Mahindra: ಮೊದಲ ಬಾರಿಗೆ ಕಾಣಿಸಿಕೊಂಡ ಹೊಸ 'ಎಕ್ಸ್‌ಯುವಿ 3ಎಕ್ಸ್ಒ' ಎಲೆಕ್ಟ್ರಿಕ್ ಕಾರು.. ಅತಿಕಡಿಮೆ ಬೆಲೆ?
ಭಾರತದ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. ಈ ವಿಭಾಗದಲ್ಲಿ ಟಾಟಾ ಮೋಟಾರ್ಸ್ (Tata Motors) ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ (Mahindra) ಕಂಪನಿ 'ಎಕ್ಸ್‌ಯುವಿ400 ಇವಿ'ಯನ್ನು ಬಿಡುಗಡೆಗೊಳಿಸುವ ಮೂಲಕ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಸದ್ಯ, ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಹೊರತರಲು ತೀರ್ಮಾನಿಸಿದಂತೆ ಕಾಣುತ್ತಿದ್ದು, ಈ ವರ್ಷದ ಏಪ್ರಿಲ್‌ನಲ್ಲಿ ಮಾರಾಟಕ್ಕೆ ತಂದಿದ್ದ ಇಂಧನ ಚಾಲಿತ ಎಕ್ಸ್‌ಯುವಿ 3ಎಕ್ಸ್ಒ (XUV 3XO) ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಕೂಡ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಇತ್ತೀಚೆಗೆ, ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಇವಿ (ಎಲೆಕ್ಟ್ರಿಕ್ ಕಾರು) ಎನ್ನಲಾದ ಮಾದರಿ (Model) ಪ್ರಾಯೋಗಿಕ ಸಂಚಾರ ನಡೆಸುವಾಗ ಕಂಡುಬಂದಿತ್ತು. ನೂತನ ಕಾರಿನ ಕೆಲವು ಸ್ಪೈ ಫೋಟೋಗಳು (ಪತ್ತೇದಾರಿ ಚಿತ್ರಗಳು) ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇಂಧನ ಚಾಲಿತ ಕಾರಿಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್ ಕಾರು ವಿನ್ಯಾಸದಲ್ಲಿ ಒಂದಷ್ಟು ಬದಲಾವಣಿಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ.

ನೂತನ ಎಲೆಕ್ಟ್ರಿಕ್ ಕಾರು, ಇಂಧನ ಚಾಲಿತ (ಪೆಟ್ರೋಲ್/ಡೀಸೆಲ್) ಎಕ್ಸ್‌ಯುವಿ 3ಎಕ್ಸ್ಒನಂತೆ ಹೆಡ್‌ಲ್ಯಾಂಪ್ ಸೆಟಪ್ ಹಾಗೂ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಇದರೊಟ್ಟಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್, ಆಕರ್ಷಕವಾದ ಬ್ಯಾಡ್ಜಿಂಗ್ ಹಾಗೂ ಬಂಪರ್‌ಗಳನ್ನು ಪಡೆದುಕೊಂಡಿರಬಹುದು ಎಂದು ತಿಳಿದುಬಂದಿದೆ. ಹೊಸ ಎಕ್ಸ್‌ಯುವಿ 3ಎಕ್ಸ್ಒ ಉದ್ದವು ಮಹೀಂದ್ರಾದ ಪ್ರಥಮ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರಿಗಿಂತ 200 ಎಂಎಂ ಚಿಕ್ಕದಾಗಿರಲಿದ್ದು, ಬೂಟ್ ಸ್ಪೇಸ್ ಸಹ ಪುಟ್ಟದಾಗಿರಲಿದೆ. ಜೊತೆಗೆ ಅಲಾಯ್ ವೀಲ್‌ಗಳನ್ನು ಹೊಂದಿರಬಹುದು ಎನ್ನಲಾಗಿದೆ.
ಮಹೀಂದ್ರಾ ಎಕ್ಸ್‌ಯುವಿ400 ಇವಿ (ಎಲೆಕ್ಟ್ರಿಕ್ ಕಾರು), 34.5 ಕೆಡಬ್ಲ್ಯೂಹೆಚ್ ಹಾಗೂ 39.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಕ್ರಮವಾಗಿ 375 ರಿಂದ 456 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಮುಂಬರಲಿರುವ ಎಕ್ಸ್‌ಯುವಿ 3ಎಕ್ಸ್ಒ ಇವಿ 34.5 ಬ್ಯಾಟರಿಯನ್ನು ಹೊಂದಿರಲಿದ್ದು, ಭರ್ತಿ ಚಾರ್ಜ್‌ನಲ್ಲಿ ಸರಿ ಸುಮಾರು 375 ಕಿಲೋಮೀಟರ್ ಓಡುತ್ತದೆ ಎಂದು ಅಂದಾಜಿಸಲಾಗಿದೆ.
ಈ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಇವಿ, ಎಸಿ ಹಾಗೂ ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಪಡೆದಿರಲಿದ್ದು, ಎಕ್ಸ್‌ಯುವಿ400 ಇವಿ (ರೂ.15.49 ಲಕ್ಷದಿಂದ ರೂ.19.39 ಲಕ್ಷ) ಕಾರಿಗೆ ಹೋಲಿಕೆ ಮಾಡಿದರೆ, ರೂ.2 ಲಕ್ಷ ಅಗ್ಗವಾಗಿರಲಿದೆ ಎಂದು ಹೇಳಲಾಗಿದೆ. ಎಕ್ಸ್‌ಯುವಿ 3ಎಕ್ಸ್ಒ ಇವಿಗೆ ಟಾಟಾ ನೆಕ್ಸಾನ್ ಇವಿ (Tata Nexon EV) ಪ್ರಬಲವಾದ ಪ್ರತಿಸ್ಪರ್ಧಿಯಾಗಲಿದೆ.
ದೇಶೀಯವಾಗಿ ಲಭ್ಯವಿರುವ ಇಂಧನ ಚಾಲಿತ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO), ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ರೂ.7.49 ಲಕ್ಷದಿಂದ ರೂ.15.49 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 17.96 ರಿಂದ 21.2 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. 10.25-ಇಂಚಿನ ಡುಯಲ್ ಡಿಸ್ಪ್ಲೇಗಳು, ಡುಯಲ್-ಝೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು 6-ಏರ್‌ಬ್ಯಾಗ್, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications