Okinawa: ಯಾವ ಕಾರಿಗೂ ಕಮ್ಮಿಯಿಲ್ಲ.. ಭಾರತದಲ್ಲಿ ನವೀಕರಿಸಿದ ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳು (ಇವಿ) ಭಾರೀ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಅದಕ್ಕೆ ತಕ್ಕಂತೆ ವಿವಿಧ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ನವೀನ ವಿನ್ಯಾಸ, ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯಲ್ಲಿ ಇ - ಸ್ಕೂಟರ್ ಹಾಗೂ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿವೆ.
ಇದೀಗ, ಓಕಿನಾವಾ (Okinawa) ಆಟೋಟೆಕ್ ನವೀಕರಿಸಿರುವ ಓಕಿ-90 (Okhi-90) ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಸ್ಕೂಟರ್, ರೂ.1.86 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದ್ದು, ಸೆಪ್ಟೆಂಬರ್ ತಿಂಗಳಿಂದ ವಿತರಣೆಗಳು ಶುರುವಾಗಲಿದೆ. ಸದ್ಯ, ಮೇಲ್ದರ್ಜೆರಿಸಿರುವ ಓಕಿ-90 ಸ್ಕೂಟರ್, ಹೊಸ ಬ್ಯಾಟರಿ ಪ್ಯಾಕ್ (AIS-156 ಅಮೆಂಡ್ಮೆಂಟ್ 3 ಕಂಪ್ಲೈಂಟ್) ಆಯ್ಕೆಯನ್ನು ಹೊಂದಿದೆ.

ಜೊತೆಗೆ ನೆಕ್ಸ್ಟ್ ಜನರೇಶನ್ ಮೋಟಾರ್ ಹಾಗೂ ಅತ್ಯಾಧುನಿಕ ತಂತಜ್ಞಾನದ ನೆರವಿನೊಂದಿಗೆ ರೂಪಿಸಲಾಗಿರುವ ಆಕರ್ಷಕ ವೈಶಿಷ್ಟ್ಯವನ್ನು ಈ ಓಕಿ-90 ಸ್ಕೂಟರ್ ಪಡೆದಿದೆ. ಫ್ರಂಟ್ ಹೈಡ್ರಾಲಿಕ್ ಹಾಗೂ ರೇರ್ ಡಬಲ್ ಶಾಕರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಪ್ರಮುಖವಾಗಿ E - ABS (ಎಲೆಕ್ಟ್ರಾನಿಕ್ - ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಿದೆ.
ಓಕಿನಾವಾ, ಇಟಲಿ ಮೂಲದ ಕಂಪನಿ ಟಾಸಿಟಾ (Tacita) ಸಹಭಾಗಿತ್ವದಲ್ಲಿ ತನ್ನೆಲ್ಲ ಪೋರ್ಟ್ಫೋಲಿಯೊವನ್ನು ನವೀಕರಿಸಲಾಗುತ್ತಿದೆ ಎಂದು ಘೋಷಣೆ ಮಾಡಿರುವುದು ಗಮನಾರ್ಹ ಅಂಶವಾಗಿದೆ. ಮೇಲ್ದರ್ಜೆರಿಸಿರುವ ಓಕಿ-90 ಸ್ಕೂಟರ್ ಯಾವ ಕಾರಿಗೂ ಕಮ್ಮಿ ಇಲ್ಲದಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ನ್ಯೂ ಎನ್‌ಕೋಡರ್ ಬೇಸ್ಡ್ ಮೋಟಾರ್, ಡಿಜಿಟಲ್ ಸ್ಪೀಡೋಮೀಟರ್, ಆಂಟಿ ಥೆಫ್ಟ್ ಅಲಾರ್ಮ್, GPS ನ್ಯಾವಿಗೇಷನ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ.

ಇದಿಷ್ಟೇ ಅಲ್ಲದೆ, ಮೊಬೈಲ್ ಅಪ್ಲಿಕೇಶನ್ ಕನೆಕ್ಟಿವಿಟಿ, ರಿಯಲ್ ಟೈಮ್ SOC ಹಾಗೂ ಸ್ವೀಡ್ ಮಾನಿಟರಿಂಗ್ ಅನ್ನು ಒಳಗೊಂಡಿದೆ. ಈ ಓಕಿ-90 ಸ್ಕೂಟರ್, ಸಂಪೂರ್ಣ ಚಾರ್ಜಿನಲ್ಲಿ 160 ಕಿಲೋಮೀಟರ್ ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗಲು 4-5 ಗಂಟೆ ತೆಗೆದುಕೊಳ್ಳಲಿದ್ದು ರೆಡ್, ಬ್ಲೂ, ಗ್ರೇ ಹಾಗೂ ವೈಟ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಭಾರತದ ಮಾರುಕಟ್ಟೆಯಲ್ಲಿ ಓಕಿನಾವಾ ಮಾರಾಟ ಮಾಡುವ ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿವರವನ್ನು ತಿಳಿಯೋಣ. ಮೊದಲಿಗೆ ಓಕಿನಾವಾ ಪ್ರೈಸ್ ಪ್ರೊ ರೂ.99,645 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದರಲ್ಲಿ 2.0 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. ಫುಲ್ ಚಾರ್ಜಿನಲ್ಲಿ 88 km ರೇಂಜ್ ನೀಡಲಿದ್ದು, 58 kmph ಟಾಪ್ ಸ್ವೀಡ್ ಹೊಂದಿದೆ.
ಓಕಿನಾವಾ ಆರ್30 ಬಗ್ಗೆ ಮಾತನಾಡುವದಾದರೆ, ಇದು ರೂ.61,998 ದರದಲ್ಲಿ ಲಭ್ಯವಿದ್ದು, ಇದರ 1.25 KWH ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜಿನಲ್ಲಿ 60 km ರೇಂಜ್ ಕೊಡುತ್ತದೆ. ಜೊತೆಗೆ 25 kmph ಟಾಪ್ ಸ್ವೀಡ್ ಹೊಂದಿದ್ದು, ಬ್ಯಾಟರಿ ಪ್ಯಾಕ್ ಫುಲ್ ಚಾರ್ಜ್ ಆಗಲು 4-5 ಗಂಟುಬೇಕು. ಇದರೊಟ್ಟಿಗೆ ಓಕಿನಾವಾ, ಡ್ಯುಯಲ್ 100, ರಿಡ್ಜ್ ಸೇರಿದಂತೆ ವಿವಿಧ ಸ್ಕೂಟರ್ ಗಳನ್ನು ಸೇಲ್ ಮಾಡುತ್ತದೆ.
FAMEII ಸಬ್ಸಿಡಿ ಪರಿಷ್ಕರಣೆ ಬಳಿಕ, ಇತರೆ ದ್ವಿಚಕ್ರ ವಾಹನ ಕಂಪನಿಗಳಂತೆ ಓಕಿನಾವಾ ಸಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ. ಜೂನ್ (2023) ತಿಂಗಳಲ್ಲಿ 2,616 ಯುನಿಟ್ ಮಾರಾಟ ಮಾಡಿ, ಮೇ ತಿಂಗಳಿಗೆ (2,907 ಯುನಿಟ್) ಹೋಲಿಸಿದರೆ ಶೇಕಡ 10% ಇಳಿಕೆ ಸಾಧಿಸಿದೆ. ಪ್ರಸ್ತುತ, ನವೀಕರಣಗೊಂಡಿರುವ ಓಕಿ-90 ಬಿಡುಗಡೆಯೊಂದಿಗೆ ಈ ಸೇಲ್ಸ್ ನ ಬೆಳವಣಿಗೆಯಾಗಬಹುದು ಎನ್ನುವ ವಿಶ್ವಾಸದಲ್ಲಿ ಕಂಪನಿಯಿದೆ.


Click it and Unblock the Notifications








