Maruti Suzuki: ಮುಂಬರಲಿರುವ ಮಾರುತಿ ಸುಜುಕಿ ಕಾರುಗಳು.. ಸುಂಟರಗಾಳಿ ಎಬ್ಬಿಸುತ್ತವೆ!
ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಇದೇ ವರ್ಷ ಅಥವಾ ಮುಂದಿನ ವರ್ಷ (2024) ಕಂಪನಿಯು ಹೊಸ ತಲೆಮಾರಿನ ಸ್ವಿಫ್ಟ್, 5 ಡೋರ್ ಜಿಮ್ನಿ ಸೇರಿದಂತೆ ನಾಲ್ಕು ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೊದಲಿಗೆ ಮಾರುತಿ ಸುಜುಕಿ (Maruti Suzuki) ಕಂಪನಿಯ ಬಹುನೀರಿಕ್ಷಿತ ಆಫ್-ರೋಡ್ ಎಸ್‌ಯುವಿ 5 ಡೋರ್ ಜಿಮ್ನಿ ಬಗ್ಗೆ ಮಾತನಾಡೋಣ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್ ಪೋದಲ್ಲಿ ಕಂಪನಿಯು ಜಿಮ್ನಿ 5 ಡೋರ್ ಅನಾವರಣ ಮಾಡಿ, ಬುಕಿಂಗ್ ಪ್ರಾರಂಭಿಸಿತ್ತು. ಈಗಾಗಲೇ ಗರಿಷ್ಠ ಸಂಖ್ಯೆಯಲ್ಲಿ ಗ್ರಾಹಕರು ಆರ್ಡರ್ ಮಾಡಿದ್ದಾರೆ. ಮುಂದಿನ ತಿಂಗಳು (ಮೇ) ಬಿಡುಗಡೆಯಾಗುವ ಸಾಧ್ಯತೆಯಿದ್ದು, ರೂ.10 ರಿಂದ ರೂ.12 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ಎಂಜಿನ್ ಹಾಗೂ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದು 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 105 bhp ಪವರ್, 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್/ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಗಳಲ್ಲಿ 'ಸ್ವಿಫ್ಟ್' ಪ್ರಮುಖವಾಗಿದ್ದು, ಸದ್ಯ, ಕಂಪನಿಯು ಹೊಸ ತಲೆಮಾರಿನ ಈ ಕಾರನ್ನು ಪರೀಕ್ಷಿಸುತ್ತಿದೆ. ಇದೇ ವರ್ಷದ ಮಧ್ಯಭಾಗದಲ್ಲಿ ಜಾಗತಿಕ ಮಾತುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದ್ದು, ಮುಂದಿನ ವರ್ಷದ (2024) ಆರಂಭದಲ್ಲಿ ಭಾರತದಲ್ಲಿ ಲಾಂಚ್ ಮಾಡಬಹುದು. ಇದು 1.2 ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಎಂಜಿನ್, ಮ್ಯಾನುವಲ್, AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, 40kmpl ಮೈಲೇಜ್ ನೀಡಬಹುದು.

ಮಾರುತಿ ಸುಜುಕಿ, ಇನ್ನೆರಡು ತಿಂಗಳಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಪ್ರೀಮಿಯಂ ಎಂಪಿವಿಯನ್ನು ಭಾರತದ ಗ್ರಾಹಕರಿಗಾಗಿ ಪರಿಚಯಿಸಲಾಗುವುದು ಎಂದು ಹೇಳಿದೆ. ಇದನ್ನು ಏಳು ಆಸನಗಳ ಆಯ್ಕೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ದೇಶಾದ್ಯಂತ ನೆಕ್ಸಾ ಡೀಲರ್ ಶಿಪ್ ಮೂಲಕ ಮಾರಾಟ ಮಾಡಲು ಕಂಪನಿ ತೀರ್ಮಾನಿಸಿದೆ. ಟೊಯೊಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಹೊಂದಿರುವ ಪಾಲುದಾರಿಕೆಯಿಂದಾಗಿ ಹೊಸ ಪ್ರೀಮಿಯಂ ಎಂಪಿವಿ ಸಿದ್ಧವಾಗುತ್ತಿದೆ.
ಮುಂಬರಲಿರುವ ಮಾರುತಿ ಸುಜುಕಿ ಪ್ರೀಮಿಯಂ ಎಂಪಿವಿ ಟೊಯೊಟಾ ಇನ್ನೋವಾ ಹೈಕ್ರಾಸ್ ನಂತೆಯೇ 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (174 PS ಪವರ್, 205 Nm ಪೀಕ್ ಟಾರ್ಕ್), 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ (186 PS ಪವರ್ ಹಾಗೂ 206 Nm ಪೀಕ್ ಟಾರ್ಕ್) ಹೊಂದಿದ್ದು, 6 ಏರ್‌ಬ್ಯಾಗ್ಸ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ, ನವೀಕರಿಸಿದ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್‌ನ್ನು 2024ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಪವರ್‌ಟ್ರೇನ್, ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿರಲಿದೆ. ಈ ಕಾರು, ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನೂತನ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 35-40 kmpl ಮೈಲೇಜ್ ನೀಡಲಿದೆ.
ಇನ್ನು, ಕಂಪನಿಯು ಎಲೆಕ್ಟ್ರಿಕ್ ಕಾರನ್ನು ಕೂಡ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿರುವ 5 ಡೋರ್ ಜಿಮ್ನಿ ಮುಂದಿನ ತಿಂಗಳು ಬಿಡುಗಡೆಯಾಗುವ ನೀರಿಕ್ಷೆ ಇದ್ದು, ಅದನ್ನೇ ಅನುಸರಿಕೊಂಡು ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಪ್ರೀಮಿಯಂ ಎಂಪಿವಿ, ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಲಾಂಚ್ ಆಗಲಿವೆ. ಇವು ದೇಶೀಯ ಮಾರುಕಟ್ಟೆಯಲ್ಲಿ ಅಬ್ಬರಿಸುವುದು ಖಚಿತ.


Click it and Unblock the Notifications