ADAS ತಂತ್ರಜ್ಞಾನ ದುರುಪಯೋಗ: ಕಾರು ಚಾಲನೆಯಲ್ಲಿ ಬಿಟ್ಟು ಹಿಂಬದಿ ಸೀಟಿಗೆ ಎದ್ದುಬಂದ ಚಾಲಕ!
ಭಾರತೀಯ ಆಟೋ ಉದ್ಯಮ ಹೆಮ್ಮರವಾಗಿ ಬೆಳೆದುನಿಂತಿದೆ, ವಿಶ್ವದ ಯಾವುದೇ ದೇಶದಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದ ಕಾರುಗಳು ನಮ್ಮ ಭಾರತದಲ್ಲೂ ಸಿಗುತ್ತಿವೆ. ಅದರಲ್ಲೂ ಪ್ರಮುಖವಾಗಿ ADAS (Advanced Driver Assistance System) ಟೆಕ್ ಬಗ್ಗೆ ಹೇಳಲೇಬೇಕು. ಇದನ್ನು ಕನ್ನಡದಲ್ಲಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ ಎಂದು ಹೇಳಬಹುದು. ಇದು ಪ್ರಯಾಣಿಕರ ಜೀವವನ್ನು ಉಳಿಸಲು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳುವ ಅಡ್ವಾನ್ಸ್ಡ್ ಫೀಚರ್ ಆಗಿದೆ. ಆದರೆ ಇದನ್ನು ಭಾರತದಲ್ಲಿ ಜನರು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಸಾಭೀತು ಪಡಿಸುವ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಇತ್ತೀಚಿನ ಹೊಸ ಕಾರುಗಳಲ್ಲಿ ಸಾಕಷ್ಟು ಆಧುನಿಕ ಫೀಚರ್‌ಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಅತ್ಯಂತ ಆಕರ್ಷಕ ಸೇರ್ಪಡೆಯೆಂದರೆ ಲೆವೆಲ್-2 ADAS ಆಗಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಚೇಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, 360 ಡಿಗ್ರಿ ಕ್ಯಾಮೆರಾ, ಸ್ವಾಯತ್ತ ತುರ್ತು ಬ್ರೇಕಿಂಗ್ (Autonomous emergency braking) ಮುಂತಾದ ವಿಷಯಗಳೊಂದಿಗೆ ಇವು ಚಾಲಕನಿಗೆ ದೈನಂದಿನ ಸನ್ನಿವೇಶಗಳಲ್ಲಿ ಸಹಾಯ ಮಾಡುತ್ತವೆ.

