Maruti Suzuki Swift: ಅಪಘಾತವೆಂಬುದು ದೂರದ ಮಾತು, ನೂತನ ಮಾರುತಿ ಸ್ವಿಫ್ಟ್‌ನಲ್ಲಿ ADAS.. ವಿಶೇಷತೆಗಳೇನು?
ಟೋಕಿಯೊದಲ್ಲಿ ಇತ್ತೀಚೆಗೆ ಮುಕ್ತಗೊಂಡ ಜಪಾನೀಸ್ ಮೊಬಿಲಿಟಿ ಶೋನಲ್ಲಿ ಸುಜುಕಿ (Suzuki), ನಾಲ್ಕನೇ ತಲೆಮಾರಿನ ಸ್ವಿಫ್ಟ್ (fourth-generation Swift) ಕಾರನ್ನು ಪ್ರದರ್ಶನಗೊಳಿಸಿತ್ತು. ಅಂದಿನಿಂದ ಈ ಕಾರು ಸಖತ್ ಹೈಪ್ ಕ್ರೆಯೆಟ್ ಮಾಡಿದೆ. ಭಾರತದಲ್ಲಿ ಬಿಡುಗಡೆಯಾಗುವ ನೂತನ (2024) ಮಾರುತಿ ಸುಜುಕಿ ಸ್ವಿಫ್ಟ್ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿರಲಿದೆ ಎಂದು ಹೇಳಲಾಗಿದೆ.
ಈ ಕಾರು, ದೇಶೀಯ ಮಾರುಕಟ್ಟೆಯಲ್ಲಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕಂಪನಿ ಕಡೆಯಿಂದ ಅಧಿಕೃತವಾಗಿ ದೃಢಪಟ್ಟಿಲ್ಲ. ಪರೀಕ್ಷಾರ್ಥ ಸಂಚಾರ ನಡೆಸುವಾಗ ಸ್ವಿಫ್ಟ್ ಕಾರು ಎಡಿಎಎಸ್ ರಾಡಾರ್ ಕಟ್-ಔಟ್ ಅನ್ನು ಹೊಂದಿತ್ತು ಎಂಬುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಎಡಿಎಎಸ್ ವೈಶಿಷ್ಟ್ಯವನ್ನು ಪಡೆಯಬಹುದಾದ ಕಾರಣ, ಅದರಲ್ಲಿ ಹಲವು ಸುರಕ್ಷತಾ ಅಂಶಗಳಿರಲಿವೆ. ಪ್ರಮುಖವಾಗಿ ಡ್ಯುಯಲ್ ಸೆನ್ಸರ್ ಬ್ರೇಕ್ ಸಪೋರ್ಟ್ (Dual Sensor Brake Support) ಇರಲಿದ್ದು, ಹೆದ್ದಾರಿಯಲ್ಲಿ ಸಾಕಷ್ಟು ಪ್ರಯೋಜನಕ್ಕೆ ಬರುತ್ತದೆ. ಕ್ಯಾಮೆರಾ ಮತ್ತು ಲೇಸರ್ ಸೆನ್ಸರ್ ಬಳಸಿ ವಾಹನ ಹಾಗೂ ಪಾದಚಾರಿಗಳನ್ನು ಪತ್ತೆ ಹಚ್ಚಲು ನೇರವಾಗಲಿದೆ. ಕಠಿಣ ಸನ್ನಿವೇಶದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್ ಬೀಳುತ್ತದೆ.
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (Adaptive Cruise Control)ನಂತಹ ಮತ್ತೊಂದು ಸೇಫ್ಟಿ ವೈಶಿಷ್ಟ್ಯವು ಇದರಲ್ಲಿ ಅಡಕವಾಗಿರಲಿದ್ದು, ಮುಂಭಾಗ ಹೋಗುತ್ತಿರುವ ವಾಹನವನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಅಂತರವನ್ನು ಕಾಪಾಡುವುದರೊಂದಿಗೆ ವೇಗವನ್ನು ನಿಯಂತ್ರಿಸುತ್ತದೆ. ಜೊತೆಗೆ ಪಥ ಬದಲಾವಣೆ ವೇಳೆಯಲ್ಲಿಯೂ ನೆರವಾಗುತ್ತದೆ. ವಿಶೇಷವಾಗಿ ಡ್ರೈವರ್ ಮಾನಿಟರಿಂಗ್ ಸಿಸ್ಟಮ್ (Driver Monitoring System) ಅನ್ನು ಒಳಗೊಂಡಿರಲಿದೆ.

ಇದಕ್ಕಾಗಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಕ್ಕದಲ್ಲಿ ಕ್ಯಾಮೆರಾಗಳಿರಲಿದ್ದು, ಈ ಸಿಸ್ಟಮ್, ಚಾಲಕನ ಮುಖಭಾವ, ಕಣ್ಣಿನ ಚಾಲನೆ ಹಾಗೂ ಆತ ನಿದ್ರಾ ವ್ಯವಸ್ಥೆಯಲ್ಲಿ ಇದ್ದಾನೆಯೇ ಎಂಬುದನ್ನು ಪತ್ತೆ ಮಾಡಿ, ಎಚ್ಚರಿಸುತ್ತದೆ. ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್ ಕೂಡ ಇರಲಿದೆ. ಇದು ಹೆಡ್‌ಲೈಟ್ ಜೊತೆ ಸಂಯೋಜನೆಗೊಂಡಿರಲಿದ್ದು, ರಸ್ತೆಯಲ್ಲಿ ಉತ್ತಮ ಗೋಚರತೆ ಹೆಚ್ಚಿರುವಂತೆ ನೋಡಿಕೊಂಡು ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಸಹಾಯಕವಾಗಿದೆ.
ಮುಂದಿನ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್, ಹೊಸದಾದ 1.2 - ಲೀಟರ್, 3 - ಸಿಲಿಂಡರ್, ಝಡ್12ಇ ಎಂಜಿನ್ ಹೊಂದಿರಲಿದೆ. ಸದ್ಯಕ್ಕೆ ಪವರ್ ಉತ್ಪಾದನೆ ಬಗ್ಗೆ ವಿವರಗಳಿಲ್ಲ. ಆದರೂ 100 bhp ಪವರ್, 150 Nm ಪೀಕ್ ಟಾರ್ಕ್ ಹೊರಹಾಕಬಹುದು. ಸಿವಿಟಿ ಗೇರ್ ಬಾಕ್ಸ್, ಆಯ್ಕೆಯಲ್ಲೂ ಸಿಗಬಹುದು ಹೇಳಲಾಗಿದೆ.

ಈ ಮಾರುತಿ ಸುಜುಕಿ ಸ್ವಿಫ್ಟ್ ಮೈಲೇಜ್ ಬಗ್ಗೆ ಒಂದಷ್ಟು ಮಾಹಿತಿ ಸೋರಿಕೆಯಾಗಿದೆ. ಇದು, ನಾನ್ ಹೈಬ್ರಿಡ್ ಮತ್ತು ಹೈಬ್ರಿಡ್ ಎಂಜಿನ್ ಹೊಂದಿದ್ದು, 23.40 kmpl - 24.50 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ವಿನ್ಯಾಸ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿರಲಿದ್ದು, ಮರು-ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಡ್ಯುಯಲ್ - ಟೋನ್ ವೀಲ್ಸ್ ಒಳಗೊಂಡಿರಲಿದೆ.
ಮುಂಬರಲಿರುವ ಹೊಸ ತಲೆಮಾರಿನ ಸ್ವಿಫ್ಟ್ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ನೂತನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕನೆಕ್ಟ್ ಕಾರ್ ಕಾರ್ ಟೆಕ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಪಡೆದಿರುವ ಸಾಧ್ಯತೆಯಿದೆ. ಸುರಕ್ಷತೆಯ ದೃಷ್ಟಿಯಿಂದ 360-ಡಿಗ್ರಿ ಕ್ಯಾಮೆರಾ ಏರ್ ಬ್ಯಾಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು.
ಸದ್ಯ, ಭಾರತದಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಸ್ವಿಫ್ಟ್ 5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಹೊಸ ಕಾರು ಸಹ ಇದೇ ದರದಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕಂಪನಿ ಕಡೆಯಿಂದ ಅಧಿಕೃತ ಬೆಲೆ ಬಗ್ಗೆ ವಿವರಗಳು ಲಭ್ಯವಾಗಿಲ್ಲ. ಒಂದೊಮ್ಮೆ ಈ ಕಾರು, ಎಡಿಎಎಸ್ ವೈಶಿಷ್ಟ್ಯದೊಂದಿಗೆ ಬಿಡುಗಡೆಯಾದರೆ, ಸಂಭವನೀಯ ಅಪಘಾತಗಳ ಸಂಖ್ಯೆ ದೊಡ್ಡಮಟ್ಟದಲ್ಲಿ ಕಡಿಮೆಯಾಗುತ್ತದೆ.


Click it and Unblock the Notifications