ಇಬ್ಬರೇ ಬಂದು 2,000 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
ಪ್ರಮುಖ ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್, CAB-EEZ ಇನ್‌ಫ್ರಾಟೆಕ್ ಪ್ರೈವೇಟ್‌ಗೆ 2,000 ಸಿಟ್ರನ್ ಇ-ಸಿ3 ಎಲೆಕ್ಟ್ರಿಕ್ ಕಾರುಗಳನ್ನು ಪೂರೈಸುವ ಒಪ್ಪಂದಕ್ಕೆ (MoU)ಸಹಿ ಮಾಡಿದೆ. ಈ ಪ್ರೈವೇಟ್ ಕಂಪನಿಯು ಮುಂಬೈ ಮತ್ತು ಪುಣೆಯಲ್ಲಿ ಕ್ಯಾಬ್-ಇ ಫ್ಲೀಟ್‌ನಲ್ಲಿ ವರ್ಷದಲ್ಲಿ 2,000 ಸಿಟ್ರನ್ ಇ-ಸಿ3 ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. ಒಪ್ಪಂದದ ಭಾಗವಾಗಿ, ಇಸಿ-3 ನ ಮೊದಲ ಹಂತದ 100 ಕಾರುಗಳನ್ನು ಹಸ್ತಾಂತರಿಸಲಾಗಿದೆ. ಮುಂಬೈನಲ್ಲಿ ಕ್ಯಾಬ್-ಇ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ಒಟ್ಟು ಸಿಟ್ರನ್ ë-ಸಿ3 ಫ್ಲೀಟ್ ಅನ್ನು ಮುಂಬೈ ಮತ್ತು ಪುಣೆಯಾದ್ಯಂತ 300ಕ್ಕೂ ಹೆಚ್ಚು ಘಟಕಗಳಿಗೆ ಕೊಂಡೊಯ್ಯಲಾಗುವುದು ಎಂದು ಕಂಪನಿ ತಿಳಿಸಿದೆ.
ಕಾರಿನ ವಿಶೇಷತೆಗಳು: ಸಿಟ್ರನ್ eC3 ಲೈವ್ ಹಾಗೂ ಫೀಲ್ ಎಂಬ ಎರಡು ರೂಪಾಂತರಗಳಲ್ಲಿ ಸಿಗಲಿದ್ದು, ಲೈವ್ ವೇರಿಯಂಟ್ ಬೆಲೆ ರೂ.11.50 ಲಕ್ಷವಿದ್ದು, ಫೀಲ್ ವೇರಿಯಂಟ್ ರೂ.12.43 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಇದು 29.2kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫ್ರಂಟ್ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಲಿದೆ.

ಈ ಎಲೆಕ್ಟ್ರಿಕ್ ಕಾರು 57 hp ಗರಿಷ್ಠ ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 107 ಕಿ.ಮೀ ಟಾಪ್ ಸ್ವೀಡ್ ಹೊಂದಿದ್ದು, ಕೇವಲ 6.8 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದೆ. ಈ ಕಾರು ಇಕೋ ಹಾಗೂ ಸ್ಟ್ಯಾಂಡರ್ಡ್ ಎಂಬ ಎರಡು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಸಹ ಹೊಂದಿದೆ.
ಸಿಟ್ರನ್ eC3 ಸಂಪೂರ್ಣ ಚಾರ್ಜಿನಲ್ಲಿ ಬರೋಬ್ಬರಿ 320 km ರೇಂಜ್ ನೀಡಲಿದ್ದು, ಚಾರ್ಜಿಂಗ್ ಬಗ್ಗೆ ಮಾತನಾಡುವುದಾದರೆ, ಈ ಕಾರಿನ ಬ್ಯಾಟರಿ ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಶೇಕಡ 10-80% ಚಾರ್ಜ್ ಆಗಲು 57 ನಿಮಿಷ ತೆಗೆದುಕೊಳ್ಳುತ್ತದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಶೇಕಡ 10-100% ಚಾರ್ಜ್ ಆಗಲು 10.5 ಗಂಟೆ ತೆಗೆದುಕೊಳುತ್ತದೆ.

ಈ ಎಲೆಕ್ಟ್ರಿಕ್ eC3 ನಲ್ಲಿ 10.2 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಫೋರ್ ಸ್ಪೀಕರ್ ಆಡಿಯೋ, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಪಡೆದಿದೆ. ಅಲ್ಲದೆ, MyCitroen ಕನೆಕ್ಟ್ ಅಪ್ಲಿಕೇಶನ್ ಅನ್ನು ಹೊಂದಿದ್ದು, ಇದು ಕಾರಿನ ಚಾರ್ಜಿಂಗ್ ಸ್ಟೇಟಸ್, ಹತ್ತಿರದ ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸುತ್ತದೆ.
ಸಿಟ್ರನ್ eC3 ಎಲೆಕ್ಟ್ರಿಕ್ ಕಾರು ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದೆ. ಡುಯೆಲ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ. ಬ್ಯಾಟರಿ ಪ್ಯಾಕ್‌ಗೆ 7 ವರ್ಷ/1,40,000 ಕಿ.ಮೀ, ಎಲೆಕ್ಟ್ರಿಕ್ ಮೋಟರ್‌ಗೆ 5 ವರ್ಷ/1,00,000 ಕಿ.ಮೀ ಹಾಗೂ ಕಾರಿಗೆ 3 ವರ್ಷ/1,25,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ.
ಒಪ್ಪಂದ ಕುರಿತು ಸಿಟ್ರನ್ ಇಂಡಿಯಾದ ಡೈರೆಕ್ಟರ್ ಶಿಶಿರ್ ಮಿಶ್ರಾ ಮಾತನಾಡಿ, ಸಿಟ್ರನ್ ë-C3 ಅದರ ಸಮರ್ಥ ಬ್ಯಾಟರಿ ಪ್ಯಾಕ್, ಸುಧಾರಿತ ಇ ಪವರ್‌ಟ್ರೇನ್ ಮತ್ತು ಸಮಗ್ರ ಸಂಪರ್ಕ ವೈಶಿಷ್ಟ್ಯಗಳೊಂದಿಗೆ, ಸಿಟ್ರೊಯೆನ್ ë - C3 ಹಸಿರು ಚಲನಶೀಲತೆಯ ಆಯ್ಕೆಗಳಿಗೆ ಪರಿವರ್ತನೆಗೊಳ್ಳುವ ವ್ಯವಹಾರಗಳಿಗೆ ಸೂಕ್ತವಾದ ಆಯ್ಕೆಯಾಗಿದೆ ಎಂದು ಡೈರೆಕ್ಟರ್ ಶಿಶಿರ್ ಮಿಶ್ರಾ ಹೇಳಿದರು.
Cab-E ನ ನಿರ್ದೇಶಕ (CEO) ಕುಲದೀಪ್ ಘೋಷ್ ಮಾತನಾಡಿ, ನಮ್ಮ ಫ್ಲೀಟ್‌ಗೆ Citroën ë-C3 EV ಗಳ ಏಕೀಕರಣವು ನಮ್ಮ ಲಾಭದ ಹಾದಿಯನ್ನು ವೇಗಗೊಳಿಸುತ್ತದೆ. ಉತ್ತಮ ಬ್ಯಾಟರಿ ದಕ್ಷತೆ, ಶಕ್ತಿಯುತ ಡ್ರೈವ್‌ಟ್ರೇನ್ ಮತ್ತು ಅತ್ಯುತ್ತಮ ಇನ್-ಕ್ಯಾಬಿನ್ ವೈಶಿಷ್ಟ್ಯಗಳು, ಕ್ಷಿಪ್ರ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ ತಕ್ಷಣದ ಕಾರ್ಯಾಚರಣೆಯ ಪ್ರಯೋಜನಗಳಿಗೆ ಬೆಸ್ಟ್ ಆಯ್ಕೆಯಾಗಿದೆ ಎಂದರು.


Click it and Unblock the Notifications