ಆದರೆ ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಕಿಯಾ ಸೆಲ್ಟೋಸ್ ಮಾಲೀಕ ADAS ಅನ್ನು ದುರುಪಯೋಗಪಡಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ವಿಡಿಯೋದಲ್ಲಿ ಚಾಲಕ ಪ್ರದರ್ಶಿಸಿದ ಮೂರ್ಖತನದ ದೃಶ್ಯಗಳು ಹಲವರನ್ನು ಸಿಟ್ಟುಗೊಳ್ಳುವಂತೆ ಮಾಡಿದೆ. ರಸ್ತೆಯ ಮಧ್ಯದಲ್ಲಿ ಚಾಲನೆ ಮಾಡುತ್ತಾ ಇದ್ದಕ್ಕಿದ್ದಂತೆ ಡ್ರೈವರ್ ಸೀಟಿನಿಂದ ಎದ್ದು ಹಿಂದಿನ ಸೀಟಿಗೆ ಹೋಗಿದ್ದಾನೆ. ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ಇದನ್ನು ರೆಕಾರ್ಡ್ ಮಾಡಿದ್ದಾನೆ.
ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಉದ್ದೇಶದಿಂದಲೇ ವಿಡಿಯೋ ಮಾಡಿರುವುದು ಸ್ಪಷ್ಟವಾಗಿದೆ. ಕೇವಲ ತಾವು ವೈರಲ್ ಆಗಲು ತಮ್ಮ ಜೀವವನ್ನು ಮತ್ತು ತಮ್ಮ ಸುತ್ತಲಿನ ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಲು ಸಿದ್ಧರಿದ್ದಾರೆ ಎಂದರೆ ಇದೆಂಥಾ ಮೂರ್ಖತನ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಸಂಗತಿಯೆಂದರೆ ಈ ಮೂರ್ಖ ಕೃತ್ಯವನ್ನು ಸಾರ್ವಜನಿಕ ರಸ್ತೆಯಲ್ಲಿ ಮಾಡಿರುವುದು. ಇದು ಎಕ್ಸ್ ಪ್ರೆಸ್ ವೇ ಕೂಡ ಅಲ್ಲ, ADAS ಕೇವಲ ರಸ್ತೆ ಚಿಹ್ನೆ ಹಾಗೂ ಲೇನ್ ಗುರುತುಗಳನ್ನು ಅನುಸರಿಸಿ ಕಾರ್ಯನಿರ್ವಹಿಸುತ್ತದೆ. ಇವುಗಳಿಲ್ಲದೆ, ವಾಹನವು ಸ್ವಯಂ ಚಲಿಸಲು ಸಾಧ್ಯವಾಗುವುದಿಲ್ಲ. ಭಾರತೀಯ ರಸ್ತೆಗಳು ಅಷ್ಟು ಸ್ಪಷ್ಟವಾದ ರಸ್ತೆಗಳು ಹಾಗೂ ಟ್ರಾಫಿಕ್ ಚಿಹ್ನೆಗಳನ್ನು ಹೊಂದಿರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು.
ಹಾಗಾಗಿ ಇದು ವಿಪತ್ತಿಗೆ ಮುಕ್ತ ಆಹ್ವಾನವಾಗಿದೆ. ವೀಡಿಯೊ ಕೊನೆಯಲ್ಲಿ, ಎದುರುನಿಂದ ಮತ್ತೊಂದು ಕಾರು ಬರುತ್ತಿರುವುದನ್ನು ನೋಡಬಹುದು, ಆಗ ಹಿಂಭಾಗದಲ್ಲಿದ್ದ ಪ್ರಯಾಣಿಕರು ಚಾಲಕನನ್ನು ತನ್ನ ಸೀಟಿಗೆ ಹಿಂತಿರುಗುವಂತೆ ಕೇಳುತ್ತಾರೆ. ಆನಂತರ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಪ್ರಯಾಣಿಕರ ಸುರಕ್ಷತೆಗಾಗಿ ಇರುವ ಈ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಎಷ್ಟು ಸರಿ?

ಭಾರತದಲ್ಲಿ ADAS ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಾವು ವರದಿ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಹೀಂದ್ರಾ XUV 700 ಮಾಲೀಕ ಹೆದ್ದಾರಿಯಲ್ಲಿ 70ರ ವೇಗದಲ್ಲಿ ಕಾರನ್ನು ಬಿಟ್ಟು ಹಿಂದಿನ ಸೀಟಿನಲ್ಲಿ ಮಲಗಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಇನ್ನೂ ಇಂತಹ ಸಾಕಷ್ಟು ಉದಾಹರಣೆಗಳು ಇವೆ.
ಈ ಫೀಚರ್‌ಗಳನ್ನು ನೀಡುವ ಕಾರು ಕಂಪನಿಗಳು ಎಂದೂ ಕೂಡ ಚಾಲಕನಿಲ್ಲದೇ ಕಾರು ಓಡಿಸಲು ಹೇಳಿಲ್ಲ. ಚಾಲಕರ ಜೀವನವನ್ನು ಸುಲಭಗೊಳಿಸಲು ಇವುಗಳನ್ನು ಕಟ್ಟುನಿಟ್ಟಾಗಿ ಬಳಸಬೇಕು ಎಂದು ಕಾರು ತಯಾರಕರು ಪದೇ ಪದೇ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಚಾಲಕ ಡ್ರೈವಿಂಗ್‌ನಲ್ಲಿದ್ದಾಗ ತನ್ನ ಗಮನ ರಸ್ತೆಯಿಂದ ಬೇರೆಡೆ ಹೋಗಬಾದರು ಹಾಗೂ ಸ್ಟೀರಿಂಗ್ ವೀಲ್‌ನಿಂದ ಕೈ ತೆಗೆಯಬಾರದು ಎಂದು ಹೇಳುತ್ತವೆ.


Click it and Unblock the Notifications








