ಕಾರು ಖರೀದಿಗೂ ಮುನ್ನ ಒಮ್ಮೆ ಈ 10 ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಶೀಲಿಸಿ
ಕಾರನ್ನು ಖರೀದಿಸುವಾಗ ಬಹುತೇಕ ಜನರು ಕಾರಿನ ಮೈಲೇಜ್ ಮತ್ತು ಫೀಚರ್ಸ್‌ಗಳನ್ನೇ ಹೆಚ್ಚಾಗಿ ನೋಡುತ್ತಾರೆ, ಆದರೆ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಯೋಚಿಸುವುದಿಲ್ಲ. ಕಾರಿನಲ್ಲಿ ಸುರಕ್ಷತಾ ವೈಶಿಷ್ಟ್ಯಗಳ ಕೊರತೆ ಇದ್ದಲ್ಲಿ ಪ್ರಯಾಣದ ವೇಳೆ ಅಪಘಾತವಾದರೆ ಗಂಭೀರ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಶೀಲಿಸಿ.
1. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು
ಭಾರತದಲ್ಲಿ ಈಗ ಕಾರುಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಕಾರು ಕಂಪನಿಗಳು ಎಂಟ್ರಿ ಲೆವೆಲ್ ಕಾರುಗಳಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್ ಜೊತೆಗೆ ಫ್ರಂಟ್ ಪ್ಯಾಸೆಂಜರ್, ಸೈಡ್ ಪ್ಯಾಸೆಂಜರ್ ಏರ್‌ಬ್ಯಾಗ್ ಅನ್ನು ಸಹ ನೀಡುತ್ತಿವೆ. ಅಪಘಾತದ ಸಮಯದಲ್ಲಿ ಗಂಭೀರವಾದ ಗಾಯಗಳಿಂದ ಕಾರಿನ ಚಾಲಕ ಮತ್ತು ಪ್ರಯಾಣಿಕರನ್ನು ಈ ಏರ್‌ಬ್ಯಾಗ್‌ಗಳು ರಕ್ಷಿಸುತ್ತವೆ. ಇವು ಘರ್ಷಣೆಯಾದಾಗ ವೇಗವಾಗಿ ಪ್ರತಿಕ್ರಿಯಿಸುತ್ತವೆ.

2 . ಸ್ಪೀಡ್ ಸೆನ್ಸಿಂಗ್ ಡೋರ್‌ಲಾಕ್
ಸ್ಪೀಡ್ ಸೆನ್ಸಿಂಗ್ ಡೋರ್‌ಲಾಕ್ ಇಂದಿನ ಕಾರುಗಳಲ್ಲಿ ಕಂಡುಬರುವ ಒಂದು ಪ್ರಮುಖ ವೈಶಿಷ್ಟ್ಯವಾಗಿದೆ. ಕಾರನ್ನು ಸ್ಟಾರ್ಟ್ ಮಾಡಿದ ಕೂಡಲೇ ಡೋರ್‌ಗಳನ್ನು ಸರಿಯಾಗಿ ಲಾಕ್ ಮಾಡಲು ಮರೆತರೆ, ಈ ವೈಶಿಷ್ಟ್ಯವು ಕಾರು ನಿರ್ದಿಷ್ಟ ವೇಗವನ್ನು ತಲುಪಿದ ತಕ್ಷಣ ಸ್ವಯಂಚಾಲಿತವಾಗಿ ಬಾಗಿಲುಗಳನ್ನು ಲಾಕ್ ಮಾಡುತ್ತದೆ. ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುವ ವೇಳೆ ಈ ವೈಶಿಷ್ಟ್ಯವು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಒಮ್ಮೆ ಈ ವೈಶಿಷ್ಟ್ಯವನ್ನು ಪರಿಶೀಲಿಸಿ.
3. ಸೀಟ್ ಬೆಲ್ಟ್ ಪ್ರಿ-ಟೆನ್ಷನರ್
ಸೀಟ್ ಬೆಲ್ಟ್ ಪ್ರಿ-ಟೆನ್ಷನರ್ ಅಪಘಾತದ ಸಮಯದಲ್ಲಿ ಪ್ರಯಾಣಿಕರಿಗೆ ಸೀಟಿನಲ್ಲಿ ಉಳಿಯಲು ಸಹಾಯ ಮಾಡುತ್ತದೆ. ಸೀಟ್‌ಬೆಲ್ಟ್ ಪ್ರಿ-ಟೆನ್ಷನರ್ ಹಠಾತ್ ಬ್ರೇಕ್ ಹೊಡೆದಾಗ ಅಥವಾ ಕ್ರ್ಯಾಶ್ ಆದಾಗ ಸೀಟಿನಲ್ಲಿ ಪ್ರಯಾಣಿಕರನ್ನು ಸ್ಥಿರವಾಗಿರಿಸುತ್ತದೆ. ಇದು ಪ್ರಯಾಣಿಕರಿಗೆ ಗಂಭೀರ ಗಾಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಪಘಾತದಲ್ಲಿ ಕಾರು ಪಲ್ಟಿಯಾಗುವ ಪರಿಸ್ಥಿತಿಯಲ್ಲಿಯೂ ಸೀಟ್ ಬೆಲ್ಟ್ ಪ್ರಯಾಣಿಕರನ್ನು ಸೀಟ್ನಿಂದ ಬೇರ್ಪಡಿಸುವುದಿಲ್ಲ. ಈ ದಿನಗಳಲ್ಲಿ ಎಲ್ಲಾ ಕಾರುಗಳಲ್ಲಿ ಸೀಟ್ ಬೆಲ್ಟ್ ಪ್ರಿ-ಟೆನ್ಷನರ್‌ಗಳನ್ನು ಒದಗಿಸಲಾಗುತ್ತಿದೆ.
4. ಎಬಿಎಸ್-ಇಬಿಡಿ
ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ (ABS) ಹಠಾತ್ ಬ್ರೇಕ್ ಹೊಡೆದಾಗ ಕಾರಿನ ಚಕ್ರಗಳು ಲಾಕ್ ಆಗುವುದನ್ನು ತಡೆಯುತ್ತವೆ, ಆ ಮೂಲಕ ಕಾರು ನಿಯಂತ್ರಣ ತಪ್ಪದಂತೆ ತಡೆಯುತ್ತವೆ. ಈ ಮೂಲಕ ಚಾಲಕನಿಗೆ ಕಾರನ್ನು ತಿರುಗಿಸಲು ಮತ್ತು ಅಪಾಯವನ್ನು ತಪ್ಪಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ. ಎಬಿಎಸ್ ಜೊತೆಗೆ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (ಇಬಿಎಸ್) ಅನ್ನು ಸಹ ಒದಗಿಸಲಾಗುತ್ತದೆ. ಈ ವ್ಯವಸ್ಥೆಯು ಚಾಲಕನು ಬ್ರೇಕ್ ಹಾಕಿದಾಗ ಎಲ್ಲಾ ನಾಲ್ಕು ಚಕ್ರಗಳಲ್ಲಿ ಬ್ರೇಕಿಂಗ್ ಒತ್ತಡವನ್ನು ಸಮಾನವಾಗಿ ವಿತರಿಸುತ್ತದೆ, ಇದರಿಂದಾಗಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಕಾರು ನಿಯಂತ್ರಣ ತಪ್ಪುವುದಿಲ್ಲ.
5. ಸ್ಪೀಡ್ ಸೆನ್ಸಿಂಗ್ ಡೋರ್ ಅನ್ಲಾಕ್
ಕಾರು ಅಪಘಾತದ ಸಂದರ್ಭದಲ್ಲಿ ಸ್ಪೀಡ್ ಸೆನ್ಸಿಂಗ್ ಡೋರ್ ಅನ್ಲಾಕ್ ವ್ಯವಸ್ಥೆಯು ಉಪಯುಕ್ತವಾಗಿದೆ. ಕಾರು ಅಪಘಾತದ ಸಂದರ್ಭದಲ್ಲಿ, ಕಾರಿನ ಸ್ಥಾನವನ್ನು ಅವಲಂಬಿಸಿ ಸಿಸ್ಟಮ್ ಸ್ವಯಂಚಾಲಿತವಾಗಿ ಡೋರ್‌ಗಳನ್ನು ಅನ್ಲಾಕ್ ಮಾಡುತ್ತದೆ, ಇದು ಒಳಗಿರುವ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಬೇಗ ಕಾರಿನಿಂದ ಹೊರಬರಲು ಸಹಾಯ ಮಾಡುತ್ತದೆ. ಒಂದು ವೇಳೆ ಅಪಘಾತವಾಗಿ ಸ್ಪೋಟಿಸುವ ಸಂಭವವಿದ್ದರೇ ಕೂಡಲೇ ಇಳಿದು ಪ್ರಾಣಾಪಾಯದಿಂದ ಪಾರಾಗಬಹುದು.
6. ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು ಕಾರನ್ನು ಇಕ್ಕಟ್ಟಿನ ಜಾಗದಲ್ಲಿ ಪಾರ್ಕಿಂಗ್ ಮಾಡುವಾಗ ಅತ್ಯುತ್ತಮವಾಗಿ ಸಹಕರಿಸುತ್ತವೆ. ಕಾರು ನಿಲ್ಲಿಸಿದಾಗ ಮಾತ್ರವಲ್ಲ, ಕಾರಿನ ಹಿಂದೆ ವ್ಯಕ್ತಿ ಇದ್ದರೆ, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಅಲಾರಂ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ. ಈ ಮೂಲಕ ಚಾಲಕ ಹಿಂದೆ ಏನಿದೆ ಎಂಬ ಆತಂಕವಿಲ್ಲದೆ ರಿವರ್ಸ್ ನಲ್ಲಿ ಬರಬಹುದು. ಹಾಗೆಯೇ ಯಾವುದೇ ತಲೆಬಿಸಿಯಿಲ್ಲದೇ ಇಕ್ಕಟ್ಟಿನ ಪ್ರದೇಶಗಳಲ್ಲಿ ತಮ್ಮ ಕಾರುಗಳನ್ನು ಪಾರ್ಕ್ ಮಾಡಬಹುದು.
7. ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್
ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್ ಕಾರನ್ನು ಕಾರ್ನರ್ ಭಾಗಗಳಲ್ಲಿ ಹೆಚ್ಚಿನ ವೇಗದಲ್ಲಿ ತಿರುಗಿಸುವಾಗ ಕಾರಿನ ನಿಯಂತ್ರಣವನ್ನು ಈ ವೈಶಿಷ್ಟ್ಯ ಉತ್ತಮವಾಗಿ ನಿರ್ವಹಿಸುತ್ತದೆ. ಇದು ರಸ್ತೆಯ ಮೂಲೆಗಳಲ್ಲಿ ವೇಗವಾಗಿ ತಿರುಗಿಸುವಾಗ ಸಾಧ್ಯವಾದಷ್ಟು ಕಾರು ಪಲ್ಟಿಯಾಗುವುದನ್ನು ಮತ್ತು ಸ್ಕಿಡ್ ಆಗುವುದನ್ನು ತಡೆಯುತ್ತದೆ. ಕಾರು ಇದ್ದಕ್ಕಿದ್ದಂತೆ ಬ್ರೇಕ್ ಮಾಡಿದಾಗ, ಈ ವ್ಯವಸ್ಥೆಯು ಕಾರಿನ ಚಕ್ರಗಳ ವೇಗಕ್ಕೆ ಅನುಗುಣವಾಗಿ ಬ್ರೇಕ್ ಫೋರ್ಸ್ ಅನ್ನು ವಿತರಿಸುತ್ತದೆ.
8. ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ
ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ನಂತೆಯೇ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಕೂಡ ಕಾರನ್ನು ಪಾರ್ಕಿಂಗ್ ಮಾಡುವಾಗ ಸಹಕರಿಸುತ್ತದೆ. ರಿವರ್ಸ್ ಗೇರ್ ತೊಡಗಿಸಿಕೊಂಡ ತಕ್ಷಣ, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸಕ್ರಿಯಗೊಳ್ಳುತ್ತದೆ. ಕಾರಿನ ಒಳಗಿನ ಡಿಸ್ಪ್ಲೇಯಲ್ಲಿ ನೀವು ಹಿಂಬದಿಯ ನೋಟವನ್ನು ನೋಡಬಹುದು. ಕಾರನ್ನು ಪಾರ್ಕಿಂಗ್ ಮಾಡುವಾಗ ಈ ವೈಶಿಷ್ಟ್ಯವು ಉಪಯುಕ್ತ ಎಂದೇ ಹೇಳಬಹುದು. ಸೈಡ್ ಮಿರರ್ ಹಾಗೂ ತಲೆ ಆಚೆ ಹಾಕಿ ನೋಡುವ ಅಗತ್ಯವಿರುವುದಿಲ್ಲ.
9. ಬಲವರ್ಧಿತ ಬಿ-ಪಿಲ್ಲರ್
ಕಾರಿಗೆ ಹೆಚ್ಚಿನ ಹಾನಿಯು ಮುಖಾಮುಖಿ ಘರ್ಷಣೆಯಲ್ಲಿ ಸಂಭವಿಸುತ್ತದೆ. ಈಗ ಬರುತ್ತಿರುವ ಬಹುತೇಕ ಕಾರುಗಳ A ಮತ್ತು B ಪಿಲ್ಲರ್‌ಗಳು ಬಲವರ್ಧಿತ ಉಕ್ಕಿನಿಂದ ಮಾಡಲ್ಪಟ್ಟಿರುತ್ತದೆ, ಇದು ಮುಂಭಾಗದಿಂದ ಕಾರಿನ ರಚನೆಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಕಾರಿನಲ್ಲಿ ಬಲವರ್ಧಿತ ಉಕ್ಕಿನ ಬಳಕೆಯು ಕಾರಿನ ಕ್ರ್ಯಾಶ್ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಡಿಕ್ಕಿಯಾದರೂ ಒಳಗಿನ ಪ್ರಯಾಣಿಕರಿಗೆ ಗರಿಷ್ಟ ಸುರಕ್ಷತೆಯನ್ನು ಇದು ಖಚಿತಪಡಿಸುತ್ತದೆ.
10. ಐಸೊಫಿಕ್ಸ್ ಚೈಲ್ಡ್ ಆಂಕರ್
ಇದು ನವಜಾತ ಶಿಶುಗಳು ಮತ್ತು ಮಕ್ಕಳಿಗೆ ಇಂದಿನ ಕಾರುಗಳಲ್ಲಿ ಕಂಡುಬರುವ ಪ್ರಮುಖ ಸುರಕ್ಷತಾ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯವನ್ನು ಭಾರತದಲ್ಲಿನ ಪ್ರವೇಶ ಮಟ್ಟದ ಕಾರುಗಳಲ್ಲಿ ನೀಡುವುದಿಲ್ಲ. ಐಸೊಫಿಕ್ಸ್ ಚೈಲ್ಡ್ ಆಂಕರ್ ಸಹಾಯದಿಂದ, ಮಗುವಿನ ಆಸನವನ್ನು ಕಾರಿನಲ್ಲಿ ಅಡ್ಜಸ್ಟ್ ಮಾಡಬಹುದು. ಈ ಆಸನದ ಬಳಕೆಯು ಕಾರಿನಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ.


Click it and Unblock the Notifications








