Bharat NCAP: ಟಾಟಾ ಕರ್ವ್ ಪ್ರತಿಸ್ಪರ್ಧಿ.. 7.99 ಲಕ್ಷದ ಸಿಟ್ರನ್ ಬಸಾಲ್ಟ್ ಕಾರಿಗೆ 4-ಸ್ಟಾರ್ ಸೇಫ್ಟಿ ರೇಟಿಂಗ್
ದೇಶದ ವಾಹನ ಸುರಕ್ಷತಾ ತಪಾಸಣೆ ಸಂಸ್ಥೆ 'ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ - Bharat NCAP), ನೂತನ ಸಿಟ್ರನ್ ಬಸಾಲ್ಟ್ (Citroen Basalt) ಕೂಪೆ ಎಸ್‌ಯುವಿಯನ್ನು ಪರೀಕ್ಷಿಸಿದೆ. ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ ಎಂಬುದು ವಿವಿಧ ಪರೀಕ್ಷೆಗಳಲ್ಲಿ ದೃಢಪಟ್ಟ ಹಿನ್ನೆಲೆ, 4-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ. ಇದು ಭಾರತ್ ಎನ್‌ಸಿಎಪಿ ತಪಾಸಣೆಗೆ ಒಳಪಟ್ಟ ಸಿಟ್ರನ್ ಕಂಪನಿಯ ಮೊದಲ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹೊಚ್ಚ ಹೊಸ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ (Citroen Basalt Coupe Suv), ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 26.19 ಅಂಕಗಳು ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 35.90 ಅಂಕಗಳನ್ನು ಗಳಿಸಿದೆ. ಈ ಮೂಲಕ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ಭಾರತ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿಯನ್ನು ಬೃಹದಾಕಾರದ ತಡೆಗೋಡೆಯೊಂದಕ್ಕೆ ವೇಗವಾಗಿ ಡಿಕ್ಕಿ ಹೊಡೆಸಲಾಯಿತು. ಅಲ್ಲಿ ಪ್ರಯಾಣಿಕರ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಈ ಕಾರಿನಲ್ಲಿದ್ದ ಸುರಕ್ಷತಾ ವೈಶಿಷ್ಟ್ಯಗಳು ಹೆಚ್ಚಿನ ರಕ್ಷಣೆ ಒದಗಿಸಿದವು. ಆದರೆ, ಎದೆ ಹಾಗೂ ಕಾಲಿನ ಭಾಗಕ್ಕೆ ಆ ಮಟ್ಟಿಗೆ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ. ಬಸಾಲ್ಟ್ ಎಸ್‌ಯುವಿಯ ಅಕ್ಕಪಕ್ಕದ (ಸೈಡ್) ಭಾಗವನ್ನು ಕೂಡ ಗುದ್ದಿಸಲಾಯಿತು. ಅದರಲ್ಲಿಯೂ ಉತ್ತಮ ಫಲಿತಾಂಶ ಕಾಣಲಾಯಿತು.
ಈ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ 6 - ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ, ರೂ.7.99 ರಿಂದ ರೂ.13.83 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಇದು ಬಸಾಲ್ಟ್ 1.2ಪಿ ಯು, ಬಸಾಲ್ಟ್ ಪ್ಲಸ್, ಬಸಾಲ್ಟ್ ಟರ್ಬೊ ಪ್ಲಸ್, ಬಸಾಲ್ಟ್ ಟರ್ಬೊ ಎಟಿ ಪ್ಲಸ್ ಹಾಗೂ ಬಸಾಲ್ಟ್ ಟರ್ಬೊ ಮ್ಯಾಕ್ಸ್ ಸೇರಿದಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ.
ನೂತನ ಕಾರು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 18 ರಿಂದ 19.5 ಕೆಎಂಪಿಎಲ್‌ವರೆಗೆ ಮೈಲೇಜ್ ಸಹ ನೀಡುತ್ತದೆ.
ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿಯಲ್ಲಿ 5 ಮಂದಿ ಓಡಾಟ ನಡೆಸಬಹುದು. ಈ ಕಾರು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.2-ಇಂಚು), ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ( 7-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








