Honda: ಜಪಾನಿನಲ್ಲಿ ಭಾರತ ನಿರ್ಮಿತ ಹೋಂಡಾ ಎಸ್‌ಯುವಿ ಬಿಡುಗಡೆ: ತಾಯ್ನಾಡಿಗೆ ಇಲ್ಲಿಂದಲೆ ರಫ್ತು!
ಜಪಾನ್ ಮೂಲದ ಹೋಂಡಾ ಕಂಪನಿಯು, ಕಾರು ಉತ್ಪಾದನೆಯಲ್ಲಿ ಭಾರತ ಮಾತ್ರವಲ್ಲ ವಿಶ್ವಾದ್ಯಂತ ಗುರುತಿಸಿಕೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನ್ನ ಬಹುನಿರೀಕ್ಷಿತ ಹೋಂಡಾ ಎಲಿವೇಟ್ (Honda Elevate) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಎಸ್‌ಯುವಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಇದೀಗ ತನ್ನ ತಾಯಿನಾಡಾದ ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಹೋಂಡಾದ ಈ ಮೇಡ್ ಇನ್ ಇಂಡಿಯಾ ಎಲೆವೇಟ್ ಎಸ್‌ಯುವಿಯನ್ನು ಜಪಾನ್ ಮಾರುಕಟ್ಟೆಯಲ್ಲಿ WR-V ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಇದು ಭಾರತದಿಂದ ಜಪಾನ್‌ಗೆ ರಫ್ತು ಮಾಡಲಾಗುತ್ತಿರುವ ಮೊದಲ ಉತ್ಪನ್ನವೆಂದು ಹೇಳಬಹುದು. ಇದು ಭಾರತದ ಬೆಳೆಯುತ್ತಿರುವ ಉತ್ಪಾದನಾ ಸಾಮರ್ಥ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಪ್ರದರ್ಶಿಸುತ್ತದೆ.

ಡಿಸೆಂಬರ್ 2023 ರಲ್ಲಿ ಜಪಾನ್‌ನಲ್ಲಿ ಹೋಂಡಾ WR-V ಆಗಿ ಅನಾವರಣಗೊಂಡ ಈ ಮಾದರಿಯು ಅದರ ದಪ್ಪ SUV ವಿನ್ಯಾಸ, ಬಲವಾದ ರಸ್ತೆ ಉಪಸ್ಥಿತಿ, ಅತ್ಯುತ್ತಮ ಇಂಟೀರಿಯರ್ ಮತ್ತು ಸೌಕರ್ಯ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸುಸಜ್ಜಿತ ಫೀಚರ್‌ಗಳೊಂದಿಗೆ ಗ್ರಾಹಕರನ್ನು ಮೆಚ್ಚಿಸಿ ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಗಳಿಸಿದೆ ಎಂದು ಹೋಂಡಾ ಹೇಳಿಕೊಂಡಿದೆ.
ಜಪಾನ್ ಮಾರುಕಟ್ಟೆಯಲ್ಲಿ ಹೋಂಡಾ WR-V (ಎಲಿವೇಟ್) 2,098,800 ಯೆನ್ ನಿಂದ 2,489,300 ಯೆನ್‌ವರೆಗೆ ಬೆಲೆಯನ್ನು ಹೊಂದಿದೆ. ಎಲಿವೇಟ್ ಎಸ್‌ಯುವಿಯು ಹೋಂಡಾ ಸಿಟಿಯಲ್ಲಿ ನೋಡಬಹುದಾದ ಅದೇ 1.5-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 121 ಬಿಹೆಚ್‌ಪಿ ಪವರ್, 145 ಎನ್ಎಂ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ 7-ಸ್ಟೆಪ್ ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡಲಾಗಿದೆ.

ಹೋಂಡಾ ಈ ಹಿಂದೆ ತನ್ನ ಕೆಲವು ಕಾರುಗಳನ್ನು ಟರ್ಕಿ, ಮೆಕ್ಸಿಕೋ ಮತ್ತು ಮಧ್ಯಪ್ರಾಚ್ಯದಂತಹ ಎಡಗೈ ಡ್ರೈವ್ ಹೊಂದಿರುವ ದೇಶಗಳಿಗೆ, ಹಾಗೆಯೇ ನೇಪಾಳ, ಭೂತಾನ್, ದಕ್ಷಿಣ ಆಫ್ರಿಕಾ ಮತ್ತು SADC ದೇಶಗಳನ್ನು ಒಳಗೊಂಡಂತೆ ಬಲಗೈ ಡ್ರೈವ್ ಹೊಂದಿರುವ ದೇಶಗಳಿಗೆ ಕಾರುಗಳನ್ನು ರಫ್ತು ಮಾಡಿದೆ. ಭಾರತದಿಂದ ಜಪಾನ್‌ಗೆ ಹೋಂಡಾ ಎಲಿವೇಟ್‌ನ ರಫ್ತು ವ್ಯವಹಾರಕ್ಕೆ ಇತ್ತೀಚಿನ ಸೇರ್ಪಡೆಯಾಗಿದೆ.
ಪ್ರಸ್ತುತ ಭಾರತದಲ್ಲಿ ಹೋಂಡಾ ಎಲಿವೇಟ್ ಎಸ್‌ಯುವಿ ರೂ. 11.58 ಲಕ್ಷದಿಂದ ರೂ. 16.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪ್ರತಿ ಲೀಟರ್‌ಗೆ 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಜೊತೆಗೆ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.

ಮೊದಲೇ ಹೇಳಿದಂತೆ ಹೋಂಡಾ ಎಲಿವೇಟ್ ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ (ಆರು ತಿಂಗಳಲ್ಲಿ) ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಹೋಂಡಾ ಎಲಿವೇಟ್ ಕಾರುಗಳು ಮಾರಾಟವಾಗಿವೆ. ಇದೀಗ ಜಪಾನ್ ಮಾರುಕಟ್ಟೆಯಲ್ಲಿ ಈ ಎಸ್‌ಯುವಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








