ಅಬ್ಬರಿಸಿ ಬೊಬ್ಬಿರಿಯುತ್ತಿದೆ ಟಾಟಾದ ಕರ್ವ್: ಗರಿಷ್ಠ ಮಾರಾಟ.. ಶೀಘ್ರ ಹೊಸ ವೇರಿಯೆಂಟ್‌ಗಳು ಬಿಡುಗಡೆ!
ಭಾರತದ ಮಾರುಕಟ್ಟೆಯಲ್ಲಿ ಕೆಲವೇ ತಿಂಗಳ ಹಿಂದೆ, ಟಾಟಾ ಮೋಟಾರ್ಸ್ (Tata Motors) ಮಾರಾಟಕ್ಕೆ ತಂದಿದ್ದ ಕರ್ವ್ (Curvv) ಕೂಪೆ ಎಸ್‌ಯುವಿ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, ಅಕ್ಟೋಬರ್‌ನಲ್ಲಿ 5,351 ಯುನಿಟ್, ಸೆಪ್ಟೆಂಬರ್‌ನಲ್ಲಿ 4763 ಯುನಿಟ್ ಹಾಗೂ ಆಗಸ್ಟ್‌ನಲ್ಲಿ 3455 ಯುನಿಟ್ ಕರ್ವ್ ಎಸ್‌ಯುವಿಗಳನ್ನು ಯಶಸ್ವಿಯಾಗಿ ಕಂಪನಿಯು ಮಾರಾಟ ಮಾಡಲಾಗಿದೆ. ಈ ಕಾರು ಪೆಟ್ರೋಲ್/ಡೀಸೆಲ್ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದೆ.
ಇದೀಗ, ಟಾಟಾ ಕಂಪನಿಯಯು 'ಕರ್ವ್' ಎಸ್‌ಯುವಿಯ ಹೊಸ ರೂಪಾಂತರಗಳನ್ನು (ವೇರಿಯೆಂಟ್) ಪರಿಚಯಿಸಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳು (ಡಿಸೆಂಬರ್ - 2024) ಸಿಎನ್ಜಿ (CNG) ಹಾಗೂ ಡಾರ್ಕ್ ಎಡಿಷನ್ (Dark Edition) ರೂಪಾಂತರಗಳು ಅದ್ದೂರಿಯಾಗಿ ಮಾರಾಟಕ್ಕೆ ಬರಲಿವೆ ಎಂದು ತಿಳಿದುಬಂದಿದೆ.

ಮುಂಬರಲಿರುವ ಟಾಟಾ ಕರ್ವ್ ಸಿಎನ್ಜಿ ಎಸ್‌ಯುವಿ ಸಹ ನೆಕ್ಸಾನ್ ಕಾರಿಂದಂತೆ 'ಟ್ವಿನ್-ಸಿಲಿಂಡರ್' ತಂತ್ರಜ್ಞಾನವನ್ನು ಹೊಂದಿರುವ ನಿರೀಕ್ಷೆಯಿದೆ. ರೂ.11 ಲಕ್ಷದಿಂದ ರೂ.12 ಲಕ್ಷ (ಎಕ್ಸ್ ಶೋರೂಂ) ಆಸುಪಾಸಿನಲ್ಲಿ ಖರೀದಿಗೆ ದೊರೆಯಬಹುದು ಎಂದು ಹೇಳಲಾಗಿದೆ. 'ಡಾರ್ಕ್ ಎಡಿಷನ್'ನ್ನು ಪೆಟ್ರೋಲ್/ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಹೊಂದಿರುವ ಎರಡು ಕಾರುಗಳಲ್ಲಿ ಕಂಪನಿಯು ಪರಿಚಯಿಸಲಿದೆ ಎನ್ನಲಾಗಿದೆ.
ಪೆಟ್ರೋಲ್/ಡೀಸೆಲ್ ಟಾಟಾ ಕರ್ವ್ ಎಸ್‌ಯುವಿ ಕನಿಷ್ಠ ರೂ.10 ಲಕ್ಷ ಹಾಗೂ ಗರಿಷ್ಠ ರೂ.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ & 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್/ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಸ್ಮಾರ್ಟ್, ಪ್ಯೂರ್ ಪ್ಲಸ್, ಕ್ರಿಯೇಟಿವ್, ಕ್ರಿಯೇಟಿವ್ ಪ್ಲಸ್ ಎಸ್ ಹಾಗೂ ಅಕಾಂಪ್ಲಿಶ್ಡ್ ಎಸ್ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಇದರಲ್ಲಿ 5 ಜನರು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 500 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಈ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.3-ಇಂಚು), 4-ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು ಪನೊರೊಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಟಾಟಾ ಕರ್ವ್ ಇವಿಯೂ ಖರೀದಿಗೆ ಲಭ್ಯವಿದೆ. ಇದು ರೂ.17.49 ಲಕ್ಷದಿಂದ ರೂ.21.99 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಕ್ರಿಯೇಟಿವ್ ಮತ್ತು ಅಕಾಂಪ್ಲಿಶ್ಡ್ ಒಳಗೊಂಡಂತೆ ವಿವಿಧ ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ. ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಎಂಪವರ್ಡ್ ಆಕ್ಸೈಡ್ ಹಾಗೂ ಪ್ಯೂರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು 45 ಮತ್ತು 55 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. 430 ರಿಂದ 502 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಈ ಕಾರಿನಲ್ಲಿ 5 ಮಂದಿ ಸಂಚಾರ ನಡೆಸಬಹುದು. ದೂರದ ಊರುಗಳಿಗೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 500 ಲೀಟರ್‌ನ ಬೂಟ್ ಸ್ಪೇಸ್‌ನ್ನು ಪಡೆದಿದೆ.
ಹೊಚ್ಚ ಹೊಸ ಕರ್ವ್ ಇವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, 9-ಸ್ಪೀಕರ್ ಜೆಬಿಎಲ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಸನ್‌ರೂಫ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications