ಭಾರತ ನಿರ್ಮಿಸಿದ ಕಾರಿಗಾಗಿ ಹಠ ಹಿಡಿದ ಆಫ್ರಿಕಾ ಜನ: ಧೂಳೆಬ್ಬಿಸಿದ ಮಹೀಂದ್ರಾ ಕಾರು ಅಲ್ಲಿ ಬಿಡುಗಡೆ!
ಭಾರತದಲ್ಲಿ ಮಹೀಂದ್ರಾ ತನ್ನ ಹೊಸ XUV 3X0 ಎಸ್‌ಯುವಿಯನ್ನು ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಿ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಇದೇ ಕಾರಿಗೆ ವಿಶ್ವದೇಶಗಳಲ್ಲೂ ಬೇಡಿಕೆ ಹೆಚ್ಚಾಗಿರುವುದರಿಂದ ಈ ಭಾರತ ನಿರ್ಮಿತ ಮಹೀಂದ್ರಾ XUV 3X0 ಎಸ್‌ಯುವಿಯನ್ನು ಆಫ್ರಿಕಾದಲ್ಲಿ ಇದೀಗ ಬಿಡುಗಡೆ ಮಾಡಲಾಗಿದೆ. ಭಾರತದ ನಂತರ ಸಬ್ ಕಾಂಪ್ಯಾಕ್ಟ್ ಮಾದರಿಯನ್ನು ಪಡೆದ ಮೊದಲ ಜಾಗತಿಕ ಮಾರುಕಟ್ಟೆಯಾಗಿ ದಕ್ಷಿಣ ಆಫ್ರಿಕಾ ಗುರ್ತಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಹೊಸ XUV 3X0 ಎಸ್‌ಯುವಿ ಬೆಲೆಯು 12.16 ಲಕ್ಷಕ್ಕೆ (ಭಾರತೀಯ ರೂ.) ಬಿಡುಗಡೆಯಾಗಿದೆ.
ಭಾರತದಲ್ಲಿ ಇದೇ ಎಸ್‌ಯುವಿಯ ಆರಂಭಿಕ ಬೆಲೆಯು ರೂ.7.49 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಇನ್ನು ದಕ್ಷಿಣ ಆಫ್ರಿಕಾಗೆ ರಫ್ತು ಮಾಡಲಾಗುವ ಕಾರನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ದಕ್ಷಿಣ ಆಫ್ರಿಕಾದ ಎಸ್‌ಯುವಿ ಭಾರತದಲ್ಲಿ ಮಾರಾಟವಾಗುವ ಮಾದರಿಯೊಂದಿಗೆ ಸೀಮಿತ ಎಂಜಿನ್ ಆಯ್ಕೆಗಳು ಮತ್ತು ನವೀಕರಿಸಿದ ಒಳಾಂಗಣ ಸೇರಿದಂತೆ ಹಲವಾರು ವ್ಯತ್ಯಾಸಗಳನ್ನು ಹೊಂದಿದೆ.

ಭಾರತೀಯ ಆವೃತ್ತಿಗಿಂತ ಹೇಗೆ ಭಿನ್ನವಾಗಿದೆ?: ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾದ ಮಹೀಂದ್ರಾದ ಹೊಸ XUV 3X0 ಎಸ್‌ಯುವಿ ಡಿಸೈನ್ ವಿಷಯದಲ್ಲಿ ಭಾರತೀಯ ಕಾರಿನಂತೆಯೇ ಇರುತ್ತದೆ. ಈ ಎಸ್‌ಯುವಿಯನ್ನು MX2 ನಿಂದ ಟಾಪ್ ಎಂಡ್ AX7L ವರೆಗೆ ಎಂಟು ರೂಪಾಂತರಗಳಲ್ಲಿ ನೀಡಲಾಗಿದೆ. ಇದರ ಟಾಪ್ ಎಂಡ್ ವೇರಿಯೆಂಟ್ ಬೆಲೆಯು 19.31 ಲಕ್ಷ ರೂ. ವರೆಗೆ ಇದೆ.
ಎಂಜಿನ್ ವಿಷಯಕ್ಕೆ ಬಂದರೆ ಆಫ್ರಿಕಾಗೆ ರಫ್ತು ಮಾಡಲಾಗುವ ಕಾರು ಕೇವಲ 1.2 ಲೀಟರ್‌ನ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ಪಡೆದಿದೆ. ಈ ಎಂಜಿನ್ 109 ಬಿಹೆಚ್‌ಪಿ ಪವರ್ ಹಾಗೂ 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಭಾರತದಲ್ಲಿ ಇದೇ ಕಾರು 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳು: ದಕ್ಷಿಣ ಆಫ್ರಿಕಾದ ಮಹೀಂದ್ರಾ XUV 3X0 ಇಂಡಿಯಾ-ಸ್ಪೆಕ್ ಮಾದರಿಯ ಡ್ಯುಯಲ್-ಟೋನ್ ಥೀಮ್‌ಗಿಂತ ಭಿನ್ನವಾಗಿ ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ. 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಎಡಿಎಎಸ್ ಮತ್ತು 360-ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುವ ಇತರ ಭಾರತೀಯ ಎಸ್‌ಯುವಿಗಳಾದ ಮಾರುತಿ ಫ್ರಾಂಕ್ಸ್, ಹ್ಯುಂಡೈ ವೆನ್ಯೂ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಹೊಸ ಮಹೀಂದ್ರಾ XUV 3X0 ಪೈಪೋಟಿ ನೀಡಲಿದೆ. ಭಾರತದಲ್ಲಿ ನೋಡಿಕೊಂಡರೆ XUV 3X0 ಕಾರು ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಕಿಯಾ ಸೊನೆಟ್‌ನಂತಹ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಮಹೀಂದ್ರಾ XUV 3X0 ದಕ್ಷಿಣ ಆಫ್ರಿಕಾಗೆ ಮಹೀಂದ್ರಾದಿಂದ ನೀಡಲಾದ ಅತ್ಯಂತ ಚಿಕ್ಕ ಎಸ್‌ಯುವಿಯಾಗಿದೆ. ಈಗಾಗಲೇ ಆಫ್ರಿಕಾದಲ್ಲಿ ಮಹೀಂದ್ರಾ ಸ್ಕಾರ್ಪಿಯೋ-ಎನ್ ಮತ್ತು XUV 700 ಮಾರಾಟದಲ್ಲಿದ್ದು, ಇವುಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿರುವ ಮಹೀಂದ್ರಾದ ಮೂರನೇ ಎಸ್‌ಯುವಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications