Maruti Suzuki Fronx: ಬಹುನೀರಿಕ್ಷಿತ 'ಮಾರುತಿ ಸುಜುಕಿ ಫ್ರಾಂಕ್ಸ್' SUV ಕಡಿಮೆ ಬೆಲೆಗೆ ಬಿಡುಗಡೆ.. ಅದ್ಬುತ ಮೈಲೇಜ್
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ತನ್ನ ಬಹುನೀರಿಕ್ಷಿತ ಬಲೆನೊ ಆಧರಿತ ಸಬ್ 4ಮೀಟರ್ ಎಸ್‌ಯುವಿ 'ಫ್ರಾಂಕ್ಸ್'ನ್ನು (Maruti Suzuki Fronx) ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಮೈಲೇಜ್ ಕೂಡ ಅತ್ಯುತ್ತಮವಾಗಿದ್ದು, ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿ 'ಫ್ರಾಂಕ್ಸ್' ಎಸ್‌ಯುವಿಯನ್ನು ಪ್ರದರ್ಶಿಸಿ, ಅಂದಿನಿಂದಲೇ ಬುಕಿಂಗ್ ಪ್ರಾರಂಭಿಸಿತ್ತು. ಇದೀಗ ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ರೂ.7.46 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಗೊಳಿಸಿದ್ದು, ನೆಕ್ಸಾ ಡೀಲರ್ ಶಿಪ್ ಮೂಲಕ ಮಾರಾಟ ಮಾಡಲಾಗುತ್ತದೆ. ಇದುವರೆಗೆ ದೇಶಾದ್ಯಂತ ಬರೋಬ್ಬರಿ 39,000 ಗ್ರಾಹಕರು ಈ ಎಸ್‌ಯುವಿಯನ್ನು ಆರ್ಡರ್ ಮಾಡಿದ್ದಾರೆ.

ಮೊದಲಿಗೆ ಮಾರುತಿ ಸುಜುಕಿ ಫ್ರಾಂಕ್ಸ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್ ಎಂಜಿನ್ 89.7 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮತ್ತೊಂದು ಎಂಜಿನ್ ಬಗ್ಗೆ ಹೇಳುವುದಾದರೆ, ಫ್ರಾಂಕ್ಸ್ ಎಸ್‌ಯುವಿಯ 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್, 100 PS ಗರಿಷ್ಠ ಪವರ್ ಹಾಗೂ 147.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ ಮೈಲೇಜ್ ಬಗ್ಗೆ ಮಾತನಾನಾಡುವುದಾದರೆ, 1.2 ಲೀಟರ್ ಎಂಜಿನ್, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 21.79 km/l ಹಾಗೂ ಆಟೋಮೆಟಿಕ್ ಟ್ರಾನ್ಸ್ಮಿಷನ್ ನಲ್ಲಿ 22.89 km/l ಮೈಲೇಜ್ ನೀಡಲಿದೆ. 1.0 ಲೀಟರ್, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 21.50 km/l ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ನಲ್ಲಿ 20.01 km/l ಇಂಧನ ದಕ್ಷತೆಯನ್ನು ಹೊಂದಿದೆ.
ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅರ್ಕಾಮಿಸ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕನೆಕ್ಟ್ದ್ ಕಾರ್ ಟೆಕ್ನಾಲಜಿ, ಆಟೋ ಕ್ಲೈಮೇಟ್ ಕಂಟ್ರೋಲ್ ಹಾಗೂ ಟೈಪ್ ಸಿ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಫ್ರಾಂಕ್ಸ್ ಎಸ್‌ಯುವಿಯ ಫ್ರಂಟ್ ವಿನ್ಯಾಸ ಬಹುತೇಕ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಹೋಲಿಕೆಯಾಗುತ್ತದೆ. ಮುಂಭಾಗ ಆಕರ್ಷಕ ಗ್ರೀಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಎಲ್ಇಡಿ DRL ಹೊಂದಿದೆ. ಜೊತೆಗೆ 16 ಇಂಚಿನ ಅಲಾಯ್ ವೀಲ್ಸ್ ಅನ್ನು ಪಡೆದಿದೆ. ಹಿಂಭಾಗವು ಆಕರ್ಷಕ ಲುಕ್ ಹೊಂದಿದೆ. ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3995ಎಂಎಂ ಉದ್ದ, 1765ಎಂಎಂ ಅಗಲ, 1550ಎಂಎಂ ಎತ್ತರ ಹಾಗೂ 2520ಎಂಎಂ ಅಳತೆಯ ವೀಲ್ ಬೇಸ್ ಹೊಂದಿದೆ.
ಫ್ರಾಂಕ್ಸ್ ಎಸ್‌ಯುವಿಯ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 3 ಪಾಯಿಂಟ್ ELR ಸೀಟ್‌ಬೆಲ್ಟ್ಸ್, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ವಿವಿಧ ಸುರಕ್ಷಿತ ವೈಶಿಷ್ಟ್ಯಗಳನ್ನು ಪಡೆದಿದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಝೀಟಾ ಮತ್ತು ಆಲ್ಫಾ ಎಂಬ 5 ರೂಪಾಂತರದಲ್ಲಿ ಖರೀದಿಗೆ ಲಭ್ಯವಿದ್ದು, ಜೊತೆಗೆ 10 ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ.
ಅಂತಿಮವಾಗಿ ಮಾರುತಿ ಸುಜುಕಿ ಕಂಪನಿ ಫ್ರಾಂಕ್ಸ್ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಜೊತೆಗೆ ಇದು ಮೈಲೇಜ್ ನಲ್ಲಿಯು ಅದ್ಬುತವಾಗಿದ್ದು, ಗ್ರಾಹಕರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದ್ದು, ಕಂಪನಿ ಜನಪ್ರಿಯ ಎಸ್‌ಯುವಿಯಾಗುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications