Renault: ಮುಂಬರಲಿರುವ ಹೊಸ ತಲೆಮಾರಿನ ಈ ರೆನಾಲ್ಟ್ ಕಾರು ಜನಪ್ರಿಯ ಫೀಚರ್ ಕಳೆದುಕೊಳ್ಳಲಿದೆ?
ಫ್ರೆಂಚ್ ವಾಹನ ತಯಾರಕ ರೆನಾಲ್ಟ್ (Renault) ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಕಂಪನಿಯು ನಾನಾ ಕಾರಣಗಳಿಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದ ಡಸ್ಟರ್ (Duster) ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಕಳೆದ ವರ್ಷ ಸ್ಥಗಿತಗೊಳಿಸಿತ್ತು, ಮುಂದಿನ ವರ್ಷ ಹೊಸ ತಲೆಮಾರಿನ ಡಸ್ಟರ್ ಬಿಡುಗಡೆಯಾಗಲು ಸಿದ್ಧವಾಗಿದೆ.
ಇದೀಗ, 2024ರಲ್ಲಿ ಲಾಂಚ್ ಆಗಲು ತಯಾರಾಗಿರುವ ನೂತನ ರೆನಾಲ್ಟ್ ಡಸ್ಟರ್ ಪ್ರಮುಖ ವೈಶಿಷ್ಟ್ಯವನ್ನು ಕಳೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. ಆ ಸಂಬಂಧ ಕಾರಿನ ಪೇಟೆಂಟ್ ಚಿತ್ರಗಳು ಇಂಟರ್‌ನೆಟ್ ನಲ್ಲಿ ಸೋರಿಕೆಯಾಗಿದ್ದು, ಹೊಸ ಡಸ್ಟರ್ ಕಾರು ಸನ್‌ರೂಫ್ (Sunroof) ಹೊಂದಿರುವುದಿಲ್ಲ ಎನ್ನಲಾಗಿದೆ. ಇದು ಖಚಿತವಾದರೆ, ಸಾಲು - ಸಾಲು ಎದುರಾಳಿಗಳನ್ನು ಹೊಂದಿರುವ ಡಸ್ಟರ್ ಗೆ ಸ್ಪರ್ಧೆಯೊಡ್ಡಲು ಕಷ್ಟವಾಗಬಹುದು.

ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಹಲವು ಬದಲಾವಣೆಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. 2024ರ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಯಾಗಬಹುದು. ಆ ಬಳಿಕ, 2025ರಲ್ಲಿ ಭಾರತದಲ್ಲಿ ಲಾಂಚ್ ಆಗಬಹುದು. ಕೊಂಚ ಹೆಚ್ಚಿನ ದರ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟದಿಂದ ಹೊರಗುಳಿದಿರುವ ಡಸ್ಟರ್ ರೂ.8.49 ಲಕ್ಷದಿಂದ ರೂ.14.25 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತಿತ್ತು.
5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದ ಈ ಕಾರು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತಿತ್ತು. ರೂಪಾಂತರಗಳಿಗೆ ಅನುಗುಣವಾಗಿ 13.9 - 19.87 kmpl ಮೈಲೇಜ್ ನೀಡುತ್ತಿತ್ತು. ಜೊತೆಗೆ FWD (ಫೋರ್ ವೀಲ್ ಡ್ರೈವ್), AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನದೊಂದಿಗೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿತ್ತು.

ಈ ಕಾರಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ಸೇರಿದಂತೆ ಹಲವು ಪ್ರತಿಸ್ಪರ್ಧಿಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ನೂತನ ಕಾರು ಹಲವು ಬದಲಾವಣೆಗಳೊಂದಿಗೆ ಬಿಡುಗಡೆಯಾದರೂ ಸನ್‌ರೂಫ್ ಇಲ್ಲವೆಂದು ಹೇಳುತ್ತಿರುವುದು ಮಾರಾಟದ ಮೇಲೆ ಕೊಂಚ ಪ್ರಭಾವ ಬೀರಬಹುದು. ಆದರೆ, ಈ ವೈಶಿಷ್ಟ್ಯ ಹೊಂದಿರುತ್ತದೆಯೋ ಅಥವಾ ಇಲ್ಲವೇ ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ಇನ್ನು, ರೆನಾಲ್ಟ್ ಕಂಪನಿ ಮಾರಾಟ ಮಾಡುವ ಇತರೆ ಕಾರುಗಳ ವಿವರವನ್ನು ನೋಡುವುದಾದರೆ, ಕ್ವಿಡ್ (KWID) ಎಂಟ್ರಿ ಲೆವೆಲ್ ಕಾರಾಗಿದ್ದು, ರೂ.4.70 ಲಕ್ಷದಿಂದ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಹಾಗೂ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, 21.46 - 22.3 kmpl ಮೈಲೇಜ್ ನೀಡುತ್ತದೆ.

ರೆನಾಲ್ಟ್ ಕಿಗರ್ (Renault Kiger) ರೂ.6.50 ಲಕ್ಷದಿಂದ ರೂ.11.23 ಲಕ್ಷ ಎಕ್ಸ್ ಶೋರೂಂ ದರಕ್ಕೆ ಸಿಗುತ್ತದೆ. ಪೆಟ್ರೋಲ್ ಎಂಜಿನ್ ಹೊಂದಿದ್ದು, 18.24 - 20.5 kmpl ಮೈಲೇಜ್ ಕೊಡುತ್ತದೆ. ರೆನಾಲ್ಟ್ ಟ್ರೈಬರ್ (Renault Triber) ರೂ.6.33 ಲಕ್ಷದಿಂದ ರೂ.8.97 ಬೆಲೆಯಲ್ಲಿ ಸಿಗಲಿದ್ದು, ಗ್ರಾಹಕರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








