ಕೋಟಿ ಬೆಲೆಯ ವಾಹನಗಳಲ್ಲಿ ಸಿಗುವ ADAS ಫೀಚರ್ ಈ ಅಗ್ಗದ ಕಾರುಗಳಲ್ಲಿಯೂ ಲಭ್ಯ!
ಅತ್ಯಾಧುನಿಕ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ)ಫೀಚರ್ ಮೊದಲು ಪ್ರೀಮಿಯಂ ಕಾರುಗಳಲ್ಲಿ ಮಾತ್ರ ನೀಡಲಾಗುವ ವೈಶಿಷ್ಟ್ಯವಾಗಿತ್ತು. ಈ ಹಿಂದೆ ಕೆಲವೇ ದುಬಾರಿ ಕಾರುಗಳಲ್ಲಿ ಲಭ್ಯವಿತ್ತು, ಆದರೆ ಈಗ ಬಹುತೇಕ ಎಲ್ಲಾ ಕಾರುಗಳಲ್ಲಿಯೂ ಬರಲು ಪ್ರಾರಂಭಿಸಿದೆ. ಹೊಸ ಹೋಂಡಾ ಅಮೇಜ್ ADAS ನೊಂದಿಗೆ ಭಾರತದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಕಾರಾಗಿದೆ. ಅಮೇಜ್‌ನಲ್ಲಿ ADAS ಫೀಚರ್‌ನೊಂದಿಗೆ ಸಿಗುವ ವೇರಿಯೆಂಟ್ ಬೆಲೆಯು 9.7 ಲಕ್ಷ ರೂ. ಇದೆ. ಕೇವಲ ಹೋಂಡಾ ಅಮೇಜ್ ಮಾತ್ರವಲ್ಲದೇ ಭಾರತದಲ್ಲಿ ಮಹೀಂದ್ರಾ, ಹ್ಯುಂಡೈ ಬ್ರಾಂಡ್‌ಗಳು ಕೂಡ ತಮ್ಮ ಅಗ್ಗದ ಬೆಲೆಯ ಕಾರುಗಳಲ್ಲಿ ADAS ಫೀಚರ್ ನೀಡುತ್ತಿವೆ.
ADAS ಫೀಚರ್ ಹೊಂದಿರುವ ಇತರ ಅಗ್ಗದ ಕಾರುಗಳನ್ನು ನೋಡುವುದಾದ್ರೆ, ಮಹೀಂದ್ರಾ ಇದೇ ವರ್ಷದಲ್ಲಿ ಬಿಡುಗಡೆ ಮಾಡಿರುವ XUV3X0 ಎಸ್‌ಯುವಿಯು ADAS ಫೀಚರ್ ಹೊಂದಿದೆ. 12 ಲಕ್ಷ ರೂ. ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುವ AX5 L ವೇರಿಯೆಂಟ್‌ನಲ್ಲಿ ADAS ಫೀಚರ್ ಪಡೆಯಬಹುದು. ಭಾರತದಲ್ಲಿ ಮೂರನೇ ಅತ್ಯಂತ ಕೈಗೆಟುಕುವ ಕಾರು ಹ್ಯುಂಡೈನ ವೆನ್ಯೂ ಆಗಿದ್ದು, ಇದರ ಬೆಲೆ 12 ಲಕ್ಷ (ಎಕ್ಸ್ ಶೋರೂಂ)ರೂ. ಇದೆ.

ADAS (Advanced Driver Assistance System) ಭಾರತೀಯ ರಸ್ತೆಗಳಿಗೆ ಸೂಕ್ತವೆ?: ಲೆವೆಲ್-2 ADAS ನಲ್ಲಿ ನೀಡಲಾಗುವ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಚೇಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, 360 ಡಿಗ್ರಿ ಕ್ಯಾಮೆರಾ, ಸ್ವಾಯತ್ತ ತುರ್ತು ಬ್ರೇಕಿಂಗ್ (Autonomous emergency braking) ಮುಂತಾದ ಫೀಚರ್‌ಗಳೊಂದಿಗೆ ಚಾಲಕನಿಗೆ ದೈನಂದಿನ ಸನ್ನಿವೇಶಗಳಲ್ಲಿ ಸಹಾಯ ಮಾಡುತ್ತವೆ. ಇವುಗಳ ಮೂಲಕ ಕಾರಿನಲ್ಲಿರುವ ಪ್ರಯಾಣಿಕರು ಗರಿಷ್ಟ ಸುರಕ್ಷತೆ ಪಡೆಯಬಹುದು.
ಈ ಫೀಚರ್ ಪ್ರಯಾಣಿಕರ ಜೀವವನ್ನು ಉಳಿಸಲು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳುವ ಅಡ್ವಾನ್ಸ್ಡ್ ಫೀಚರ್ ಆಗಿದೆ. ಆದರೆ ಇದನ್ನು ಭಾರತದಲ್ಲಿ ಜನರು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಉದ್ದೇಶಪೂರ್ವಕವಾಗಿ ವಾಹನ ಚಾಲಕರು ಕಾರು ಚಾಲನೆಯಲ್ಲಿದ್ದಾಗಲೇ ಡ್ರೈವರ್ ಸೀಟ್‌ನಿಂದ ಎದ್ದುಬರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ಮುಂದುವರಿದ ದೇಶಗಳಲ್ಲಿ ನಿಯಮಗಳ ಪಾಲನೆ ಕಟ್ಟುನಿಟ್ಟಾಗಿ ಇರುತ್ತದೆ. ಆದರೆ ಭಾರತದಲ್ಲಿ ಟ್ರಾಫಿಕ್ ನಿಯಮಗಳನ್ನು ಪಾಲಿಸುವವರು ತೀರಾ ಕಡಿಮೆ ಎಂದು ಹೇಳಬಹುದು. ADAS ಕೇವಲ ರಸ್ತೆ ಚಿಹ್ನೆ, ಲೇನ್ ಗುರುತುಗಳು ಹಾಗೂ ಟ್ರಾಫಿಕ್ ಸಿಗ್ನಲ್‌ಗಳನ್ನು ಅನುಸರಿಸಿ ಕಾರ್ಯನಿರ್ವಹಿಸುತ್ತದೆ. ಇವುಗಳಿಲ್ಲದೆ, ವಾಹನದ ಸ್ವಯಂ ಚಾಲನೆಯು ತುಂಬಾ ಅಪಾಯಕಾರಿ ಎಂದು ಹೇಳಬಹುದು.
ಈ ಫೀಚರ್‌ಗಳನ್ನು ನೀಡುವ ಕಾರು ಕಂಪನಿಗಳು ಎಂದೂ ಕೂಡ ಚಾಲಕನಿಲ್ಲದೇ ಕಾರು ಓಡಿಸಲು ಹೇಳಿಲ್ಲ. ಚಾಲಕರ ಜೀವನವನ್ನು ಸುಲಭಗೊಳಿಸಲು ಇವುಗಳನ್ನು ಕಟ್ಟುನಿಟ್ಟಾಗಿ ಬಳಸಬೇಕು ಎಂದು ಕಾರು ತಯಾರಕರು ಪದೇ ಪದೇ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಚಾಲಕ ಡ್ರೈವಿಂಗ್‌ನಲ್ಲಿದ್ದಾಗ ತನ್ನ ಗಮನ ರಸ್ತೆಯಿಂದ ಬೇರೆಡೆ ಹೋಗಬಾದರು ಹಾಗೂ ಸ್ಟೀರಿಂಗ್ ವೀಲ್‌ನಿಂದ ಕೈ ತೆಗೆಯಬಾರದು ಎಂದು ಹೇಳುತ್ತವೆ.

ಈಗ ಅಗ್ಗದ ಬೆಲೆಯಲ್ಲಿ ADAS ಫೀಚರ್ ನೀಡುತ್ತಿರುವುದು ಒಂದೆಡೆ ಆತಂಕ ಮೂಡಿಸಿದೆ. ಸಾರ್ವಜನಿಕರು ಮೊದಲು ಈ ಫೀಚರ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಖರೀದಿಸಬೇಕು. ಈ ಫೀಚರ್ ಅನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು, ಇಲ್ಲದಿದ್ದರೇ ನಿಮಗೆ ಮಾತ್ರವಲ್ಲ ನಿಮ್ಮ ಅಕ್ಕಪಕ್ಕದ ವಾಹನ ಸವಾರರಿಗೂ ಅಪಾಯ ಕಟ್ಟಿಟ್ಟಬುತ್ತಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications