Hyundai: ಹ್ಯುಂಡೈನಿಂದ ಹೊಸ ಟ್ರೇಡ್‌ಮಾರ್ಕ್, 2 ಸಿಎನ್‌ಜಿ ಕಾರುಗಳು ಬರಲಿವೆ.. ಬೈಕ್‌ನ್ನು ಮೀರಿಸುವ ಮೈಲೇಜ್?
ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ (Hyundai) ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ದೇಶೀಯ ಕಂಪನಿಗಳಾದ ಟಾಟಾ ಹಾಗೂ ಮಹೀಂದ್ರಾಗೆ ಪ್ರಬಲ ಸ್ಪರ್ಧೆಯೊಡ್ಡುತ್ತಿದೆ. ಹ್ಯುಂಡೈ ಮಾರಾಟಗೊಳಿಸುವ ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಪ್ರತಿವರ್ಷ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ಬೆಲೆಯಲ್ಲಿ ಒಂದಲ್ಲ ಒಂದು ಕಾರುಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ. ಸದ್ಯ ಹ್ಯುಂಡೈ ತನ್ನ ಕಾರುಗಳಲ್ಲಿ ಹೊಸ 'ಸಿಎನ್‌ಜಿ' ತಂತ್ರಜ್ಞಾನವನ್ನು ಪರಿಚಯಿಸುವ ಸಂಬಂಧ 2 'ಟ್ರೇಡ್‌ಮಾರ್ಕ್'ಗಳನ್ನು ನೋಂದಣಿ ಮಾಡಿದೆ.
ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗಂಡಿರುವ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಸಿಎನ್‌ಜಿ ಲೈನ್ಅಪ್‌ನ್ನು ವಿಸ್ತರಿಸಲು ಬಯಸಿದೆ. ಅದಕ್ಕಾಗಿ ಹೈ-ಸಿಎನ್‌ಜಿ (Hy-CNG) ಮತ್ತು ಹೈ-ಸಿಎನ್‌ಜಿ ಡ್ಯುಯೊ (Hy-CNG Duo) ಎಂಬ ತಂತ್ರಜ್ಞಾನ (Technology)ವನ್ನು ಅಭಿವೃದ್ಧಿಪಡಿಸುತ್ತಿದ್ದು, ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಲ್ಲಿಯೂ ವಿವರವನ್ನು ಸಲ್ಲಿಸುವ ಮೂಲಕ ನೋಂದಾಯಿಸಿದೆ.

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ, ಗ್ರಾಂಡ್ ಐ10 ನಿಯೋಸ್ (Grand i10 Nios) ಹ್ಯಾಚ್‌ಬ್ಯಾಕ್, ಔರಾ (Aura) ಕಾಂಪ್ಯಾಕ್ಟ್ ಸೆಡಾನ್ ಹಾಗೂ ಎಕ್ಸ್‌ಟರ್ (Exter) ಎಸ್‌ಯುವಿಗಳನ್ನು ಸಿಂಗಲ್ ಸಿಲಿಂಡರ್ ಸಿಎನ್‌ಜಿ ಟ್ಯಾಂಕ್ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದೆ. ಶೀಘ್ರದಲ್ಲೇ ಈ ಕಾರುಗಳನ್ನು ಡುಯಲ್-ಸಿಲಿಂಡರ್ ಸಿಎನ್‌ಜಿ ಟ್ಯಾಂಕ್‌ನೊಂದಿಗೆ 'ಹೈ-ಸಿಎನ್‌ಜಿ ಡ್ಯುಯೊ' ಬ್ಯಾಡ್ಜ್ ಅಡಿಯಲ್ಲಿ ಪರಿಚಯಿಸಬಹುದು. ಆದಾಗ್ಯೂ ಸಿಂಗಲ್-ಸಿಲಿಂಡರ್ ಮಾದರಿ (ಮಾಡೆಲ್)ಗಳನ್ನು 'ಹೈ-ಸಿಎನ್‌ಜಿ' ಎಂದು ಕರೆಯಬಹುದು ಎನ್ನಲಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹೋಲಿಕೆ ಮಾಡಿದರೆ ಸಿಎನ್‌ಜಿ ಇಂಧನ (ಫ್ಯುಯೆಲ್) ಬೆಲೆ ತುಂಬಾ ಕಡಿಮೆಯಿದೆ. ನಿರ್ವಹಣಾ ವೆಚ್ಚವು ಅಗ್ಗವಾಗಿರುವುದರಿಂದ ವಾಣಿಜ್ಯ ವಾಹನ ಮಾಲೀಕರು, ಸಿಎನ್‌ಜಿ ಚಾಲಿತ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಆ ಪ್ರವೃತ್ತಿ ಬದಲಾಗಿದ್ದು, ಹೆಚ್ಚಿನ ಖಾಸಗಿ ವಾಹನ ಮಾಲೀಕರು ಸಹ ಸಿಎನ್‌ಜಿ ಕಾರುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇದು ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಹಾಗೂ ಹ್ಯುಂಡೈನಂತಹ ಪ್ರಮುಖ ವಾಹನ ತಯಾರಕರನ್ನು ಸಿಎನ್‌ಜಿ ಕಾರುಗಳ ಉತ್ಪಾದನೆಯತ್ತ ಪ್ರೇರೇಪಿಸಿದೆ.

ಟಾಟಾ ಮೋಟಾರ್ಸ್ ತನ್ನ ಐಸಿಎನ್‌ಜಿ (iCNG) ಕಾರುಗಳನ್ನು ಡುಯಲ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ ಮಾರಾಟ ಮಾಡುತ್ತಿದೆ. ಇದು ಹೆಚ್ಚು ಸಿಎನ್‌ಜಿ ಇಂಧನ ತುಂಬಿಸಲು ನೆರವಾಗಲಿದ್ದು, ಆದರಾಮದಾಯಕವಾಗಿ ದೂರ ಊರುಗಳಿಗೆ ಪ್ರಯಾಣ ಮಾಡಬಹುದು. ವಾಹನ ಮಾಲೀಕರಿಗೂ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಟಾಟಾದ ಐಸಿಎನ್‌ಜಿ ಕಾರುಗಳಿಗೆ ದೊಡ್ಡ ಪೈಪೋಟಿ ನೀಡಲು ಹ್ಯುಂಡೈ ಕಂಪನಿಯು ಸಿಎನ್‌ಜಿ ವಿಭಾಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆ.
ದೇಶೀಯವಾಗಿ ಲಭ್ಯವಿರುವ ಹ್ಯುಂಡೈ ಎಕ್ಸ್‌ಟರ್ (Hyundai Exter) ಸಿಎನ್‌ಜಿ ಎಸ್‌ಯುವಿಯು ರೂ.9.16 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 27.1 ಕೆಎಂ/ಕೆಜಿವರೆಗೆ ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನೂತನ ಐ10 ನಿಯೋಸ್ (Grand i10 Nios) ಸಿಎನ್‌ಜಿ ಹ್ಯಾಚ್‌ಬ್ಯಾಕ್ ರೂ.7.68 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, 27 ಕೆಎಂ/ಕೆಜಿವರೆಗೆ ಮೈಲೇಜ್ ಕೊಡುತ್ತದೆ. ಔರಾ (Aura) ಸಿಎನ್‌ಜಿ ಸೆಡಾನ್ ರೂ.8.31 ದರವನ್ನು (ಎಕ್ಸ್ ಶೋರೂಂ) ಪಡೆದಿದೆ. 1.2-ಲೀಟರ್ ಹಾಗೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 22 ಕೆಎಂ/ಕೆಜಿವರೆಗೆ ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications