ಭಾರತದಲ್ಲಿ ಈ ಕಾರಿಗೆ ಜಬರ್ದಸ್ತ್ ಬೇಡಿಕೆ: ಒಂದೇ ತಿಂಗಳಲ್ಲಿ 10 ಸಾವಿರ ಕಾರುಗಳ ಮಾರಾಟ!
ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ, ಆಗಸ್ಟ್ 2024 ರಲ್ಲಿ 22,523 ಯುನಿಟ್ ಕಾರುಗಳ ದೇಶೀಯ ಮಾರಾಟದೊಂದಿಗೆ ಭಾರತೀಯ ವಾಹನ ವಲಯದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. ಕಳೆದ ವರ್ಷ ಇದೇ ಅವದಿಯಲ್ಲಿ ಮಾರಾಟವಾದ 19,219 ಯುನಿಟ್ ವಾಹನಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ17.19 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿದೆ. ಜಾಗತಿಕವಾಗಿಯೂ ಕಿಯಾದ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳು ಬಲವಾದ ಬೇಡಿಕೆಯನ್ನು ಪಡೆಯುತ್ತಿದ್ದು, ಕಂಪನಿಯು ಆಗಸ್ಟ್ 2024 ರಲ್ಲಿ 2,604 ವಾಹನಗಳನ್ನು ರಫ್ತು ಮಾಡಿದೆ ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಕಿಯಾದ ಎಲ್ಲಾ ಮಾಡೆಲ್‌ಗಳಿಗೆ ಹೋಲಿಸಿಕೊಂಡರೆ ಹೊಸ ಸೋನೆಟ್ ಭಾರತೀಯ ಗ್ರಾಹಕರಿಂದ ನಿರಂತರವಾಗಿ ಹೆಚ್ಚಿನ ಆಕರ್ಷಣೆಯನ್ನು ಪಡೆದಿರುವ ಕಾರಾಗಿ ಹೊರಹೊಮ್ಮಿದೆ. 2024 ಆಗಸ್ಟ್‌ನಲ್ಲಿ ಬರೋಬ್ಬರಿ 10,073 ಯುನಿಟ್ ವಾಹನಗಳು ಮಾರಾಟವಾಗುವುದರೊಂದಿಗೆ ಈ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ಕಿಯಾ ಇಂಡಿಯಾ ಹೇಳಿಕೊಂಡಿದೆ.
ಸೋನೆಟ್ ನಂತರ ಹೆಚ್ಚಾಗಿ ಮಾರಾಟವಾದ ಕಾರಾಗಿ ಸೆಲ್ಟೋಸ್ ಗುರ್ತಿಸಿಕೊಂಡಿದ್ದು, ಆಗಸ್ಟ್ 2024 ರಲ್ಲಿ 6,536 ಯುನಿಟ್ ಕಾರುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಕಂಪನಿಯ ಪ್ರಮುಖ ಕಾರುಗಳಾದ ಕ್ಯಾರೆನ್ಸ್ ಮತ್ತು ಇವಿ 6 ಕ್ರಮವಾಗಿ 5,881 ಮತ್ತು 33 ಯುನಿಟ್ ಕಾರುಗಳ ಮಾರಾಟವನ್ನು ದಾಖಲಿಸುವ ಮೂಲಕ ಬಲವಾದ ಕಾರ್ಯಕ್ಷಮತೆಯನ್ನು ಕಾಯ್ದುಕೊಂಡಿವೆ.
ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ ಕೇವಲ 59 ತಿಂಗಳೊಳಗೆ 1 ಮಿಲಿಯನ್ (10 ಲಕ್ಷ) ಯೂನಿಟ್ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. Kia ಇಂಡಿಯಾ ತನ್ನ ಪ್ರತಿಸ್ಪರ್ಧಿಗಳಲ್ಲಿ ಸಕ್ರಿಯ ಸುರಕ್ಷತೆ, ವಿನ್ಯಾಸ ಮತ್ತು ನವೀನ ವೈಶಿಷ್ಟ್ಯಗಳ ವಿಷಯದಲ್ಲಿ ಮಾನದಂಡವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದೆ.

ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ರಾಷ್ಟ್ರೀಯ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, "ನಮ್ಮ ನಿರಂತರ ಬಲವಾದ ಮಾರಾಟದ ಕಾರ್ಯಕ್ಷಮತೆಯು ನಮ್ಮ ಗ್ರಾಹಕರು ಕಿಯಾ ಬ್ರ್ಯಾಂಡ್‌ನಲ್ಲಿ ಇರಿಸಿರುವ ನಂಬಿಕೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಈ ಯಶಸ್ಸು ಕಂಪನಿಯ ಉತ್ಪನ್ನಗಳ ಕಾರ್ಯತಂತ್ರದ ಆಪ್ಟಿಮೈಸೇಶನ್‌ಗೆ ಸಾಕ್ಷಿಯಾಗಿದೆ.
ಇದು ನಮ್ಮ ವಾಹನಗಳು ಹಣಕ್ಕೆ ಮೌಲ್ಯವನ್ನು ನೀಡುತ್ತವೆ ಎಂಬುದನ್ನು ಸಾಭೀತುಪಡಿಸಿವೆ. ನಮ್ಮ ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯತೆಗಳು, ಆದ್ಯತೆಗಳು ಮತ್ತು ಆಕಾಂಕ್ಷೆಗಳೊಂದಿಗೆ ಉತ್ತಮವಾಗಿ ಪ್ರತಿಧ್ವನಿಸುವ ವಾಹನಗಳನ್ನು ನೀಡಲು ಕಿಯಾ ಇಂಡಿಯಾ ಬದ್ಧವಾಗಿದೆ. ನಾವು ಸಹ ದೇಶದಲ್ಲಿ ನಮ್ಮ ನೆಲೆಯನ್ನು ನಿರಂತರವಾಗಿ ವಿಸ್ತರಿಸುತ್ತಿದ್ದೇವೆ ಎಂದು ಹರ್ದೀಪ್ ಸಿಂಗ್ ಬ್ರಾರ್ ಹೇಳಿದರು.
ಇತ್ತೀಚೆಗೆ, ಕಿಯಾ ಇಂಡಿಯಾ ತನ್ನ ಎರಡು ಜಾಗತಿಕ ಮಾದರಿಗಳಾದ ವರ್ಲ್ಡ್ ಕಾರ್ ಆಫ್ ದಿ ಇಯರ್ EV9 ಮತ್ತು ಹೊಸ ಕಾರ್ನಿವಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇವು ಕಂಪನಿಯಿಂದ ಹೊರಬರುತ್ತಿರುವ ಬಹುನಿರೀಕ್ಷಿತ ಪ್ರೀಮಿಯಂ ಕಾರುಗಳಾಗಿವೆ. ಮುಂಬರುವ ದಿನಗಳಲ್ಲಿ ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








