೌಲಭ್ಯಗಳಲ್ಲಿ ಎಲ್ಲ ರಾಜ್ಯದಲ್ಲೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡುವುದು ಉತ್ತಮ.


Click it and Unblock the Notifications








