Isuzu: ದುಡಿಯುವವರಿಗೆ ಸಿಹಿಸುದ್ದಿ.. ಇಸುಝು ಡಿ-ಮ್ಯಾಕ್ಸ್ ಪಿಕಪ್ ಟ್ರಕ್‌ನ ಹೊಸ ವೇರಿಯೆಂಟ್ ಬಿಡುಗಡೆ, ಕಡಿಮೆ ಬೆಲೆ!
ಜಪಾನ್ ಮೂಲದ ಇಸುಝು (Isuzu) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಇಸುಝು ಕಂಪನಿಯು ಭಾರಿ ಸಂಖ್ಯೆಯಲ್ಲಿ ಮಾರಾಟವಾಗುವ ಡಿ-ಮ್ಯಾಕ್ಸ್ ಪಿಕಪ್ ಟ್ರಕ್‌ನ ಹೊಸ ರೂಪಾಂತರವನ್ನು (ವೇರಿಯೆಂಟ್) ಬಿಡುಗಡೆಗೊಳಿಸಿದೆ. ಈ ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ ಬನ್ನಿ..
ಇಸುಝು ಡಿ-ಮ್ಯಾಕ್ಸ್ (Isuzu D-Max) ಪಿಕಪ್ ಟ್ರಕ್‌ನ ನೂತನ ರೂಪಾಂತರವಾದ 1.7 ಕ್ಯಾಬ್-ಚಾಸಿಸ್ ಸ್ಟ್ಯಾಂಡರ್ಡ್ (1.7 Cab-Chassis Standard) ಮಾರಾಟಕ್ಕೆ ಬಂದಿದೆ. ಈ ಹೊಚ್ಚ ಹೊಸ ರೂಪಾಂತರ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.9,99,990 (ಎಕ್ಸ್ ಶೋರೂಂ, ಚೆನ್ನೈ) ದರವನ್ನು ಪಡೆದಿದೆ. ಇಂದಿನಿಂದ (ಸೆಪ್ಟೆಂಬರ್ 19) ಬುಕ್ಕಿಂಗ್ ಸಹ ಶುರುವಾಗಿದ್ದು, ಶೀಘ್ರದಲ್ಲಿಯೇ ವಿತರಣೆ ಆರಂಭವಾಗಲಿದೆ.

ವಿಶೇಷವಾಗಿ ದುಡಿಯುವ ವರ್ಗದ ಜನರಿಗಾಗಿ ಪರಿಚಯಿಸಲಾಗಿರುವ ಈ 'ಇಸುಝು ಡಿ-ಮ್ಯಾಕ್ಸ್ ಪಿಕಪ್ ಟ್ರಕ್‌ನ 1.7 ಕ್ಯಾಬ್-ಚಾಸಿಸ್ ಸ್ಟ್ಯಾಂಡರ್ಡ್' ರೂಪಾಂತರದಿಂದ ಸರಕು ಸಾಗಾಟ ಮತ್ತಷ್ಟು ಸುಲಭವಾಗುತ್ತದೆ. ನೂತನ ಪಿಕಪ್ ಟ್ರಕ್‌ನ್ನು ಆಹಾರ ಸಾಮಗ್ರಿ ಮತ್ತು ತರಕಾರಿಗಳು ಸೇರಿದಂತೆ ಇತರೆ ನಿತ್ಯವಸರ ವಸ್ತುಗಳನ್ನು ಗೊತ್ತುಪಡಿಸಿದ ನಿರ್ದಿಷ್ಟ ಸ್ಥಳಗಳಿಗೆ ಬೇಗನೆ ತಲುಪಿಸಲು ಸಾದ್ಯವಾಗುವಂತೆ ಕೂಡ ಸಿದ್ಧಪಡಿಸಲಾಗಿದೆ.
ಇಸುಝು ಡಿ-ಮ್ಯಾಕ್ಸ್ 1.7 ಕ್ಯಾಬ್-ಚಾಸಿಸ್ ಸ್ಟ್ಯಾಂಡರ್ಡ್ (Isuzu D-Max 1.7 Cab-Chassis Standard) ರೂಪಾಂತರ 2.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 3,800 ಆರ್‌ಪಿಎಂನಲ್ಲಿ 78 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 1,500 - 2,400 ಆರ್‌ಪಿಎಂನಲ್ಲಿ 176 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಈ ಡಿ-ಮ್ಯಾಕ್ಸ್ 1.7 ಕ್ಯಾಬ್-ಚಾಸಿಸ್ ಸ್ಟ್ಯಾಂಡರ್ಡ್ ಪಿಕಪ್ ಟ್ರಕ್ ಆಗಿದ್ದರೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಹೈಟ್ ಅಡ್ಜಸ್ಟಬಲ್ ಸೀಟ್ ಬೆಲ್ಟ್‌ಗಳು, ಗೇರ್‌ಶಿಫ್ಟ್ ಇಂಡಿಕೇಟರ್‌ನೊಂದಿಗೆ ಮಲ್ಟಿ ಇನ್ಫಾರ್ಮಶನ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಬ್ರೇಕ್ ಓವರ್‌ರೈಡ್ ಸಿಸ್ಟಮ್ ಒಳಗೊಂಡಿದ್ದು, ಹಠಾತ್ತನೇ ಬ್ರೇಕ್ ಹಾಕುವ ಸಂದರ್ಭದಲ್ಲಿ ಎಂಜಿನ್‌ಗೆ ಪವರ್ (ಶಕ್ತಿ) ವರ್ಗಾಯಿಸುವುದನ್ನು ಸ್ಥಗಿತಗೊಳಿಸುತ್ತದೆ.
ದೇಶೀಯ ಮಾರುಕಟ್ಟೆಯಲ್ಲಿ ಇಸುಝು ವಿ-ಕ್ರಾಸ್ (Isuzu V-Cross) ಪಿಕಪ್ ಟ್ರಕ್ ಸಹ ಖರೀದಿಗೆ ಲಭ್ಯವಿದೆ. ಇದು ರೂ.25.52 ಲಕ್ಷದಿಂದ ರೂ.30.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಝಡ್ ಮತ್ತು ಝಡ್ ಪ್ರೆಸ್ಟೀಜ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ. ವೇಲೆನ್ಸಿಯಾ ಆರೆಂಜ್, ನಾಟಿಲಸ್ ಬ್ಲೂ, ರೆಡ್ ಸ್ಪಿನೆಲ್ ಮೈಕಾ ಮತ್ತು ಸಿಲ್ಕಿ ವೈಟ್ ಪರ್ಲ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ ಇಸುಝು ವಿ-ಕ್ರಾಸ್ ಪಿಕಪ್ ಟ್ರಕ್‌ನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 1.9-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 163 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 360 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








