Mahindra: ಶಕ್ತಿಯುತ ಸ್ಕಾರ್ಪಿಯೋ ಎನ್ ಬಿಡುಗಡೆಯಾಗಿ 2 ವರ್ಷವಾಗಿಲ್ಲ, 1 ಲಕ್ಷ ಕಾರು ತಯಾರಿಕೆ.. ಎದುರಾಳಿಗಳಿಗೆ ಭೀತಿ!
ಭಾರತದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಜನಪ್ರಿಯತೆ ಗಳಿಸಿದೆ. ಕಂಪನಿ ಮಾರಾಟಗೊಳಿಸುವ ಸ್ಕಾರ್ಪಿಯೋ ಕಾರು ದಶಕಗಳಿಂದ ಖ್ಯಾತಿ ಪಡೆದಿದ್ದು, ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಸದ್ಯ, ಸ್ಕಾರ್ಪಿಯೋ ಎನ್ (Scorpio N) ಉತ್ಪಾದನೆಯಲ್ಲಿ ಮಹೀಂದ್ರಾ ಐತಿಹಾಸಿಕ ಸಾಧನೆಯನ್ನು ಮಾಡಿದೆ.
2022ರ ಜೂನ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಎಸ್‌ಯುವಿಯನ್ನು 2 ವರ್ಷ ಕಳೆಯುವುದಕ್ಕಿಂತ ಮೊದಲೇ 1 ಲಕ್ಷ ಯುನಿಟ್ ತಯಾರಿಸಲಾಗಿದೆ. ಇದರಿಂದ ಈ ಕಾರು ಎಷ್ಟರಮಟ್ಟಿಗೆ ಬೇಡಿಕೆ ಪಡೆದುಕೊಂಡಿದೆ ಎಂದು ಸುಲಭವಾಗಿ ಅರ್ಥವಾಗುತ್ತದೆ. ಭಾರತದಲ್ಲಿ ಸ್ಕಾರ್ಪಿಯೋ ಎನ್ ರೂ.13.26 ರಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಎಸ್‌ಯುವಿ ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 6, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುತ್ತದೆ. ಜೊತೆಗೆ ಝಡ್2, ಝಡ್4, ಝಡ್6, ಝಡ್8 ರೂಪಾಂತರ ಹಾಗೂ ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ನಾಪೋಲಿ ಬ್ಲ್ಯಾಕ್ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಈ ಸ್ಕಾರ್ಪಿಯೋ ಎನ್ 2 ಪವರ್‌ಟ್ರೇನ್ ಆಯ್ಕೆಗಳಲ್ಲಿ ಸಿಗುತ್ತದೆ. ಇದರ 2.0 - ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್, 200 ಬಿಹೆಚ್‌ಪಿ ಗರಿಷ್ಠ ಪವರ್ ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ದೊರೆಯುತ್ತದೆ.

ಮತ್ತೊಂದು, 2.2 - ಲೀಟರ್ ಡೀಸೆಲ್ ಎಂಜಿನ್ ಗೇರ್‌ಬಾಕ್ಸ್‌ಗೆ ಅನುಗುಣವಾಗಿ 132 ಬಿಹೆಚ್‌ಪಿ ಪವರ್, 300 ಎನ್ಎಂ ಪೀಕ್ ಟಾರ್ಕ್ ಅಥವಾ 175 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 2WD (ಟೂ ವೀಲ್ ಡ್ರೈವ್), 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಫ್ರಂಟ್, ರೇರ್ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜಿಂಗ್, 6 - ವೇ ಪವರ್ ಡ್ರೈವರ್ ಸೀಟ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ ಸಹ ಸ್ಕಾರ್ಪಿಯೋ ಎನ್ ಉತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದೆ. 6 - ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕ್ ಸಿಸ್ಟಮ್), ಹಿಲ್-ಅಸಿಸ್ಟ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್)ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕಾರಿಗೆ ಟಾಟಾ ಹ್ಯಾರಿಯರ್, ಸಫಾರಿ, ಹ್ಯುಂಡೈ ಕ್ರೆಟಾ, ಅಲ್ಕಾಜರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋದ ಮತ್ತೊಂದು ಆವೃತ್ತಿ 'ಕ್ಲಾಸಿಕ್' ಅನ್ನು ರೂ.13.25 ಲಕ್ಷದಿಂದ ರೂ.17.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟಗೊಳಿಸುತ್ತಿದೆ. ಇದು 2.2 - ಡೀಸೆಲ್ ಎಂಜಿನ್ ಹಾಗೂ 6 - ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ನೂತನ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್, ಎಸ್, ಎಸ್11 ರೂಪಾಂತರ, ಗ್ಯಾಲಕ್ಸಿ ಗ್ರೇ, ಮೊಲ್ಟನ್ ರೆಡ್ ರೇಜ್, ಎವರೆಸ್ಟ್ ವೈಟ್ ಸೇರಿದಂತೆ 4 ಬಣ್ಣದ ಆಯ್ಕೆಯಲ್ಲಿ ದೊರೆಯುತ್ತದೆ. ಬ್ಲೂಟೂತ್ ಕನೆಕ್ಟಿಟಿಯೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ರೀತಿಯ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಒಳಗೊಂಡಿದೆ.


Click it and Unblock the Notifications