ಇದು ಮಾರುತಿ ಸುಜುಕಿ ಹೊಸ ಎಲೆಕ್ಟ್ರಿಕ್ ಕಾರಿನ ಬೆಲೆ! ಸದ್ದಿಲ್ಲದೆ ಹೊರಬಂದವು ಹೊಸ ಇವಿ ಫೋಟೊಗಳು
ಜಪಾನ್ ವಾಹನ ತಯಾರಕರಾದ ಸುಜುಕಿ ಅಕ್ಟೋಬರ್ 26 ರಿಂದ ನವೆಂಬರ್ 5 ರವರೆಗೆ ನಡೆಯಲಿರುವ ಟೋಕಿಯೋ ಮೋಟಾರ್ ಶೋ 2023 ನಲ್ಲಿ ಬಹು ಪರಿಕಲ್ಪನೆ ಮತ್ತು ಉತ್ಪಾದನಾ ಮಾದರಿಗಳನ್ನು ಪ್ರದರ್ಶಿಸಲು ತಯಾರಾಗುತ್ತಿದೆ. ಇದರ ಭಾಗವಾಗಿ ಹೊರಹೊಮ್ಮಿರುವ ಸುಜುಕಿ eWX ಎಲೆಕ್ಟ್ರಿಕ್ ಕಾರ್ ಪರಿಕಲ್ಪನೆಯ ಫೋಟೋಗಳು ಸದ್ದು ಮಾಡುತ್ತಿವೆ.
ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಮಾರುತಿ ಸುಜುಕಿ ವ್ಯಾಗನ್ ಆರ್‌ನಂತೆಯೇ, ಇಡಬ್ಲ್ಯುಎಕ್ಸ್ (eWX) ಕಾನ್ಸೆಪ್ಟ್ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಇದರ ಉದ್ದ 3,395 mm, ಅಗಲ 1,475 mm ಮತ್ತು ಎತ್ತರ 1,620 mm ಇದೆ. ಈ ಅಳೆತೆಗಳ ಪ್ರಕಾರ ಇದು ಕಾಂಪ್ಯಾಕ್ಟ್ ಎಸ್‌ಯುವಿ ಎನ್ನಲಾಗಿದೆ. ಈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಮಾರಾಟವಾಗಲಿದೆಯೇ? ಕಾದು ನೋಡಬೇಕಿದೆ.

ಸುಜುಕಿ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾಡೆಲ್ ಕುರಿತು ಯಾವುದೇ ತಾಂತ್ರಿಕ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಸಿಂಗಲ್ ಚಾರ್ಜ್‌ನಲ್ಲಿ 230 ಕಿಲೋಮೀಟರ್ ರೇಂಜ್ ನೀಡುವುದಾಗಿ ಹೇಳಲಾಗುತ್ತಿದೆ. ಇದೇ ಅಕ್ಟೋಬರ್ 26 ರಿಂದ ನವೆಂಬರ್ 5 ರವರೆಗೆ ನಡೆಯಲಿರುವ ಟೋಕಿಯೋ ಮೋಟಾರ್ ಶೋನಲ್ಲಿ ಈ ಎಲೆಕ್ಟ್ರಿಕ್ ಕಾರ್ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಲಿದ್ದಾರೆ. ಆ ವೇಳೆ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆಗಳಿವೆ.
ಮಾರುತಿ ಸುಜುಕಿ ಈ ಪರಿಕಲ್ಪನೆಯ ಮಾದರಿಯನ್ನು ಉತ್ಪಾದನಾ ಮಟ್ಟಕ್ಕೆ ಅಪ್‌ಗ್ರೇಡ್ ಮಾಡಿ ಭಾರತದಲ್ಲಿ ಮಾರಾಟಕ್ಕೆ ತರುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಮಾರುತಿ ಸುಜುಕಿ ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಅಲ್ಲದೆ ಕಂಪನಿಯಿಂದ ಬಿಡುಗಡೆಯಾಗುವ ಕಾಂಪ್ಯಾಕ್ಟ್ ಕಾರುಗಳಿಗೆ ಗ್ರಾಹಕರಲ್ಲಿ ಎಲ್ಲಿಲ್ಲದ ಬೇಡಿಕೆಯಿರುವ ಕಾರಣ ಈ ಕಾರನ್ನು ಭಾರತಕ್ಕೆ ತಂದರೂ ಆಶ್ಚರ್ಯವಿಲ್ಲ.

ಉಳಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಒಂದೇ ಒಂದು ಎಲೆಕ್ಟ್ರಿಕ್ ಕಾರನ್ನು ಕೂಡ ಇನ್ನು ಬಿಡುಗಡೆ ಮಾಡಿಲ್ಲ. ಆದರೆ ಟಾಟಾ, ಮಹೀಂದ್ರಾ, ಎಂಜಿ, ಹ್ಯುಂಡೈ ಮತ್ತು ಕಿಯಾದಂತಹ ಕಂಪನಿಗಳು ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿವೆ. ಇದರಲ್ಲಿ ಟಾಟಾ ಕಂಪನಿಯು ಪ್ರಸ್ತುತ 3 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಇವಿ ವಲಯದಲ್ಲೂ ತನ್ನ ಅಧಿಪತ್ಯವನ್ನು ಸಾಧಿಸಲು ಸುಜುಕಿ ಈ ಕಾರನ್ನು ತರುವ ಎಲ್ಲಾ ಸಾಧ್ಯತೆಗಳಿವೆ.
ಹಾಗಾಗಿ ಮಾರುತಿ ಸುಜುಕಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಕ್ಕೆ ತರುವ ಅನಿವಾರ್ಯತೆಗೆ ಸಿಲುಕಿದೆ. ಕೆಲವು ವರ್ಷಗಳ ಹಿಂದೆ, ಕಂಪನಿಯು ಮಾರುತಿ ಸುಜುಕಿ ವ್ಯಾಗನ್ R EV ಅನ್ನು ಪ್ರಾರಂಭಿಸಲು ಪ್ರಯತ್ನಗಳನ್ನು ಮಾಡಿತ್ತು. ಅದರ ಪರೀಕ್ಷಾರ್ಥ ಓಟಗಳನ್ನು ದೇಶದ ವಿವಿಧ ಭಾಗಗಳಲ್ಲಿ ಚುರುಕಾಗಿ ನಡೆಸಲಾಯಿತು. ಆದರೆ ಅಂತಿಮವಾಗಿ ಯೋಜನೆ ಕೈಬಿಡಲಾಯಿತು.

ಮಾರುತಿ ಸುಜುಕಿ ವಿಷಯದಲ್ಲಿ, ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಬಿಡುಗಡೆ ಮಾಡಲಾಗುವುದು ಎಂಬುದು ಸದ್ಯ ಭಾರತದಲ್ಲಿ ಎಲ್ಲರ ನಂಬಿಕೆಯಾಗಿದೆ. ಅದಕ್ಕೆ ತಕ್ಕಂತೆ ಮಾರುತಿ ಸುಜುಕಿ ಕೂಡ ಕೈಗೆಟುಕುವ ಬೆಲೆಯಲ್ಲಿ ತನ್ನ ಕಾರುಗಳನ್ನು ಪರಿಚಯಿಸುತ್ತಾ ಬಂದಿದೆ. ಈಗ ಯೋಜನೆಗಳಿಗೆ ಅನುಗುಣವಾಗಿ, eWX ಎಲೆಕ್ಟ್ರಿಕ್ ಕಾರ್ ಪರಿಕಲ್ಪನೆಯ ಕಾರನ್ನು ಪರಿಚಯಿಸುವ ಸಾಧ್ಯತೆಯಿದೆ.
ನಮ್ಮ ಪ್ರಕಾರ ಇದು ಯಶಸ್ಸು ಕಾಣುವುದರಲ್ಲಿ ಯಾವುದೆ ಅನುಮಾನವಿಲ್ಲ. ಇದಕ್ಕೆ ಮೊದಲ ಕಾರಣವೆಂದರೆ ಇದು ವ್ಯಾಗನ್ ಆರ್ ನಂತೆ ಕಾಣುತ್ತದೆ. ಎರಡನೆಯದಾಗಿ, ಈ ಎಲೆಕ್ಟ್ರಿಕ್ ಕಾರನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಬಹುದು. ಈ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಸುಮಾರು 8 ಲಕ್ಷ ರೂ. ಅದೇ ಸಮಯದಲ್ಲಿ, ಅದರ ಉನ್ನತ ರೂಪಾಂತರದ ಬೆಲೆ ಸುಮಾರು 12 ಲಕ್ಷ ರೂ. ಇರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications