ನಿಜವಾದ ಹಬ್ಬ ಆಗಸ್ಟ್‌ನಲ್ಲಿದೆ! ಟಾಟಾ, ಮಹೀಂದ್ರಾದಿಂದ ಧೂಳೆಬ್ಬಿಸುವ ಕಾರುಗಳು ಬಿಡುಗಡೆಗೆ ಸಜ್ಜು!
ಭಾರತೀಯ ಆಟೋ ಉದ್ಯಮದಲ್ಲಿ ಆಗಸ್ಟ್ ತಿಂಗಳು ರೋಮಾಂಚನಕಾರಿಯಾಗಿರಲಿದೆ. ಎಸ್‌ಯುವಿ ಉತ್ಸಾಹಿಗಳಿಗಾಗಿ ಏಳು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಬೆರಗುಗೊಳಿಸಲು ಕಾರು ಬ್ರಾಂಡ್‌ಗಳು ಸಜ್ಜಾಗುತ್ತಿವೆ. ಹಬ್ಬದ ಸೀಸನ್ ಹತ್ತಿರವಾಗುತ್ತಿದ್ದಂತೆ ಎಸ್‌ಯುವಿ ಪ್ರಿಯರಿಗೆ ಈ ತಿಂಗಳು ವೈವಿಧ್ಯಮಯ ಆಯ್ಕೆಗಳನ್ನು ನೀಡಲಿದೆ. ಸಿಟ್ರನ್ ಬಸಾಲ್ಟ್, ಮಹೀಂದ್ರಾ ಥಾರ್ ರಾಕ್ಸ್, ಟಾಟಾ ಕರ್ವ್, ಟಾಟಾ ಕರ್ವ್ ಇವಿ, ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್‌ಸಿ 43 ಕೂಪೆ, ಮರ್ಸಿಡಿಸ್ ಸಿಎಲ್ಇ ಕ್ಯಾಬ್ರಿಯೋಲೆಟ್, ನಿಸ್ಸಾನ್ ಎಕ್ಸ್-ಟ್ರೈಲ್, ಲ್ಯಾಂಬೊರ್ಗಿನಿ ಉರುಸ್ ಎಸ್ಇ ಕಾರುಗಳು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿವೆ.
ಮಹೀಂದ್ರಾ ಥಾರ್ ರೋಕ್ಸ್: ಮಹೀಂದ್ರಾ ಕಂಪನಿಯು ತನ್ನ 5-ಡೋರ್ ಥಾರ್ ರೋಕ್ಸ್ ಕಾರನ್ನು ಆಗಸ್ಟ್ 15 ರಂದು ಬಿಡುಗಡೆಗೊಳಿಸಲಿದೆ. ವರ್ಧಿತ ಒಳಾಂಗಣ ಸ್ಥಳಾವಕಾಶ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್) ನಂತಹ ಸುಧಾರಿತ ವೈಶಿಷ್ಟ್ಯಗಳು ಥಾರ್ ರೊಕ್ಸ್ ಅನ್ನು ಮಹೀಂದ್ರಾ ಶ್ರೇಣಿಗೆ ಹೆಚ್ಚು ನಿರೀಕ್ಷಿತ ಸೇರ್ಪಡೆಯನ್ನಾಗಿ ಮಾಡಿವೆ.

ಟಾಟಾ ಕರ್ವ್: ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಕರ್ವ್ ಎಸ್‌ಯುವಿಯನ್ನು ಆಗಸ್ಟ್ 7 ರಂದು ಬಿಡುಗಡೆ ಮಾಡಲಿದೆ. ಇದು ಮೊದಲು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿದ್ದು, ನಂತರ ಐಸಿಇ ಆವರತ್ತಿಯಲ್ಲಿ ಬಿಡುಗಡೆಯಾಗಲಿದೆ. ಇದರ ಇವಿ ವರ್ಷನ್ 50 ಕಿಲೋವ್ಯಾಟ್ ಸಾಮರ್ಥ್ಯದ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿರುತ್ತದೆ, ಇದು 500 ಕಿ.ಮೀ ರೇಂಜ್ ನೀಡುತ್ತದೆ. ಖರೀದಿದಾರರಿಗೆ ಸಿಂಗಲ್ ಮತ್ತು ಡ್ಯುಯಲ್ ಮೋಟಾರ್ ಪವರ್ ಟ್ರೇನ್ ಆಯ್ಕೆಗಳಿರಲಿವೆ.
ಸಿಟ್ರನ್ ಬಸಾಲ್ಟ್: ಮೂಲಗಳ ಪ್ರಕಾರ, ಸಿಟ್ರನ್ ಆಗಸ್ಟ್ 2 ರಂದು ಕೂಪೆ ಶೈಲಿಯ ಎಸ್‌ಯುವಿಯಾದ ಬಸಾಲ್ಟ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಇದು 1.2-ಲೀಟರ್ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 109 ಬಿಹೆಚ್‌ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಹೊಸ ಕೂಪೆ-ಎಸ್‌ಯುವಿ, ಟಾಟಾ ಮೋಟಾರ್ಸ್‌ನ ಮುಂಬರುವ ಕರ್ವ್‌ಗೆ ಪ್ರತಿಸ್ಪರ್ಧಿಯಾಗಿದೆ.

ನಿಸ್ಸಾನ್ ಎಕ್ಸ್-ಟ್ರೈಲ್: ನಿಸ್ಸಾನ್ ತನ್ನ ಎಕ್ಸ್-ಟ್ರಯಲ್ ಅನ್ನು ಭಾರತೀಯ ಮಾರುಕಟ್ಟೆಗೆ ಮತ್ತೆ ಪರಿಚಯಿಸಲು ಸಜ್ಜಾಗಿದೆ. ಈಗಾಗಲೇ ಪ್ರೀ-ಬುಕಿಂಗ್ ನಡೆಯುತ್ತಿದ್ದು, ಹೊಸ ತಲೆಮಾರಿನ ಎಕ್ಸ್-ಟ್ರೈಲ್ ಆಗಸ್ಟ್ 1 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಸಿವಿಟಿ ಟ್ರಾನ್ಸ್ ಮಿಷನ್‌ನೊಂದಿಗೆ ಜೋಡಿಸಲಾದ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 160 ಬಿಹೆಚ್‌ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ ಸಿ 43 ಕೂಪೆ: ಮರ್ಸಿಡಿಸ್ ಬೆಂಝ್ ಕಂಪನಿಯು ಎಎಂಜಿ ಜಿಎಲ್‌ಸಿ 43 ಕೂಪೆ ಕಾರನ್ನು ಆಗಸ್ಟ್ 8ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿರಲಿದ್ದು, 415 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮರ್ಸಿಡಿಸ್ ಸಿಎಲ್ಇ ಕ್ಯಾಬ್ರಿಯೋಲೆಟ್: ಅದೇ ದಿನ, ಮರ್ಸಿಡಿಸ್ ತನ್ನ ಶ್ರೇಣಿಯಲ್ಲಿ ಸಿ-ಕ್ಲಾಸ್ ಕ್ಯಾಬ್ರಿಯೋಲೆಟ್ ಬದಲಿಗೆ ಸಿಎಲ್ಇ ಕ್ಯಾಬ್ರಿಯೋಲೆಟ್ ಅನ್ನು ಸಹ ಬಿಡುಗಡೆ ಮಾಡಲಿದೆ. ಇದು ಕೂಡ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2.0-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಮತ್ತು 3.0-ಲೀಟರ್ ಆರು ಸಿಲಿಂಡರ್ ಘಟಕವನ್ನು ಹೊಂದಿರಲಿದ್ದು, 375 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಲ್ಯಾಂಬೊರ್ಗಿನಿ ಉರುಸ್ ಎಸ್ಇ: ಇಟಾಲಿಯನ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಆಗಸ್ಟ್ 9 ರಂದು ಉರುಸ್ ಎಸ್‌ಇ ಅನ್ನು ಅನಾವರಣಗೊಳಿಸಲಿದೆ. ಉರುಸ್ ಎಸ್‌ಯುವಿಯ ಅತ್ಯಂತ ಶಕ್ತಿಶಾಲಿ ಆವೃತ್ತಿಯಾದ ಎಸ್‌ಇ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಎಂಜಿನ್ ಅನ್ನು 25.9 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಸಂಯೋಜಿಸಿ 789 ಬಿಹೆಚ್‌ಪಿ ಪವರ್ ಮತ್ತು 950 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


Click it and Unblock the Notifications