Citroen: ಟಾಟಾ ಕರ್ವ್ ಪ್ರತಿಸ್ಪರ್ಧಿ.. ಹೊಸ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ ಅನಾವರಣ, ವಿಶೇಷತೆಗಳೇನು?
ಫ್ರೆಂಚ್ ಮೂಲದ ಸಿಟ್ರನ್ (Citroen) ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಆಕರ್ಷಕ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಟಾಟಾ ಕರ್ವ್ (Tata Curvv) ಕೂಪೆ ಎಸ್‌ಯುವಿಗೆ ಪ್ರತಿಸ್ಪರ್ಧಿಯಾಗಿ, ಸಿಟ್ರನ್ ಕಂಪನಿಯು ಶುಕ್ರವಾರ ಹೊಚ್ಚ ಹೊಸ ಬಸಾಲ್ಟ್ (Basalt) ಕಾರನ್ನು ಅನಾವರಣಗೊಳಿಸಿದೆ. ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ.
ವಿನ್ಯಾಸ: ನೂತನ ಸಿಟ್ರನ್ ಬಸಾಲ್ಟ್ (Citroen Basalt) ಎಸ್‌ಯುವಿ ಹೊರಭಾಗದಲ್ಲಿ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿದೆ. ಬಹುತೇಕ ಸಿ3 ಏರ್‌ಕ್ರಾಸ್ (C3 Aircross) ಎಸ್‌ಯುವಿಗೆ ಹೋಲಿಕೆಯಾಗುತ್ತದೆ. ನವೀನ ಶೈಲಿಯ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿ-ಆಕಾರದ ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆದಿದೆ. ರೂಫ್‌ಲೈನ್ ಇಳಿಜಾರಿನ ರೂಪದಲ್ಲಿದೆ. ಉತ್ತಮವಾದ ಟೈಲ್‌ಲೈಟ್‌ಗಳು ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಕಾರ್ಯಕ್ಷಮತೆ: ಸಿಟ್ರನ್ ಬಸಾಲ್ಟ್ ಎರಡು ಪವರ್‌ಟ್ರೇನ್‌ನೊಂದಿಗೆ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರ ಪಡೆದಿದೆ.
ಮತ್ತೊಂದು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಹೆಚ್‌ಪಿ ಗರಿಷ್ಠ ಶಕ್ತಿ ಹೊರಹಾಕುತ್ತದೆ. ಆದಾಗ್ಯೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ರೂಪಾಂತರ (ವೇರಿಯೆಂಟ್) 190 ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಪಡೆದಿರುವ ರೂಪಾಂತರ 205 ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಕಾರು 18 ರಿಂದ 19.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಆಸನ ಆಯ್ಕೆ, ಬಣ್ಣಗಳು: ಸಿಟ್ರನ್ ಬಸಾಲ್ಟ್ ಕಾರಿನ ಒಳಭಾಗದ ವಿನ್ಯಾಸ ಕೂಡ ಸಾಕಷ್ಟು ಅತ್ಯಾಧುನಿಕವಾಗಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 470 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಪೋಲಾರ್ ವೈಟ್, ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ, ಕಾಸ್ಮೊ ಬ್ಲೂ ಸೇರಿದಂತೆ 5-ಮೊನೊಟೋನ್ ಮತ್ತು 2-ಡುಯಲ್ ಟೋನ್ ಬಣ್ಣಗಳೊಂದಿಗೆ ದೊರೆಯುತ್ತದೆ.
ವೈಶಿಷ್ಟ್ಯಗಳು: ಈ ಕಾರು ಸಾಕಷ್ಟು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್ ಮತ್ತು ಪವರ್ ವಿಂಡೋಗಳನ್ನು ಹೊಂದಿದೆ.
ಸುರಕ್ಷತಾ ವೈಶಿಷ್ಟ್ಯಗಳು: ಸಿಟ್ರನ್ ಬಸಾಲ್ಟ್ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.
ಬೆಲೆ & ಪ್ರತಿಸ್ಪರ್ಧಿ ಕಾರುಗಳು: ಬಸಾಲ್ಟ್ ಎಸ್‌ಯುವಿ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರಿಗೆ ಮುಂಬರಲಿರುವ ಟಾಟಾ ಕರ್ವ್ ನೇರ ಎದುರಾಳಿಯಾಗಲಿದೆ. ಇದರೊಟ್ಟಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೋಂಡಾ ಎಲಿವೇಟ್ ಎಸ್‌ಯುವಿಗೂ ಸ್ಪರ್ಧೆಯೊಡ್ಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








