Ashok Leyland: ಬೃಹತ್ ಆರ್ಡರ್ ಬಾಚಿಕೊಂಡ ಅಶೋಕ್ ಲೇಲ್ಯಾಂಡ್.. 500 ಸರ್ಕಾರಿ ಎಲೆಕ್ಟ್ರಿಕ್ ಬಸ್‌ಗಳಿಗೆ ಒಪ್ಪಂದ!
ಅಶೋಕ್ ಲೇಲ್ಯಾಂಡ್ (Ashok Leyland), ಅತಿದೊಡ್ಡ ವಾಣಿಜ್ಯ ವಾಹನ (Commercial Vehicle) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಬಸ್, ಟ್ರಕ್ ಹಾಗೂ ಪಿಕ್ಅಪ್ ಟ್ರಕ್‌ಗಳು ವಿಶ್ವಾಸಾರ್ಹತೆಗೆ ಹೆಸರುವಾಗಿವೆ. ಸದ್ಯ ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಗೆ (ಎಂಟಿಸಿ) 500 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲು ಅಶೋಕ್ ಲೇಲ್ಯಾಂಡ್ ಅಂಗಸಂಸ್ಥೆಯಾದ ಒಹೆಚ್ಎಂ ಗ್ಲೋಬಲ್ ಮೊಬಿಲಿಟಿ (OHM Global Mobility) ಬೃಹತ್ ಆರ್ಡರ್ ಪಡೆದುಕೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಶೀಘ್ರದಲ್ಲಿಯೇ ನೂತನ ಇಐವಿ12 (EiV12) ಎಲೆಕ್ಟ್ರಿಕ್ ಬಸ್‌ಗಳನ್ನು ಕಂಪನಿಯು ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಿದೆ. 12 ವರ್ಷಗಳ ಅವಧಿಗೆ ಒಹೆಚ್ಎಂ ಗ್ಲೋಬಲ್ ಮೊಬಿಲಿಟಿಯೇ ಈ ಹೊಸ ಬಸ್‌ಗಳ ನಿರ್ವಹಣೆ ಮಾಡಲಿದೆ. ಒಟ್ಟು 500 ಬಸ್‌ಗಳಲ್ಲಿ 400 ನಾನ್-ಎಸಿ ಹಾಗೂ 100 ಎಸಿ ಬಸ್‌ಗಳು ಸೇರಿವೆ.

ಅಶೋಕ್ ಲೇಲ್ಯಾಂಡ್ ಒತಡೆತನದ ಮತ್ತೊಂದು ಅಂಗಸಂಸ್ಥೆಯಾಗಿರುವ ಸ್ವಿಚ್ ಮೊಬಿಲಿಟಿ (Switch Mobility), ನೂತನ ಇಐವಿ12 (EiV12) ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸಿದೆ. ಸಾಕಷ್ಟು ಅತ್ಯಾಧುನಿಕವಾಗಿರುವ ಈ ಬಸ್‌ಗಳು, ಸಂಪೂರ್ಣ ಚಾರ್ಜ್‌ನಲ್ಲಿ 200 ಕಿಲೋಮೀಟರ್ ಕ್ರಮಿಸಬಲ್ಲವು. 37 ಪ್ರಯಾಣಿಕರು ಕುಳಿತುಕೊಂಡು ಪ್ರಯಾಣಿಸಿದರೆ, 24 ಮಂದಿ ನಿಂತುಕೊಂಡು ತೆರಳಬಹುದು.
ಬೃಹತ್ ಆರ್ಡರ್ ಪಡೆದುಕೊಂಡಿರುವ ಬಗ್ಗೆ ಅಶೋಕ್ ಲೇಲ್ಯಾಂಡ್ ಸಿಇಒ ಶೇನು ಅಗರ್ವಾಲ್ (Shenu Agarwal) ಅವರು ಸಂತಸ ಹಂಚಿಕೊಂಡಿದ್ದಾರೆ. 'ನಮ್ಮ ಕಂಪನಿಯು ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಯೊಂದಿಗೆ ಸುದೀರ್ಘವಾದ ಸಂಬಂಧ ಹೊಂದಿದೆ. ಇದು ದೇಶದ ಸಾರ್ವಜನಿಕ ಸಾರಿಗೆ ಸಂಪರ್ಕದ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿದೆ' ಎಂದು ಹೇಳಿದ್ದಾರೆ.
ಈ ಹಿಂದೆ ಅಶೋಕ್ ಲೇಲ್ಯಾಂಡ್, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೂ ದೊಡ್ಡ ಸಂಖ್ಯೆಯಲ್ಲಿ ಬಸ್‌ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿತ್ತು. ಈ ಕರಾರಿನ ಭಾಗವಾಗಿ 2,104 ಬಸ್‌ಗಳನ್ನು ಕಂಪನಿಯು ಹಸ್ತಾಂತರ ಮಾಡಲಿದೆ. ಪ್ರಸ್ತುತ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ದೇಶದಲ್ಲಿಯೇ ಅತಿಹೆಚ್ಚು (15,000) ಬಸ್‌ಗಳನ್ನು ಒಳಗೊಂಡಿದೆ.
ಅದಕ್ಕೂ ಮೊದಲು ಜನವರಿಯಲ್ಲಿ 1,225 ಬಸ್‌ಗಳನ್ನು ಪೂರೈಸಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳಿಂದ ಅಶೋಕ್ ಲೇಲ್ಯಾಂಡ್ ಆರ್ಡರ್ ಪಡೆದುಕೊಂಡಿತ್ತು. ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ ಕಂಪನಿಯ 11,680 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ನೂತನ ಬಸ್‌ಗಳು ಬಹಳಷ್ಟು ಅತ್ಯಾಧುನಿಕವಾಗಿದ್ದು, ಒಬಿಡಿ-II ಹೆಚ್-ಸೀರಿಯಸ್ ಎಂಜಿನ್‌ನ್ನು ಒಳಗೊಂಡಿವೆ.
ಅಶೋಕ್ ಲೇಲ್ಯಾಂಡ್ ಮಾರಾಟ ಮಾಡುವ 'ದೋಸ್ತ್ ಪ್ಲಸ್' ಜನಪ್ರಿಯ ಪಿಕ್ಅಪ್ ಟ್ರಕ್ ಆಗಿದ್ದು, ದುಡಿಯುವ ವರ್ಗದ ಜನರ ಕಾಮಧೇನುವಾಗಿದೆ. ರೂ.7.75 ರಿಂದ ರೂ.8.25 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1478 ಸಿಸಿ 3-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 19.6 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 2805 ಕೆಜಿ ಲೋಡ್‌ನ್ನು ಸಾಗಿಸಬಲ್ಲದು.
ಒಟ್ಟಾರೆಯಾಗಿ ಇತರೆ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಅಶೋಕ್ ಲೇಲ್ಯಾಂಡ್ ವಾಣಿಜ್ಯ ವಾಹನಗಳು ದಶಕಗಳಿಂದ ವಿಶ್ವಾಸಾರ್ಹವಾಗಿವೆ. ಆ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಸಾರಿಗೆ ಸಂಸ್ಥೆಗಳು ಕಂಪನಿ ಬಸ್‌ಗಳನ್ನೇ ಆಯ್ಕೆ ಮಾಡುತ್ತೇವೆ. ಜೊತೆಗೆ ಟ್ರಕ್ ಹಾಗೂ ಪಿಕ್ಅಪ್ ಟ್ರಕ್‌ಗಳು ಕೂಡ ಕಾರ್ಮಿಕ ವರ್ಗದ ಜನರ ನೆಚ್ಚಿನ ವಾಹನಗಳಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








