Hyundai: ಬಹುನೀರಿಕ್ಷಿತ ಮೊದಲ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ವಿತರಣೆ, ಖುಷಿಯಲ್ಲಿ ಗ್ರಾಹಕ.. 21 ಕಿ.ಮೀ ಮೈಲೇಜ್!
ದೇಶೀಯ ಮಾರುಕಟ್ಟೆಯಲ್ಲಿ ಕೆಲವೇ ದಿನಗಳ ಹಿಂದೆ, ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (Hyundai Motor India Limited), ಹೊಸ ಕ್ರೆಟಾ ಫೇಸ್‌ಲಿಫ್ಟ್ (Creta Facelift) ಕಾರನ್ನು ಬಿಡುಗಡೆಗೊಳಿಸಿತ್ತು. ಅಷ್ಟೇ ವೇಗದಲ್ಲಿ ವಿತರಣೆಯನ್ನು ಶುರು ಮಾಡಿದ್ದು, ಈಗಾಗಲೇ ಮೊದಲ ಎಸ್‌ಯುವಿಯನ್ನು ಗ್ರಾಹಕನಿಗೆ ತಲುಪಿಸಲಾಗಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.
ರಾಜಸ್ಥಾನದ ಚಿತ್ತೋರ್‌ಗಢದಲ್ಲಿರುವ ಹ್ಯುಂಡೈ ಡೀಲರ್‌ಶಿಪ್‌ನಿಂದ ನೂತನ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಹೊರಬರುತ್ತಿದ್ದು, ಶೋರೂಂ ಸಿಬ್ಬಂದಿಗಳು ಖರೀದಿದಾರನ ಸಂತೋಷವನ್ನು ಮತ್ತಷ್ಟು ಹಿಮ್ಮಡಿಗೊಳಿಸಲು ಪೈರೋ ಗನ್‌ಗಳನ್ನು ಬಳಕೆ ಮಾಡುತ್ತಿರುವುದನ್ನು ನೋಡಬಹುದು. ಒಂದೆರಡು ದಿನಗಳಲ್ಲಿ ದೇಶಾದ್ಯಂತವಿರುವ ಎಲ್ಲ ಹ್ಯುಂಡೈ ಡೀಲರ್‌ಶಿಪ್‌ಗಳಲ್ಲಿ ಕ್ರೆಟಾ ವಿತರಣೆ ಆರಂಭವಾಗಬಹುದು. ಈ ಕಾರು ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಎಸ್‌ಯುವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಕಾರು ಇ, ಇಎಕ್ಸ್, ಎಸ್, ಎಸ್(ಒ), ಎಸ್ಎಕ್ಸ್ ಟೆಕ್, ಎಸ್ಎಕ್ಸ್(ಒ) ರೂಪಾಂತರಗಳು (Variants), ರೇಂಜರ್ ಖಾಕಿ, ಅಬಿಸ್ ಬ್ಲಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ 6-ಮೊನೊಟೋನ್, 1-ಡುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಸಿಗುತ್ತದೆ.
ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುವ ಸಲುವಾಗಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಮುಂಭಾಗ ಎಲ್ ಆಕಾರದ ಎಲ್ಇಡಿ ಡಿಆರ್‌ಎಲ್, ನವೀನವಾದ ಎಲ್ಇಡಿ ಹೆಡ್‌ಲೈಟ್, ಹೊಸದಾದ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್ ಅನ್ನು ಪಡೆದಿದೆ. ಹಿಂಭಾಗದ ವಿನ್ಯಾಸವು ಕೂಡ ಆಕರ್ಷಕವಾಗಿದ್ದು, ವಿಶೇಷವಾಗಿ 17-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್ ಒಳಗೊಂಡಿದೆ.

ಕ್ರೆಟಾ ಫೇಸ್‌ಲಿಫ್ಟ್ ಪವರ್ ಟ್ರೈನ್ ಬಗ್ಗೆ ಹೇಳುವುದಾದರೆ, ಇದು ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 PS ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 PS ಗರಿಷ್ಠ ಪವರ್, 253 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಒಳಗೊಂಡಿದೆ. 1.5-ಲೀಟರ್ ಡಿಸೇಲ್ ಎಂಜಿನ್ 116 PS ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ.

ಮೈಲೇಜ್ ವಿಚಾರಕ್ಕೆ ಬರುವುದಾದರೆ, ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಪೆಟ್ರೋಲ್ ರೂಪಾಂತರಗಳು 17.4 kmpl-18.4 kmpl, ಡೀಸೆಲ್ ರೂಪಾಂತರಗಳು 19.1 kmpl-21.8 kmpl ಇಂಧನ ದಕ್ಷತೆಯನ್ನು ಹೊಂದಿವೆ ಎಂದು ವರದಿಯಾಗಿದೆ. 10.25 - ಇಂಚಿನ ಡಿಸ್ಪ್ಲೇ, ಡುಯಲ್-ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ, ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 6 - ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಈ ಕಾರಿಗೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಫಾರ್ಚುನರ್, ಸ್ಕೋಡಾ ಕುಶಾಕ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications