ಬೆಸ್ಟ್ ಕಾರಿದು... ಆದ್ರೆ ಯಾರೂ ಖರೀದಿಸುತ್ತಿಲ್ಲ! ಆರು ತಿಂಗಳಲ್ಲಿ ಕೇವಲ 6 ಕಾರುಗಳ ಮಾರಾಟ!
ಭಾರತೀಯ ವಾಹನ ಮಾರುಕಟ್ಟೆಯು ವಿಶ್ವದೇಶಗಳ ಕಾರು ತಯಾರಕ ಸಂಸ್ಥೆಗಳಿಗೆ ಚಿನ್ನದ ಮೊಟ್ಟೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಕಾರು ಖರೀದಿಯ ಪ್ರಮಾಣ ಭಾರೀ ಹೆಚ್ಚಳವಾಗಿದ್ದು, ಹೊಸ ಕಂಪನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ. ಅಂತಹ ಪ್ರಮುಖ ಕಾರು ತಯಾರಕರಲ್ಲಿ ಫ್ರೆಂಚ್ ಮೂಲದ ಸಿಟ್ರನ್ ಕೂಡ ಒಂದಾಗಿದೆ. ಸದ್ಯ ಸುಜುಕಿ, ಹ್ಯುಂಡೈ, ಕಿಯಾ, ಟೊಯೋಟಾದಂತಹ ಕೆಲವು ವಿದೇಶಿ ಬ್ರಾಂಡ್‌ಗಳು ಮಾತ್ರ ಇಲ್ಲಿ ಯಶಸ್ವಿಯಾಗಿವೆ. ಈ ಬ್ರಾಂಡ್‌ಗಳು ದೇಶೀಯ ಮಾರುಕಟ್ಟೆ ಹಾಗೂ ಇಲ್ಲಿನ ಜನರಿಗೆ ಬೇಕಾದ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ವಾಹನಗಳನ್ನು ಬಿಡುಗಡೆ ಮಾಡುತ್ತಿವೆ.
ಸಿಟ್ರನ್ ಕೂಡ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಪರದಾಡುತ್ತಿದೆ. ಕಂಪನಿಯ ಕಾರುಗಳು ಮಾರಾಟದಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತಿಲ್ಲ, ಜೊತೆಗೆ ಇತರ ಕಂಪನಿಗಳಿಗೆ ಸ್ಪರ್ಧೆ ನೀಡಲು ಹೆಣಗಾಡುತ್ತಿದೆ. ಹೌದು ಈ ವರ್ಷದ ಆಗಸ್ಟ್ ನಿಂದ ಸಿಟ್ರನ್‌ನ ಪ್ರಮುಖ ಎಸ್‌ಯುವಿಯಾದ ಸಿ5 ಏರ್‌ಕ್ರಾಸ್ ಅತ್ಯಂತ ಕೆಟ್ಟ ಮಾರಾಟವನ್ನು ದಾಖಲಿಸಿದೆ. ಕಳೆದ ಆರು ತಿಂಗಳಲ್ಲಿ ಕೇವಲ 6 ಕಾರುಗಳು ಮಾತ್ರ ಮಾರಾಟವಾಗಿವೆ.

ಶೋರೂಂಗಳಲ್ಲಿ ಇರಿಸಲಾಗಿರುವ ಕಾರುಗಳ ಬಗ್ಗೆಯೂ ಜನರು ಕಾಳಜಿ ವಹಿಸುತ್ತಿಲ್ಲ. ಮೇ, ಜೂನ್ ಮತ್ತು ಜುಲೈನಲ್ಲಿ ಒಂದೇ ಒಂದು ಸಿ5 ಏರ್‌ಕ್ರಾಸ್ ಕಾರು ಮಾರಾಟವಾಗಿಲ್ಲ. ಉಳಿದಂತೆ ಆಗಸ್ಟ್‌ನಲ್ಲಿ ಒಂದು ಮತ್ತು ಸೆಪ್ಟೆಂಬರ್‌ನಲ್ಲಿ ಕೇವಲ ಒಂದು ಕಾರು ಮಾರಾಟವಾಗಿದೆ. ಅಕ್ಟೋಬರ್‌ನಲ್ಲಿ ಕೇವಲ 4 ಕಾರುಗಳನ್ನು ಮಾರಾಟ ಮಾಡಿದೆ. ಅದು ಕೂಡ ಹಬ್ಬದ ಸಂದರ್ಭವಾಗಿ ಕಂಪನಿ ಆಫರ್ ಘೋಷಿಸಿದ್ದ ಕಾರಣ ನಾಲ್ಕು ಕಾರುಗಳು ಮಾರಾಟವಾಗಿವೆ.
ಬ್ರಾಂಡ್‌ಗೆ ಧೋನಿ ಸಪೋರ್ಟ್: ಕಂಪನಿಯು ಹೇಗಾದ್ರೂ ಮಾಡಿ ಭಾರತದಲ್ಲಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಎಂಎಸ್ ಧೋನಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿದೆ. ಜೊತೆಗೆ ಅಗ್ಗದ ಬೆಲೆಗೆ ಎಸ್‌ಯುವಿ ಕೂಪೆ ಶೈಲಿಯ ಸಿಟ್ರನ್ ಬಸಾಲ್ಟ್ ಕಾರನ್ನು ಬಿಡುಗಡೆ ಮಾಡಿದ್ದು, ಈ ಕಾರು ಕಂಪನಿಗೆ ತುಸು ದಣಿವರಿಸಿದೆ. ಹಾಗೆಯೇ ಧೋನಿಯಿಂದ ಕಂಪನಿಯ ಬ್ರ್ಯಾಂಡಿಂಗ್‌ಗೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದೆ ಎಂದು ಹೇಳಬಹುದು.

ಕಂಪನಿಯು ಪ್ರಸ್ತುತ ಸಿಟ್ರನ್ ಸಿ3, ಸಿ3 ಏರ್ ಕ್ರಾಸ್, ಇಸಿ 3, ಏರ್ ಕ್ರಾಸ್ ಸಿ5 ಮತ್ತು ಬಸಾಲ್ಟ್ ಎಸ್‌ಯುವಿ ಕೂಪೆಯನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಮೊದಲೇ ಹೇಳಿದಂತೆ ಕಂಪನಿಯ ಎಲ್ಲಾ ಕಾರುಗಳಿಗಿಂತ ಆಗಸ್ಟ್‌ನಲ್ಲಿ ಟಾಟಾ ಕರ್ವ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾದ ಬಸಾಲ್ಟ್ ಕೂಪೆ ಎಸ್‌ಯುವಿ ಇತರ ಕಾರುಗಳಿಗಿಂತ ಹೆಚ್ಚಿನ ಮಾರಾಟವನ್ನು ಗಳಿಸುತ್ತಿದೆ.
ಅದ್ಬುತ ಕಾರು, ಆದ್ರೆ ಮಾರಟ ಕುಸಿತ: ಸಿಟ್ರನ್ ಸಿ5 ಏರ್‌ಕ್ರಾಸ್ ತೀರಾ ಕೆಟ್ಟ ಕಾರೇನಲ್ಲ, ಉತ್ತಮ ಪರ್ಫಾಮೆನ್ಸ್ ಹಾಗೂ ಅತ್ಯುತ್ತಮ ಫೀಚರ್ಸ್ ಹೊಂದಿದೆ. 31.27 ಸೆಂ.ಮೀ ಇನ್ಸ್ಟ್ರುಮೆಂಟ್ ಕ್ಲಸ್ಟರ್, 25.4 ಸೆಂ.ಮೀ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸುರಕ್ಷತೆಗಾಗಿ 6 ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇವಿಷ್ಟೇ ಅಲ್ಲದೇ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳು, 3-ಪಾಯಿಂಟ್ ಐಎಸ್ ಒಫಿಕ್ಸ್ ಮೌಂಟ್‌ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಎಂಜಿನ್ ವಿಷಯಕ್ಕೆ ಬಂದರೆ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 127 ಬಿಹೆಚ್ ಪವರ್ ಮತ್ತು 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಮಾರಾಟ ಕುಸಿತಕ್ಕೆ ಕಾರಣವೇನು?: ಭಾರತದಲ್ಲಿ ಯಾವುದೇ ಕಾರಾಗಲಿ ಬೆಲೆಯನ್ನು ಅವಲಂಭಿಸಿ ಮಾರಾಟದ ಏರಿಕೆಯನ್ನು ಹೊಂದಿರುತ್ತದೆ. ಇಲ್ಲಿನ ಜನ ಅಗ್ಗದ ಬೆಲೆಗೆ ಅತ್ಯುತ್ತಮ ಕಾರುಗಳನ್ನು ಬಯಸುತ್ತಾರೆ. ಆದ್ರೆ ಸಿಟ್ರನ್ ಸಿ5 ಏರ್‌ಕ್ರಾಸ್ ಬೆಲೆಯು ರೂ. 36 ಲಕ್ಷ (ಎಕ್ಸ್ ಶೋರೂಂ) ಇದೆ. ಇದು ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








