Kia: ಆಕರ್ಷಕ ವೈಶಿಷ್ಟ್ಯಗಳು.. ನಾಳೆ ಬಹುನಿರೀಕ್ಷಿತ ಹೊಸ ಕಿಯಾ ಕಾರು ಪರಿಚಯ, ಬೆಲೆ ಇಷ್ಟೇನಾ?
ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ (Kia Motors) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ಕೊಂಚ ತಡವಾಗಿ ಅಂದರೆ 2019ರಲ್ಲಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಆದರೂ ಕಂಪನಿಯ ಕಾರುಗಳು ಮಾತ್ರ ಬೇಗನೆ ಹೆಚ್ಚು ಜನಪ್ರಿಯತೆ ಗಳಿಸಿದವು. ಸದ್ಯ ಮಧ್ಯಮ ವರ್ಗದ ಗ್ರಾಹಕರನ್ನು ಆಕರ್ಷಿಸಲು ಕಿಯಾ, ಹೊಸ 'ಸೈರಸ್' ಎಸ್‌ಯುವಿಯನ್ನು ಪರಿಚಯಿಸಲು ರೆಡಿಯಾಗಿದೆ. ನಾಳೆ ನೂತನ ಕಾರನ್ನು ಅದ್ದೂರಿಯಾಗಿ ಅನಾವರಣಗೊಳಿಸಲಿದೆ. ಬನ್ನಿ.. ಈ ಕಾರಿನ ನಿರೀಕ್ಷಿತ ಬೆಲೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಬೆಲೆ & ರೂಪಾಂತರಗಳು (Price & Variants): ಈ ಹೊಚ್ಚ ಹೊಸ ಕಿಯಾ ಸೈರಸ್ (Kia syros) ಅತಿಕಡಿಮೆ ಬೆಲೆಗೆ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದ್ದು, ರೂ.9 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿರಲಿದೆ. ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಹೆಚ್‌ಟಿಎಕ್ಸ್ ಪ್ಲಸ್ (ಒ) ಸೇರಿದಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುವ ಸಾಧ್ಯತೆಯಿದೆ.

ವಿನ್ಯಾಸ (Design): ನೂತನ ಕಿಯಾ ಸೈರಸ್ ಹೊರಭಾಗದಲ್ಲಿ ಅತ್ಯಾಧುನಿಕ ವಿನ್ಯಾಸ ಹೊಂದಿರುವುದು ಬಹುತೇಕ ಖಚಿತವಾಗಿದೆ. ಈ ಕಾರು ನವೀನವಾಗಿರುವ ಬಾನೆಟ್ & ಬಂಪರ್‌ನ್ನು ಪಡೆದುಕೊಂಡಿರಲಿದೆ. ಜೊತೆಗೆ ಉತ್ತಮವಾಗಿರುವ ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಪನೊರೊಮಿಕ್ ಸನ್‌ರೂಫ್‌ನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಕಾರ್ಯಕ್ಷಮತೆ (Performance): ಈ ಕಾರು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಐಎಂಟಿ, 7-ಸ್ಪೀಡ್ ಡಿಸಿಟಿ ಸೇರಿದಂತೆ ವಿವಿಧ ಗೇರ್‌ಬಾಕ್ಸ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ. 19 ರಿಂದ 24 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಬಣ್ಣಗಳು & ವೈಶಿಷ್ಟ್ಯಗಳು (Colors & Features): ಹೊಸ ಕಿಯಾ ಸೈರಸ್ ಎಸ್‌ಯುವಿ ಫ್ರಾಸ್ಟ್ ಬ್ಲೂ, ಪ್ಯೂಟರ್ ಆಲಿವ್, ಅರೋರಾ ಬ್ಲ್ಯಾಕ್ ಪರ್ಲ್, ಇಂಟೆನ್ಸ್ ರೆಡ್ & ಗ್ರಾವಿಟಿ ಗ್ರೇ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುವ ನಿರೀಕ್ಷೆಯಿದೆ. ಈ ಕಾರು ಇನ್ಫೋಟೈನೆಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜರ್ ಹಾಗೂ 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features): ನೂತನ ಕಾರು ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಸಿಸ್ಟಮ್‌ನ್ನು ಹೊಂದಿರುವ ಸಾಧ್ಯತೆಯಿದೆ.
ಇನ್ನು ನಾಳೆ ಅನಾವರಣಗೊಳ್ಳಲ್ಲಿರುವ ಹೊಸ ಕಿಯಾ ಸೈರಸ್ ಎಸ್‌ಯುವಿ ಮೇಲೆ ಗ್ರಾಹಕರು ಕೂಡ ದೊಡ್ಡಮಟ್ಟದ ನೀರಿಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಕಾರು ದೇಶೀಯ ಮಾರುಕಟ್ಟೆಗೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಬರುವುದು ಬಹುತೇಕ ಖಚಿತವಾಗಿದೆ. ಇದರ ಮಾರಾಟ ಪ್ರಕ್ರಿಯೆ ಆರಂಭವಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








