ಟಾಟಾಗೆ ಟಕ್ಕರ್.. ಕೆಲವೇ ದಿನಗಳಲ್ಲಿ ಹೊಸ ಸಿಟ್ರನ್ ಬಸಾಲ್ಟ್ ಕಾರು ಬರುತ್ತೆ.. ಬೆಲೆ ಎಷ್ಟು?
ಫ್ರೆಂಚ್ ಮೂಲದ ಸಿಟ್ರನ್ (Citroen) ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಿ3, ಇಸಿ3, ಸಿ3 ಏರ್‌ಕ್ರಾಸ್ ಹಾಗೂ ಸಿ5 ಏರ್‌ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇವು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯ ಪಡೆದುಕೊಂಡಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಟಾಟಾ ಕರ್ವ್ (Tata Curvv) ಕೂಪೆ ಎಸ್‌ಯುವಿ ಬಿಡುಗಡೆಗೆ ಆಗಸ್ಟ್ 7ರಂದು ದಿನಾಂಕ ನಿಗದಿಪಡಿಲಾಗಿದೆ. ಅದಕ್ಕೆ ಪ್ರತಿಸ್ಪರ್ಧಿಯಾಗಿ ಇನ್ನೂ ಕೆಲವೇ ದಿನಗಳಲ್ಲಿ ಸಿಟ್ರನ್ ಕಂಪನಿಯು ಹೊಚ್ಚ ಹೊಸ ಬಸಾಲ್ಟ್ (Basalt) ಕಾರನ್ನು ಮಾರಾಟಕ್ಕೆ ತರಲಿದೆ ಎಂದು ವರದಿಯಾಗಿದೆ.
ಈಗಾಗಲೇ, ಸಿಟ್ರನ್ ಬಸಾಲ್ಟ್ (Citroen Basalt) ಕೂಪೆ ಎಸ್‌ಯುವಿಯನ್ನು ಅನಾವರಣಗೊಳಿಸಲಾಗಿದ್ದು, ಹೊರಭಾಗದಲ್ಲಿ ನವೀನ ಶೈಲಿಯ ವಿನ್ಯಾಸ (ಡಿಸೈನ್) ಹೊಂದಿದೆ. ಬಹುತೇಕ ಸಿ3 ಏರ್‌ಕ್ರಾಸ್ (C3 Aircross) ಕಾರಿಗೆ ಹೋಲಿಕೆಯಾಗುತ್ತದೆ. ಇದು ಅತ್ಯುತ್ತಮ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿ-ಆಕಾರದ ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆದಿದೆ. ರೂಫ್‌ಲೈನ್ ಇಳಿಜಾರಿನ ರೂಪದಲ್ಲಿದೆ. ಉತ್ತಮವಾದ ಟೈಲ್‌ಲೈಟ್‌ಗಳು ಮತ್ತು ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ಸಿಟ್ರನ್ ಬಸಾಲ್ಟ್ ಕಾರಿನ ಒಳಭಾಗದ ವಿನ್ಯಾಸ ಸಹ ಬಹಳಷ್ಟು ಅತ್ಯಾಧುನಿಕವಾಗಿದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 470 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಪೋಲಾರ್ ವೈಟ್, ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ, ಕಾಸ್ಮೊ ಬ್ಲೂ ಸೇರಿದಂತೆ 5-ಮೊನೊಟೋನ್ ಹಾಗೂ 2-ಡುಯಲ್ ಟೋನ್ ಬಣ್ಣಗಳೊಂದಿಗೆ ಲಭ್ಯವಿದೆ.
ಹೊಸ ಸಿಟ್ರನ್ ಬಸಾಲ್ಟ್ ಎರಡು ಶಕ್ತಿಯುತ ಪವರ್‌ಟ್ರೇನ್‌ಗಳನ್ನು ಹೊಂದಿದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 115 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಪಡೆದಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಸಿಗುತ್ತದೆ.

ಮತ್ತೊಂದು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಹೆಚ್‌ಪಿ ಗರಿಷ್ಠ ಶಕ್ತಿ ಉತ್ಪಾದಿಸುತ್ತದೆ. ಆದಾಗ್ಯೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿರುವ ರೂಪಾಂತರ (ವೇರಿಯೆಂಟ್) 190 ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿರುವ ರೂಪಾಂತರ 205 ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಈ ಕಾರು 18 ರಿಂದ 19.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್ ಹಾಗೂ ಪವರ್ ವಿಂಡೋಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ನ್ನು ಪಡೆದಿದೆ.
ನೂತನ ಸಿಟ್ರನ್ ಬಸಾಲ್ಟ್ ಕಾರು ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಈ ಕೂಪೆ ಎಸ್‌ಯುವಿಗೆ ನೇರವಾಗಿ ಸ್ಪರ್ಧೆಯೊಡ್ಡಲಿರುವ 'ಟಾಟಾ ಕರ್ವ್' ಹೆಚ್ಚು ಅತ್ಯಾಧುನಿಕವಾಗಿದೆ. ಮೊದಲಿಗೆ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ. ಆ ನಂತರ, ಇಂಧನ ಚಾಲಿತ (ಪೆಟ್ರೋಲ್/ ಡೀಸೆಲ್) ಆಯ್ಕೆಯಲ್ಲಿ ಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








