BluSmart: ಓಲಾ, ಉಬರ್ ಪ್ರತಿಸ್ಪರ್ಧಿ.. ಸ್ವದೇಶಿ ಸಂಸ್ಥೆ ಬ್ಲೂಸ್ಮಾರ್ಟ್‌ನಲ್ಲಿ 'ಧೋನಿ' ಕಂಪನಿಯಿಂದ ಭಾರೀ ಹೂಡಿಕೆ!
ದೇಶದ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನ (Electric Vehicle - EV) ಬಳಸಿಕೊಂಡು ಟ್ಯಾಕ್ಸಿ ಸೇವೆ ಒದಗಿಸುವ ಗುರುಗ್ರಾಮ ಮೂಲದ ಬ್ಲೂಸ್ಮಾರ್ಟ್ (BluSmart) ರೂ.200 ಕೋಟಿ (24 ಮಿಲಿಯನ್ ಡಾಲರ್) ಬಂಡವಾಳ ಸಂಗ್ರಹಿಸಿದೆ. ಸ್ವಿಟ್ಜರ್ಲೆಂಡ್ ಮೂಲದ ರೆಸ್ಪಾನ್ಸ್ ಎಬಿಲಿಟಿ ಇನ್ವೆಸ್ಟ್‌ಮೆಂಟ್ಸ್ ಎಜಿ, ಸುಮಂತ್ ಸಿನ್ಹಾ ಮಾಲೀಕತ್ವದ ರಿನ್ಯೂ ಪವರ್ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಅವರಿಗೆ ಸೇರಿರುವ ಕಂಪನಿ ಸಹ ಬೃಹತ್ ಮೊತ್ತದ ಬಂಡವಾಳ ಹೂಡಿಕೆಯ ಭಾಗವಾಗಿದೆ.
'ಕಾರ್ಯಾಚರಣೆ ವಿಸ್ತರಿಸಲು ಹಾಗೂ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಹಣವನ್ನು ವಿನಿಯೋಗಿಸಲಾಗುವುದು' ಎಂದು ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಲೂಸ್ಮಾರ್ಟ್ ಸಹ-ಸಂಸ್ಥಾಪಕ ಪುನಿತ್ ಗೋಯಲ್ ಅವರು, 'ನಮ್ಮ ಸಂಸ್ಥೆಗೆ 24 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆಯು ಒಂದು ಮಹತ್ವದ ಮೈಲಿಗಲ್ಲು' ಎಂದು ಬಣ್ಣಿಸಿದ್ದಾರೆ.

ಬ್ಲೂಸ್ಮಾರ್ಟ್ 2019ರಲ್ಲಿ ಸ್ಥಾಪನೆಗೊಂಡಿತು. ಓಲಾ ಹಾಗೂ ಉಬರ್‌ನಂತೆ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿದ್ದು, ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಬಳಕೆ ಮಾಡುತ್ತಿದೆ. ಸದ್ಯ ನವದೆಹಲಿ, ಗುರುಗ್ರಾಮ, ನೋಯ್ಡಾ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಜೂನ್‌ನಲ್ಲಿ ತನ್ನ ಮೊದಲ ಅಂತರರಾಷ್ಟ್ರೀಯ ಟ್ಯಾಕ್ಸಿ ಸೇವೆಯನ್ನು ದುಬೈನಲ್ಲಿ ಕೂಡ ಶುರು ಮಾಡಿತ್ತು. ಕಂಪನಿಯು 2024ರ ಅಂತ್ಯದ ವೇಳೆಗೆ ಮುಂಬೈನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು ಉದ್ದೇಶಿಸಿದೆ.
2023ರ ಡಿಸೆಂಬರ್‌ನಲ್ಲಿ ಸಿಎನ್‌ಬಿಸಿ-ಟಿವಿ18ನೊಂದಿಗೆ ಮಾತನಾಡಿದ್ದ ಬ್ಲೂಸ್ಮಾರ್ಟ್ ಸಹ-ಸಂಸ್ಥಾಪಕ ಪುನಿತ್ ಗೋಯಲ್ ಅವರು ಕಂಪನಿಯ ವಾರ್ಷಿಕ ಆದಾಯ ರೂ.550 ಕೋಟಿ ($65 ಮಿಲಿಯನ್) ದಾಟಿದೆ ಎಂದು ಹೇಳಿದ್ದರು. ಪ್ರಸ್ತುತ ಬ್ಲೂಸ್ಮಾರ್ಟ್ ದೇಶಾದ್ಯಂತ 7,500 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದೆ. ಅದರಲ್ಲಿ ಮಹೀಂದ್ರಾ ಇ-ವೆರಿಟೊ, ಟಾಟಾ ಟಿಗೊರ್ ಇವಿ, ಟಾಟಾ ಎಕ್ಸ್‌ಪ್ರೆಸ್-ಟಿ ಇವಿ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಹಾಗೂ ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರುಗಳು ಸೇರಿವೆ. ಬರೋಬ್ಬರಿ 9,800 ಚಾಲಕರು ಕೆಲಸ ಮಾಡುತ್ತಿದ್ದಾರೆ.

ಈಗಾಗಲೇ, ಎಂ.ಎಸ್.ಧೋನಿ ಒಡೆತನದ ಕಂಪನಿಯು ಎಲೆಕ್ಟ್ರಿಕ್ ಸೈಕಲ್ ತಯಾರಕ ಇಮೊಟೊರಾಡ್ (EMotorad), ಸೆಕೆಂಡ್ ಹ್ಯಾಡ್ ಕಾರು ಮಾರಾಟ ಮಾಡುವ ಕಾರ್ಸ್ 24 (Seconds Retailer) ಮತ್ತು ಡಿಜಿಟಲ್ ಹಣಕಾಸು ಸಂಸ್ಥೆ ಖಾತಾಬುಕ್ (Khatabook)ನಲ್ಲಿಯೂ ಹೂಡಿಕೆ ಮಾಡಿದೆ. 'ಬ್ಲೂಸ್ಮಾರ್ಟ್‌ನಲ್ಲಿ ಹೂಡಿಕೆ ಮಾಡುವುದು ಕೇವಲ ಕಂಪನಿಯನ್ನು ಬೆಂಬಲಿಸುವುದು ಮಾತ್ರವಲ್ಲ, ವಿದ್ಯುತ್ (ಎಲೆಕ್ಟ್ರಿಕ್) ಚಲನಶೀಲತೆ ಭವಿಷ್ಯವನ್ನು ರೂಪಿಸುವುದರ ಭಾಗವಾಗಿವಾಗಿದೆ' ಎಂದು ಧೋನಿ ಅವರ ಕಂಪನಿ ತಿಳಿಸಿದೆ.
ಎಂ.ಎಸ್.ಧೋನಿ ಅವರ ಮಾಲೀಕತ್ವದ ಕಂಪನಿಯು ಬಂಡವಾಳ ಹೂಡಿರುವ ಇಮೊಟೊರಾಡ್ ವಿವಿಧ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ ಡೂಡಲ್ ವಿ3 (Doodle V3) ಪ್ರಮುಖವಾಗಿದ್ದು, ರೂ.52,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.. 12.75 ಎಹೆಚ್ ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, 60 ಕಿ.ಮೀಗೂ ಹೆಚ್ಚು ರೇಂಜ್ (ಮೈಲೇಜ್) ನೀಡುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಇಮೊಟೊರಾಡ್ ಇಎಂಎಕ್ಸ್ ಪ್ಲಸ್ (EMotorad EMX+) ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಸೈಕಲ್ ರೂ.59,999 ದರವನ್ನು ಪಡೆದಿದೆ. 13 ಎಹೆಚ್ ಬ್ಯಾಟರಿಯನ್ನು ಒಳಗೊಂಡಿದೆ. 80 ಕಿ.ಮೀಗೂ ಅಧಿಕ ದೂರ ಕ್ರಮಿಸುತ್ತದೆ. ಡೂಡಲ್ ವಿ2 (Doodle V2) ರೂ.49,999 ಬೆಲೆಯನ್ನು ಹೊಂದಿದೆ. 10.4 ಬ್ಯಾಟರಿ ಪ್ಯಾಕ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, 35 ಕಿ.ಮೀಗೂ ಹೆಚ್ಚು ರೇಂಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications