Skoda Kushaq: ಸ್ಕೋಡಾ ಕುಶಾಕ್ ಆಂಬಿಷನ್ ಪವರ್ ಫುಲ್ '1.5 TSI' ಪವರ್‌ಟ್ರೇನ್ ಪರಿಚಯ.. ಬೆಲೆ ಕಡಿಮೆಯಾಗಿದೆ
ಭಾರತದ ಮಾರುಕಟ್ಟೆಯಲ್ಲಿ ಸ್ಕೋಡಾ ಕುಶಾಕ್ ಎಸ್‌ಯುವಿಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಇದೀಗ, ತನ್ನ ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಲು 'ಸ್ಕೋಡಾ ಆಟೋ ಇಂಡಿಯಾ' ಮಿಡ್ ರೇಂಜ್ ಕುಶಾಕ್ ಆಂಬಿಷನ್ ರೂಪಾಂತರದಲ್ಲಿ ಪವರ್ ಫುಲ್ '1.5 TSI' ಪವರ್‌ಟ್ರೇನ್ ಆಯ್ಕೆಯನ್ನು ಪರಿಚಯಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.
ನೂತನ ಎಂಜಿನ್ (1.5 TSI) ಆಯ್ಕೆಯೊಂದಿರುವ ಸ್ಕೋಡಾ ಕುಶಾಕ್ (Skoda Kushaq), 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿರುವ ಆಂಬಿಷನ್ ಆವೃತ್ತಿ ರೂ.14.99 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 7 ಸ್ವೀಡ್ DSG ಗೇರ್‌ಬಾಕ್ಸ್ ಆಯ್ಕೆಯೊಂದಿರುವ ಇದೇ ಆವೃತ್ತಿಯು ರೂ.16.79 ದರದಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಬೆಲೆ ಇಳಿಕೆ ಮಾಡಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳಬಹುದು.

ಸ್ಕೋಡಾ ಕುಶಾಕ್ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಇದನ್ನು 'ಸ್ಲಾವಿಯಾ' ಸೆಡಾನ್ ಪಡೆದಿರುವ MQB A0-IN ಪ್ಲಾಟ್‌ಫಾರ್ಮ್‌ನಡಿ ನಿರ್ಮಿಸಲಾಗಿದ್ದು, ಬಹುತೇಕ ಎರಡು ಕಾರುಗಳು ಒಂದೇ ರೀತಿಯ ಪವರ್‌ಟ್ರೇನ್ ಆಯ್ಕೆ, ವೈಶಿಷ್ಟ್ಯ ಹಾಗೂ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಅಲ್ಲದೆ, ಸ್ಕೋಡಾ ತನ್ನೆಲ್ಲ ಮಾದರಿಗಳ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಯಲ್ಲಿರುವ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದೆ.
ಸ್ಕೋಡಾ ಕುಶಾಕ್ ಆಂಬಿಷನ್ ಆವೃತ್ತಿಯ ಪವರ್‌ಟ್ರೇನ್ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಇದು 1.5 ಲೀಟರ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (1.5 TSI) ಹೊಂದಿದ್ದು, 148 bhp ಗರಿಷ್ಠ ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್, 7 ಸ್ವೀಡ್ DSG ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಇಷ್ಟೇ ಅಲ್ಲದೆ, ಸ್ಕೋಡಾ ಕುಶಾಕ್ ಮತ್ತೊಂದು ಎಂಜಿನ್ ಆಯ್ಕೆಯನ್ನು ಪಡೆದಿದೆ. 1.0 ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 113 bhp ಗರಿಷ್ಠ ಪವರ್ ಹಾಗೂ 178 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 6 ಸ್ವೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಸ್ಕೋಡಾ ಕುಶಾಕ್, ಐದು ಆಸನಗಳನ್ನು ಹೊಂದಿರುವ ಎಸ್‌ಯುವಿ ಆಗಿದ್ದು, 19.2 kmpl ಮೈಲೇಜ್ ನೀಡಲಿದ್ದು, FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಕರ್ಷಕ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಸಬ್ ವೂಫರ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ 6 ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ.

ಸುರಕ್ಶತೆಯ ದೃಷ್ಟಿಯಿಂದಲ್ಲೂ ಸ್ಕೋಡಾ ಕುಶಾಕ್ ಅತ್ಯುತ್ತಮ ಎಸ್‌ಯುವಿಯಾಗಿದ್ದು, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ವ್ಯೂ ಕ್ಯಾಮರಾವನ್ನು ಪಡೆದಿದೆ.
ಈ '1.5 TSI' ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುವ ಮೂಲಕ ಸ್ಕೋಡಾ ಕುಶಾಕ್, ಆಂಬಿಷನ್ ರೂಪಾಂತರ ಹೆಚ್ಚು ಶಕ್ತಿಯುತವಾಗಿದ್ದು, ಬೆಲೆಯು ಕಡಿಮೆಯಾಗಿದೆ. ಇದರಿಂದಾಗಿ ಈ ಮಿಡ್ ರೇಂಜ್ ಎಸ್‌ಯುವಿ, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಳಿಗೆ ಭಾರೀ ಪೈಪೋಟಿ ನೀಡಲಿದ್ದು, ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications








