Thar Roxx: ಕಾಯುವಿಕೆ ಮುಗಿಯಿತು.. ಇಂದಿನಿಂದ ಮಹೀಂದ್ರಾ ಥಾರ್ ರಾಕ್ಸ್ ಬುಕ್ಕಿಂಗ್ ಶುರು, 12.99 ಲಕ್ಷ.. 5-ಸೀಟರ್!
ದೇಶದ ಮಹಾನಗರಗಳ ನಿವಾಸಿಗಳಿಗೆ ನಿಮಿಷ್ಟದ ಆಫ್-ರೋಡ್ ಎಸ್‌ಯುವಿ ಯಾವುದು ಎಂದು ಪ್ರಶ್ನಿಸಿದರೆ, ಪಟ್ಟನೇ ಹೇಳುವುದು ಮಹೀಂದ್ರಾ ಥಾರ್ ಎಂದು.. ಅಷ್ಟರಮಟ್ಟಿಗೆ ಈ ಎಸ್‌ಯುವಿ ಮನೆ ಮಾತಾಗಿದೆ. ಆದರೆ, ಇದು 3-ಡೋರ್ ಆಯ್ಕೆಯನ್ನು ಹೊಂದಿದ್ದರಿಂದ ಹಿಂಬದಿ ಆಸನಕ್ಕೆ ಪ್ರವೇಶಿಸಲು ಮುಂದಿರುವ ಆಸನವನ್ನು ಮಡಿಚಬೇಕಾಗಿತ್ತು. ಇದರಿಂದ ಸಾಕಷ್ಟು ತೊಂದರೆಯಾಗುತ್ತಿತ್ತು. ಈ ರೀತಿಯ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಕಂಪನಿಯು ಸ್ವಲ್ಪ ವಿಶಾಲವಾಗಿರುವ 5-ಡೋರ್ ಥಾರ್ ರಾಕ್ಸ್ (Thar Roxx) ಎಸ್‌ಯುವಿಯನ್ನು ಆಗಸ್ಟ್ 14ರ ತಡರಾತ್ರಿ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಸದ್ಯ, ಈ ಎಸ್‌ಯುವಿಯನ್ನು ಖರೀದಿಸಲು ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ.
ಇಂದಿನಿಂದ (ಅಕ್ಟೋಬರ್ 3) ನೂತನ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಎಸ್‌ಯುವಿ ಬುಕ್ಕಿಂಗ್ ಪ್ರಾರಂಭವಾಗುತ್ತಿದೆ. ಆಸಕ್ತ ಗ್ರಾಹಕರು ಬೆಳಗ್ಗೆ 11 ಗಂಟೆಯಿಂದ ಆನ್‌ಲೈನ್ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ ಹೊಸ ಎಸ್‌ಯುವಿ ಆರ್ಡರ್ ಮಾಡಬಹುದು. ಬುಕ್ಕಿಂಗ್ ಮಾಡಲು ರೂ.21,000 ಮುಂಗಡ ಹಣವನ್ನು ಪಾವತಿಸಬೇಕು ಎಂದು ತಿಳಿದುಬಂದಿದೆ.

ಈಗಾಗಲೇ, ದೇಶಾದ್ಯಂತ ಮಹೀಂದ್ರಾ ಥಾರ್ ರಾಕ್ಸ್ ಟೆಸ್ಟ್ ಡ್ರೈವ್ ಆರಂಭವಾಗಿದೆ. ನೂತನ ಎಸ್‌ಯುವಿ ವಿತರಣೆ ದಸರಾ ಹಬ್ಬದ (ಅಕ್ಟೋಬರ್ 12) ವೇಳೆಗೆ ಅಥವಾ ತಿಂಗಳಾಂತ್ಯದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಕೆಲವೇ ದಿನಗಳಲ್ಲಿ ವಿತರಣೆ (ಡೆಲಿವರಿ) ಸಂಬಂಧ ಕಂಪನಿ ಕಡೆಯಿಂದ ಅಧಿಕೃತ ವಿವರಗಳು ಲಭ್ಯವಾಗಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ. ರೂ.12.99 ಲಕ್ಷದಿಂದ ರೂ.22.49 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ವಿವಿಧ ರೂಪಾಂತರಗಳು (ವೇರಿಯೆಂಟ್) ಹಾಗೂ ಹಲವು ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಎಸ್‌ಯುವಿ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 2-ಲೀಟರ್ ಟರ್ಬೊ ಪೆಟ್ರೋಲ್ & 2.2-ಲೀಟರ್ ಡಿಸೇಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಹಾಗೂ 4ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಸರಿ ಸುಮಾರು 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡಬಹುದು ಎಂದು ತಿಳಿದುಬಂದಿದೆ.
ಮಹೀಂದ್ರಾ ಥಾರ್ ರಾಕ್ಸ್‌ನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 447 ಲೀಟರ್‌ನ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25 - ಇಂಚು), ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು (ಫೀಚರ್) ಹೊಂದಿದೆ.

ನೂತನ ಥಾರ್ ರಾಕ್ಸ್ ಪ್ರಯಾಣಿಕರಿಗೂ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್ ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಎಸ್‌ಯುವಿಗೆ 5-ಡೋರ್‌ನ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಹಾಗೂ ಫೋರ್ಸ್ ಗೂರ್ಖಾ (Force Gurkha) ಮಾದರಿಗಳು (ಮಾಡೆಲ್) ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications