ರಾಮನಗರದ ಬಳಿ ಬೆಂಗಳೂರಿನ ಹೊಸ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯತೆ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಮತ್ತು ಹೊಸೂರಿನಲ್ಲಿ ವಿಮಾನ ನಿಲ್ದಾಣಕ್ಕಾಗಿ ತಮಿಳುನಾಡು ಸರ್ಕಾರ ಘೋಷಿಸಿರುವ ಯೋಜನೆಗಳಿಗೆ ಪ್ರತಿಕ್ರಿಯೆಯಾಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಬೆಂಗಳೂರು ಬಳಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಗೆ ಮುಂದಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣವು ಕಳೆದ ವರ್ಷವೊಂದರಲ್ಲೇ ದಾಖಲೆಯ 3.75 ಕೋಟಿ ಪ್ರಯಾಣಿಕರನ್ನು ಕಂಡಿದೆ, ಇತ್ತೀಚೆಗೆ ಟರ್ಮಿನಲ್ 2 ಸೇರ್ಪಡೆಯ ಹೊರತಾಗಿಯೂ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಟರ್ಮಿನಲ್ 3ರ ಅವಶ್ಯಕತೆ ಮತ್ತು ದಟ್ಟಣೆಯನ್ನು ಸರಾಗಗೊಳಿಸುವ ತುರ್ತು ಅಗತ್ಯದ ಬಗ್ಗೆ ಚರ್ಚೆಗಳನ್ನು ಪ್ರೇರೇಪಿಸಿದೆ.
ಈ ಒತ್ತಡವನ್ನು ನಿವಾರಿಸಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಇತ್ತೀಚೆಗೆ ಸಭೆ ನಡೆಸಿ ನೂತನ ವಿಮಾನ ನಿಲ್ದಾಣಕ್ಕೆ ಸಿದ್ಧತೆ ಆರಂಭಿಸಿದ್ದರು. ಸೂಕ್ತ ಸ್ಥಳಗಳನ್ನು ಗುರುತಿಸಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಕಾರ್ಯಕ್ಕೆ ಈಗ ಚಾಲನೆ ನೀಡಲಾಗಿದೆ.

ಮೂಲಗಳ ಪ್ರಕಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಸಾಮೀಪ್ಯವನ್ನು ನಿಯಂತ್ರಿಸುವ 150-ಕಿ.ಮೀ ತ್ರಿಜ್ಯದ ನಿಯಂತ್ರಣಕ್ಕೆ ಬದ್ಧವಾಗಿರುವ ಸಂಭಾವ್ಯ ಸ್ಥಳಗಳನ್ನು ಸ್ಕೌಟಿಂಗ್ ಮಾಡಲು ಪ್ರಾರಂಭಿಸಿದೆ. ಮತ್ತೊಂದೆಡೆ ಅಧಿಕಾರಿಗಳು ನೆಲಮಂಗಲ/ತುಮಕೂರು ಸುತ್ತಮುತ್ತ ಸಹ ಜಾಗ ಹುಡುಕಾಟದಲ್ಲೂ ನಿರತರಾಗಿದ್ದಾರೆ ಎನ್ನಲಾಗಿದೆ.
ಆದರೆ ಪ್ರಮುಖವಾಗಿ ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾದ ಸೂಚನೆ ಮೇರೆಗೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಶ್ಯಕತೆಯಿರುವ ಭೂಮಿ ಲಭ್ಯತೆ ಪರಿಶೀಲಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ ಇದಕ್ಕೂ ಕೆಲ ಸಮಸ್ಯೆಗಳಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವೇಳೆ ಈ ನಿಲ್ದಾಣದ ಸುತ್ತಮುತ್ತಲಿನ 150 ಕಿ.ಮೀ ವ್ಯಾಪ್ತಿಯಲ್ಲಿ ಮುಂದಿನ 25 ವರ್ಷಗಳ ಕಾಲ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಒಪ್ಪಂದ ಪೂರ್ಣಗೊಳ್ಳಲು ಇನ್ನೂ 9 ವರ್ಷಗಳು (2033) ಬಾಕಿ ಇವೆ. ಹೀಗಿರುವಾಗಲೇ ಕರ್ನಾಟಕ ಸರ್ಕಾರ ಎರಡನೇ ವಿಮಾನ ನಿಲ್ದಾಣ ವಿಚಾರವಾಗಿ ತಿರ್ಮಾನ ಕೈಗೊಂಡಿದೆ.
ಸದ್ಯ ನಿಯಮದಂತೆ ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಲಿನ 150 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ನಿಲ್ದಾಣ ನಿರ್ಮಿಸುವಂತಿಲ್ಲ. ಆದರೆ, ತಮಿಳುನಾಡು ಘೋಷಿಸಿರುವ ಹೊಸೂರು ವಿಮಾನ ನಿಲ್ದಾಣ ಹಾಗೂ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯ ಒಳಗೇ ಬರಲಿದೆ.
ಒಟ್ಟಾರೆ ಎರಡನೇ ವಿಮಾನ ನಿಲ್ದಾಣಕ್ಕೆ ಡಿಪಿಆರ್ ಆಗಬೇಕು, ಜಾಗ ಸಿಗಬೇಕು. ಡಿಪಿಆರ್‌ಗೆ ಅನುಮೋದನೆ ದೊರೆಯಬೇಕು. ಗುರುತಿಸಿದ ಜಾಗದ ಭೂಸ್ವಾಧಿನಕ್ಕೆ ಚಾಲನೆ ಸಿಗಬೇಕು. ಬಳಿಕ ಟೆಂಡರ್ ಕರೆದು ನಿರ್ಮಾಣಕ್ಕೆ ನೀಡಬೇಕು. ಅಷ್ಟರಲ್ಲಾಗಲೇ ಕೆಐಎ ಜೊತೆಗಿನ ಒಪ್ಪಂದದ ಅವಧಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ದೂರದೃಷ್ಟಿಯ ಯೋಜನೆ ಇದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications