ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ BMW M2: 98 ಲಕ್ಷ ರೂ. ಎಕ್ಸ್ ಶೋ ರೂಂ
ಲಕ್ಷುರಿ ಕಾರು ತಯಾರಿಕೆಯಲ್ಲಿ ಬಿಎಂಡಬ್ಲ್ಯೂ ಎಂದಿಗೂ ಎತ್ತಿದ ಕೈ. ಬಿಎಂಡಬ್ಲ್ಯೂ ಕಂಪೆನಿಯ ಹಲವಾರು ಕಾರುಗಳು ನಮ್ಮ ದೇಶದ ಹೆದ್ದಾರಿಯನ್ನು ಆಳುತ್ತಿದೆ ಎಂದರೆ ತಪ್ಪಾಗಲಾರದು. ಇದೀಗ ಬಿಎಂಡಬ್ಲ್ಯೂ ತನ್ನ ಹೊಸ ಎರಡನೇ ಜೆನರೇಶನ್‌ನ M2 ಕಾರನ್ನು 98 ಲಕ್ಷ ಎಕ್ಸ್ ಶೋ ರೂಂ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿದೆ.
ಎರಡು ಡೋರನ್ನು ಹೊಂದಿರುವ ಈ ಸ್ಪೋರ್ಟ್ಸ್ ಕಾರು ವೇಗದ ಕಾರು ಪ್ರಿಯರಲ್ಲಿ ತುಂಬಾ ಚಿರಪರಿಚಿತವಾಗಿದೆ. ಇನ್ನು ಬಿಎಂಡಬ್ಲ್ಯೂ M2 ಲಕ್ಷುರಿ ಕಾರು ಸಿಂಗಲ್ ವೇರಿಯೆಂಟ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಲ್ಲಿ ಲಭ್ಯವಿದ್ದು ಅಗತ್ಯವಿದ್ದಲ್ಲಿ ಒಂದು ಲಕ್ಷ ಹೆಚ್ಚು ಪಾವತಿಸಿ ಅದನ್ನು ಮ್ಯಾನುವಲ್ ಗೇರ್ ಬಾಕ್ಸ್ ಆಗಿ ಬದಲಿಸಬಹುದಾಗಿದೆ.

ಬಿಎಂಡಬ್ಲ್ಯೂ M2 (BMW M2) ಸಂಪೂರ್ಣವಾಗಿ ಸಿಬಿಯು ಯೂನಿಟ್ ಎಂದರೆ ವಿದೇಶದಲ್ಲಿ ನಿರ್ಮಿಸಿ ಅದನ್ನು ಭಾರತದಲ್ಲಿ ತಂದು ಮಾರುತ್ತಿದ್ದು ಕೆಲವೇ ಕೆಲವು ಸಂಖ್ಯೆಗಳಷ್ಟು ಕಾರುಗಳು ಮಾತ್ರ ಭಾರತದಲ್ಲಿ ಲಭ್ಯವಿರಲಿದೆ. ಹಾಗಾಗಿಯೇ ಭಾರತದಲ್ಲಿ ಬಿಎಂಡಬ್ಲ್ಯೂನ ಈ ಕಾರಿಗೆ ಬೇಡಿಕೆ ಹೆಚ್ಚಾಗಲಿದೆ ಎಂಬುದು ಕಾರು ಪಂಡಿತರ ಅಭಿಪ್ರಾಯವಾಗಿದೆ.
ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಿಎಂಡಬ್ಲ್ಯೂ 2 ಸೀರೀಸ್ ಕೂಪೆಯನ್ನು ಆಧರಿಸಿದ ವಿನ್ಯಾಸವನ್ನು ಬಿಎಂಡಬ್ಲ್ಯೂ M2 ಹೊಂದಿದ್ದು ಅಗ್ರೆಸಿವ್ ಬಾಡಿ ಕಿಟ್‌ನೊಂದಿಗೆ ಅತ್ಯಾಕರ್ಷಕವಾಗಿ ಕಾಣುತ್ತದೆ. ಈ ಬಾಡಿ ಕಿಟ್‌ನಲ್ಲಿ ಪ್ರಮುಖವಾಗಿ ಕಾಣುವುದೆಂದರೆ ಈ ಕಾರಿನ ಸ್ಟೈಲಿಷ್ ಮತ್ತು ಕಾರ್ಯ ನಿರ್ವಹಿಸುವ ಹಿಂಬಾಗದ ಸ್ಪಾಯ್ಲರ್.

ಇದರ ಜೊತೆಗೆ ಹಿಂಬಾಗದ GT ಶೈಲಿಯ ಡಿಫ್ಯೂಸರ್, ಖ್ವಾಡ್ ಎಕ್ಸಾಸ್ಟ್ ಟಿಪ್, ಮತ್ತು ಮುಂಭಾಗದಲ್ಲಿ ಫ್ರೇಮ್‌ಗಳಿಲ್ಲದೇ ಅಡ್ಡಲಾಗಿ ವಿನ್ಯಾಸಗೊಳಿಸಿರುವ ಕಿಡ್ನಿ ಗ್ರಿಲ್‌ಗಳು ಈ ಕಾರಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಇನ್ನು ಈ ಕಾರಿನ ಒಳ ಭಾಗದಲ್ಲಿ 14.9 ಇಂಚ್‌ನ ಇನ್ಫೋಟೈನ್‌ಮೆಂಟ್ ಪರದೆಯಿದ್ದು ಇದರಲ್ಲಿ ಹಲವಾರು ಫೀಚರ್‌ಗಳು ಲಭ್ಯವಿದೆ.
ಬಿಎಂಡಬ್ಲ್ಯೂ M2 ನಲ್ಲಿ 12.3 ಇಂಚ್‌ನ ದೊಡ್ಡ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎಂ-ಸ್ಪೆಸಿಫಿಕ್ ಗ್ರಾಫಿಕ್ಸ್‌ನೊಂದಿಗೆ ಲಭ್ಯವಿದೆ. ಗಾತ್ರದಲ್ಲಿ ಬಿಎಂಡಬ್ಲ್ಯೂ M2 ಕಾರು ಬಿಎಂಡಬ್ಲ್ಯೂ M4 ಕಾರಿಗಿಂತ ಚಿಕ್ಕದಾಗಿದ್ದರೂ ಕಳೆದ ತಲೆಮಾರಿನ ಬಿಎಂಡಬ್ಲ್ಯೂ M2 ಕಾರಿಗಿಂತ 114mm ಉದ್ದವಾಗಿದೆ. ಈ ಕಾರು ಪೋರ್ಶೆ 718 ಕೈಮನ್ ಕಾರಿನ ಪ್ರತಿಸ್ಪರ್ಧಿಯಾಗಿದೆ.

ಬಿಎಂಡಬ್ಲ್ಯೂ M2 ಕಾರಿನ ಇಂಜಿನ್ ಮತ್ತು ಗೇರ್ ಬಾಕ್ಸ್ ಕುರಿತಾಗಿ ಹೇಳುವುದಾದರೆ ಇದು 3 ಲೀಟರ್, ಇನ್‌ಲೈನ್ ಸಿಕ್ಸ್ ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತಿದ್ದು ಇದು ಸುಮಾರು 460bhp ಮತ್ತು 550nm ಟಾರ್ಕನ್ನು ಉತ್ಪಾದಿಸುತ್ತದೆ. ಇಷ್ಟೊಂದು ದೊಡ್ಡ ಮೊತ್ತದ ಪವರನ್ನು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟ್ಯೋಮಾಟಿಕ್ ಗೇರ್ ಬಾಕ್ಸ್ ಮೂಲಕ ಹಿಂದಿನ ಚಕ್ರಗಳಿಗೆ ವರ್ಗಾಯಿಸುತ್ತದೆ.
ಈ ಕಾರಿನ ವೇಗವನ್ನು ಗಮನಿಸುವುದಾದರೆ 0-100kph ವೇಗವನ್ನು ಕೇವಲ 4.1 ಸೆಕೆಂಡ್‌ಗಳಲ್ಲಿ ತಲುಪುತ್ತದೆ. ಇನ್ನು ಇದರ ಟಾಪ್ ಸ್ಪೀಡ್ ನೋಡುವುದಾದರೆ ಗಂಟೆಗೆ ಸುಮಾರು 250 ಕಿಲೋ ಮೀಟರ್‌ಗಳು. ಇನ್ನು ಬಿಎಂಡಬ್ಲ್ಯೂ M2 ಸ್ಟ್ಯಾಂಡರ್ಡ್ ಆಗಿ ಅಡಾಪ್ಟಿವ್ M ಸಸ್ಪೆನ್ಷನ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ವೇಗವನ್ನು ಇಷ್ಟಪಡುವವರಿಗೆ ಬಿಎಂಡಬ್ಲ್ಯೂ M2 ಕಾರು ಒಂದು ಉತ್ತಮ ಆಯ್ಕೆಯಾಗಲಿದೆ. ಯಾಕೆಂದರೆ ಕಳೆದ ಆವೃತ್ತಿಯ ಬಿಎಂಡಬ್ಲ್ಯೂ M2 ಕಾರು ವೇಗ ಪ್ರಿಯರ ಮಧ್ಯೆ ಸದ್ದು ಮಾಡಿತ್ತು. ಆಕರ್ಷಕ ಸ್ಪೋರ್ಟಿ ಲುಕ್‌ನೊಂದಿಗೆ ಬರುವ ಎರಡನೇ ತಲೆಮಾರಿನ ಬಿಎಂಡಬ್ಲ್ಯೂ M2 ಯಾವ ರೀತಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications