ಶ್ರೀಸಾಮಾನ್ಯರ ಕಾತರ ಹೆಚ್ಚಾಯ್ತು.. 5 ಹೊಸ ಕಾರುಗಳು ಬರಲಿವೆ, 10 ಲಕ್ಷಕ್ಕಿಂತ ಕಡಿಮೆ ಬೆಲೆ!
ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ತಿಂಗಳು ಒಂದಿಲ್ಲೊಂದು ಹೊಸ ಕಾರುಗಳು ಬಿಡುಗಡೆಯಾಗುತ್ತವೆ. ಮುಂದಿನ ವರ್ಷವು ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ನೂತನ ಕಾರುಗಳನ್ನು ಪರಿಚಯಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಸಹ ತಯಾರಿ ನಡೆಸುತ್ತಿವೆ. ಅದರಲ್ಲೂ ಸ್ಕೋಡಾ, ಮಾರುತಿ ಸುಜುಕಿ, ಹ್ಯುಂಡೈ, ಕಿಯಾ ಹಾಗೂ ನಿಸ್ಸಾನ್ ಕಂಪನಿಗಳಿಂದ ತಲಾ ಒಂದು ಕಾಂಪ್ಯಾಕ್ಟ್ ಎಸ್‌ಯುವಿಗಳು (Compact SUV) ಮಾರಾಟಕ್ಕೆ ಬರಲಿವೆ. ಇವುಗಳು ರೂ.10 ಲಕ್ಷಕ್ಕಿಂತ ಕಡಿಮೆ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುವ ನಿರೀಕ್ಷೆಯಿದೆ.
ಮೊದಲಿಗೆ ಸ್ಕೋಡಾ ಕೈಲಾಕ್ (Skoda Kylaq) ಎಸ್‌ಯುವಿ ಬಗ್ಗೆ ಮಾತನಾಡೋಣ. ಈ ಎಸ್‌ಯುವಿ 2025ರ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರೂ. 8.5 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ನೂತನ ಕಾರು 1-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿರಲಿದೆ ಎನ್ನಲಾಗಿದೆ.

ಈ ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಇದು ಅತ್ಯಾಧುನಿಕ ವಿನ್ಯಾಸವನ್ನು ಒಳಗೊಂಡಿರಲಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಫುಲ್-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಎರಡನೇ ತಲೆಮಾರಿನ ಹ್ಯುಂಡೈ ವೆನ್ಯೂ (Hyundai Venue) ಎಸ್‌ಯುವಿ 2025ರ ಮಧ್ಯಭಾಗದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದ್ದು, ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಹತ್ತಾರು ಬದಲಾವಣೆ ಪಡೆದುಕೊಂಡಿರಲಿದೆ. ಈ ಕಾರು ಕೂಡ ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ. ಸದ್ಯ ಖರೀದಿಗೆ ಸಿಗುವ ಹ್ಯುಂಡೈ ವೆನ್ಯೂ ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.7.94 ಲಕ್ಷದಿಂದ ರೂ.13.48 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ಹೊಚ್ಚ ಹೊಸ ಕಿಯಾ ಸಿರೋಸ್ (Kia Syros) ಎಸ್‌ಯುವಿಯು 2025ರ ಮಧ್ಯಭಾಗದಲ್ಲಿಯೇ ಬಿಡುಗಡೆಯಾಗಬಹುದು. ಪ್ರಸ್ತುತ ಈ ಕಾರು ತಯಾರಿಕೆ ಹಂತದಲ್ಲಿದೆ. ಸೋನೆಟ್ ಎಸ್‌ಯುವಿಗಿಂತ (ರೂ.8 ಲಕ್ಷದಿಂದ ರೂ.15.77 ಲಕ್ಷ) ಕೊಂಚ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದ್ದು, ರೂ.10 ಲಕ್ಷದೊಳಗೆ ಬಿಡುಗಡೆಯಾಗಬಹುದು. ದೊಡ್ಡದಾದ ಟಚ್‌ಸ್ಕ್ರೀನ್, ಡಿಜಿಟಲ್ ಕ್ಲಸ್ಟರ್, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡರುವ ನಿರೀಕ್ಷೆಯಿದೆ.
ನೂತನ ಫೇಸ್‌ಲಿಫ್ಟ್ ನಿಸ್ಸಾನ್ ಮ್ಯಾಗ್ನೈಟ್ (Facelift Nissan Magnite) ಎಸ್‌ಯುವಿಯನ್ನು ನವೀಕರಿಸಿದ ರೂಪದಲ್ಲಿ 2025ರ ಆರಂಭದಲ್ಲಿ ಪರಿಚಯಿಸುವ ನೀರಿಕ್ಷೆಯಿದೆ. ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಒಳಗೊಂಡಿರಲಿದೆ. ಈಗಿರುವ ಮ್ಯಾಗ್ನೈಟ್ ಕಾರು ರೂ.6 ಲಕ್ಷದಿಂದ ರೂ.11.27 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, 17.40 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಫೇಸ್‌ಲಿಫ್ಟ್ ಮಾರುತಿ ಸುಜುಕಿ ಫ್ರಾಂಕ್ಸ್ (Facelift Maruti Suzuki Fronx) ಎಸ್‍ಯುವಿಯು ಸಾಕಷ್ಟು ಹೊಸತನಗಳೊಂದಿಗೆ 2025ರ ಮಧ್ಯಭಾಗದಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಪವರ್‌ಟ್ರೇನ್ ಒಳಗೊಂಡಿರಲಿದೆ. ಸದ್ಯ ಖರೀದಿಗೆ ದೊರೆಯುವ ಫ್ರಾಂಕ್ಸ್ ರೂ.7.51 ಲಕ್ಷದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications