ಎಲೆಕ್ಟ್ರಿಕ್ ಕಾರಾಗಿ ಸಿಗಲಿದೆ ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ: ಬೆಲೆ ಎಷ್ಟಿರಬಹುದು?
ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಭರದಿಂದ ಸಾಗುತ್ತಿದೆ. ಗ್ರಾಹಕರಲ್ಲಿ ಇಂತಹ ಕಾರುಗಳನ್ನು ಖರೀದಿಸಲು ಹೆಚ್ಚು ಲೈಕ್ ಮಾಡುತ್ತಿದ್ದು, ದೇಶ - ವಿದೇಶದ ವಿವಿಧ ಕಂಪನಿಗಳು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಮುಂದಾಗಿವೆ. ಇದರಲ್ಲಿ ಹುಂಡೈ ಕೂಡ ಪ್ರಮುಖವಾಗಿದೆ.
ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಕೋನಾ ಎಲೆಕ್ಟ್ರಿಕ್ (Hyundai Kona Electric) ಕಾರನ್ನು ಮಾರಾಟ ಮಾಡುತ್ತಿದೆ. ಬಳಿಕ, ಇತ್ತೀಚೆಗೆ ಹ್ಯುಂಡೈ ಕಂಪನಿ ಐಯೋನಿಕ್ 5 (Hyundai Ioniq 5) ಎಂಬ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. ಇದು ದೇಶೀಯ ಮಾರುಕಟ್ಟೆಗೆ ಹ್ಯುಂಡೈ ಲಾಂಚ್ ಮಾಡಿದ ಎರಡನೇ ಎಲೆಕ್ಟ್ರಿಕ್ ಕಾರಾಗಿದೆ ಎಂದು ಹೇಳಬಹುದು. ಇದರ ಬೆಲೆ ಎಷ್ಟು ಎನ್ನುವುದು ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದ್ದು, ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಯಿದೆ.

ಸದ್ಯ ಹೊಸ ವಿಚಾರವೆಂದರೇ, ಹ್ಯುಂಡೈ, ಕ್ರೆಟಾ ಎಲೆಕ್ಟ್ರಿಕ್ ಕಾರ್ (Hyundai Creta EV) ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ರೆಡಿಯಾಗುತ್ತಿದೆ. ಪ್ರಸ್ತುತ ಖರೀದಿಗೆ ಸಿಗುತ್ತಿರುವ ಇಂಧನ ಚಾಲಿತ ಹುಂಡೈ ಕ್ರೆಟಾ, ಇದೀಗ ದೇಶದಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಇದು ಮೀಡ್ - ಸೈಜ್ ಎಸ್‌ಯುವಿ ಆಗಿದ್ದು, ಹಲವು ಖರೀದಿದಾರರನ್ನು ತನ್ನತ್ತ ಸೆಳೆದಿದೆ. ಇತ್ತೀಚಿನ ವರದಿಗಳ ಪ್ರಕಾರ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಆವೃತ್ತಿಯನ್ನು ಮಾರಾಟ ಮಾಡಲಿದೆ.
ಇದರ ಮಾರಾಟ ಯಾವಾಗ:
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿಗೆ ಪ್ರಸ್ತುತ SU2i EV ಎಂದು ಕೋಡ್ ನೇಮ್ ನೀಡಲಾಗಿದೆ. ಈ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯು 2024ರ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು 2025ರ ಆರಂಭದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಔಪಚಾರಿಕವಾಗಿ ಪರಿಚಯಿಸಬಹುದು. ಅದೇ ವರ್ಷದ (2025) ಮುಂಬರುವ ಆಟೋ ಎಕ್ಸ್‌ಪೋದಲ್ಲಿ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಬೆಲೆ ಎಷ್ಟು?
ಭಾರತದಲ್ಲಿ ವರ್ಷಕ್ಕೆ 20,000-25,000 ಕ್ರೆಟಾ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹುಂಡೈ ಕಂಪನಿ ಹೊಂದಿದೆ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಾರಾಟ ಮಾಡಲು ಕಂಪನಿ ಯೋಜಿಸಿರುವುದರಿಂದ ಬೆಲೆಯು ಸ್ಫರ್ಧಾತ್ಮಕವಾಗಿ ಇರಲಿದೆ ಎಂದು ಅಂದಾಜಿಸಲಾಲಗಿದೆ. ಊಹಾಪೋಹಗಳ ಆಧಾರದ ಮೇಲೆ, ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಸುಮಾರು 14 ಲಕ್ಷ ರೂ. ಇರಬಹುದು ಎಂದು ಹೇಳಲಾಗಿದ್ದು, ಇದರ ಮೇಲೆ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗಿವೆ.
ಅದೇ ವೇಳೆ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಟಾಪ್ ವೆರಿಯಂಟ್ ಎಕ್ಸ್ ಶೋರೂಂ ಬೆಲೆ 25-30 ಲಕ್ಷ ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಅಧಿಕೃತ ಬೆಲೆ ಭಾರತದ ಮಾರುಕಟ್ಟೆಯಲ್ಲಿ ಅದು ಬಿಡುಗಡೆಯಾದ ಮೇಲೆ ತಿಳಿಯಲಿದೆ. ಈ ದುಬಾರಿ ಬೆಲೆ ಹೊಂದಲಿರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ರೇಂಜ್ (ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮಿಸಬಹುದಾದ ದೂರ), ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಅತ್ಯುತ್ತಮವಾಗಿ ಇರಲಿದೆ ಎಂದು ಸುಲಭವಾಗಿ ಹೇಳಬಹುದು.
ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ ಇವಿಗೆ ಪೈಪೋಟಿ:
ಮಾರುತಿ ಸುಜುಕಿ ಪ್ರಸ್ತುತ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ರೆಡಿ ಮಾಡಲು ಕೆಲಸ ಮಾಡುತ್ತಿದ್ದು, ಇದಕ್ಕೆ 'YY8' ಎಂಬ ಕೋಡ್ ನೇಮ್ ಇಟ್ಟಿದೆ. ಇದು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ ಎಂದು ಆಟೋಮೊಬೈಲ್ ಪರಿಣಿತರು ಅಂದಾಜಿಸಿದ್ದಾರೆ. ಇದಲ್ಲದೇ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು, ಟಾಟಾ ಮತ್ತು ಮಹೀಂದ್ರಾದ ಇವಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡಬಹುದು.
ಹ್ಯುಂಡೈ 2028ರ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ವರದಿಯಾಗಿದೆ. ಅದರ ಭಾಗವಾಗಿ ಮೂರನೇ ಎಲೆಕ್ಟ್ರಿಕ್ ಕಾರಾಗಿ ಹ್ಯುಂಡೈ, ಕ್ರೆಟಾ ಇವಿಯನ್ನು ಮಾರಾಟ ಮಾಡಲಿದೆ. ಮುಂದಿನ 2 ವರ್ಷಗಳ ನಂತರ, ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಾರು ಖರೀದಿಸಲು ಯೋಚಿಸುತ್ತಿರುವವರೂ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡಬಹುದು. ಅಲ್ಲದೆ, ಭಾರತದ ಮಧ್ಯಮ ವರ್ಗದ ಜನರಿಗೂ ಕೈಗೆಟುವ ಇವಿಗಳು ದೇಶೀಯ ಮಾರುಕಟ್ಟೆಗೆ ಬರಬಹುದು.


Click it and Unblock the Notifications