ಆಕರ್ಷಕ ಬೆಲೆಯ ಮಹೀಂದ್ರಾ ಕಾರಿಗಾಗಿ ಮುಗಿಬಿದ್ದ ಜನ: ಮನೆಗೆ ತರಲು ಎಷ್ಟು ತಿಂಗಳು ಕಾಯಬೇಕು?
ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ (Mahindra) ತನ್ನ XUV 3XO ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದು ಮಹೀಂದ್ರಾ XUV300 ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯ ಹೆಚ್ಚು ನವೀಕರಿಸಿದ ಆವೃತ್ತಿಯಾಗಿದ್ದು, ಗಮನಾರ್ಹ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ನವೀಕರಣಗಳೊಂದಿಗೆ ಮಹೀಂದ್ರಾ XUV 3XO (Mahindra XUV 3XO) ಎಸ್‍ಯುವಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಹೊಸ ಮಹೀಂದ್ರಾ XUV 3XO ಎಸ್‍ಯುವಿ ಮಾದರಿಯು ಬಿಡುಗಡೆಯಾದಗಿನಿಂದ ಬ್ರ್ಯಾಂಡ್‌ನ ಮಾರಾಟದ ಅಂಕಿಅಂಶಗಳಿಗೆ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ. ಈ ಹೊಸ ಮಹೀಂದ್ರಾ ಎಸ್‍ಯುವಿಯ ಭರ್ಜರಿಯಾಗಿ ಮಾರಾಟವಾಗುತ್ತಿವೆ.
ನವೀಕರಣದ ಮೊದಲು, ಮಹೀಂದ್ರಾ XUV300 ತಿಂಗಳಿಗೆ ಸರಾಸರಿ 4000 ಯುನಿಟ್ ಮಾರಾಟವಾಗುತ್ತಿತ್ತು. ಆದರೆ ಬೇಡಿಕೆ ಗಗನಕ್ಕೇರುವುದರೊಂದಿಗೆ, ಮಹೀಂದ್ರಾ XUV 3XO ತಿಂಗಳಿಗೆ ಸರಾಸರಿ 9000 ರಿಂದ 10000 ಯುನಿಟ್‌ಗಳು ಮಾರಾಟವಾಗುತ್ತಿವೆ. 2024ರ ಆಗಸ್ಟ್ ತಿಂಗಳಿನಲ್ಲಿ ಮಹೀಂದ್ರಾ XUV 3XO ಮಾದರಿಯ 9,000 ಯುನಿಟ್‌ಗಳು ಮಾರಾಟವಾಗಿವೆ. ಬೇಡಿಕೆಯ ಹೆಚ್ಚಳದೊಂದಿಗೆ, ಮಾದರಿಗಾಗಿ ಕಾಯುವ ಅವಧಿಯು ತೀವ್ರವಾಗಿ ಹೆಚ್ಚಾಗಿದೆ.

ನೀವು ಮಹೀಂದ್ರಾ XUV 3XO ಖರೀದಿಸಲು ಯೋಜಿಸುತ್ತಿದ್ದರೆ, ಪ್ರತಿಯೊಂದು ರೂಪಾಂತರವನ್ನು ಪಡೆಯಲು ನೀವು ಎಷ್ಟು ದಿನ ಕಾಯಬೇಕು ಎಂಬ ಮಾಹಿತಿ ಬಹಿರಂಗವಾಗಿದೆ. ಮಹೀಂದ್ರಾ XUV300 ಎಸ್‍ಯುವಿಯ ಮೂಲ MX1 ಪೆಟ್ರೋಲ್ ರೂಪಾಂತರವು ಆರು ತಿಂಗಳವರೆಗೆ ಗರಿಷ್ಠ ಕಾಯುವ ಅವಧಿಯನ್ನು ಹೊಂದಿದೆ. ಈ ರೂಪಾಂತರದ ಉತ್ಪಾದನೆಯು ಕಡಿಮೆಯಾಗಿದೆ.
ಮಹೀಂದ್ರಾ XUV 3XO ಎಸ್‍ಯುವಿಯ ಟಾಪ್ ಸ್ಪೆಕ್ AX5 L, AX7 ಮತ್ತು AX7 L ಪೆಟ್ರೋಲ್ ರೂಪಾಂತರಗಳು ಸುಮಾರು ಎರಡು ಮೂರು ತಿಂಗಳುಗಳಲ್ಲಿ ಲಭ್ಯವಿರುತ್ತವೆ. ಇನ್ನು ಮಿಡ್-ಸ್ಪೆಕ್ AX5 ಟ್ರಿಮ್ ಅನ್ನು ಬುಕ್ ಮಾಡಿದರೆ, ವಿತರಣೆಗಾಗಿ ನೀವು ಸುಮಾರು ನಾಲ್ಕು ತಿಂಗಳು ಕಾಯಬೇಕಾಗುತ್ತದೆ. MX2/ MX2 Pro ಮತ್ತು MX3/MX3 Pro ರೂಪಾಂತರಗಳಿಗಾಗಿ ಕಾಯುವ ಅವಧಿಯು ಮೂರರಿಂದ ನಾಲ್ಕು ತಿಂಗಳುಗಳಿವೆ.

ಇನ್ನು XUV 3XO ಎಸ್‍ಯುವಿಯ ಎಲ್ಲಾ ಡೀಸೆಲ್ ರೂಪಾಂತರಗಳು ಒಂದು ತಿಂಗಳ ಕಾಯುವ ಅವಧಿಯನ್ನು ಹೊಂದಿವೆ. ಈ ಮಹೀಂದ್ರಾ XUV 3XO ಎಸ್‍ಯುವಿಯ ಪ್ರಸ್ತುತ ಆರಂಭಿಕ ಬೆಲೆಯು ರೂ.7.49 ಲಕ್ಷವಾದರೆ ಟಾಪ್ ಸ್ಪೆಕ್ ರೂ.15.49 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಈ ಎಸ್‍ಯುವಿಯು ಪ್ರತಿ ತಿಂಗಳು 20,000 ಹೊಸ ಬುಕಿಂಗ್‌ಗಳನ್ನು ಪಡೆಯುತ್ತಿದೆ.
ಈ ಕಾರು ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ಮಾರಾಟ ಮತ್ತು ಬುಕಿಂಗ್ ಅಂಕಿಅಂಶಗಳು ತೋರಿಸುತ್ತವೆ. ಈ ಮಹೀಂದ್ರಾ XUV 3XO ಎಸ್‍ಯುವಿಯು ವಿನ್ಯಾಸವು ಮಹೀಂದ್ರಾದ ಮುಂಬರುವ BE ಎಲೆಕ್ಟ್ರಿಕ್ ಎಸ್‍ಯುವಿಯಿಂದ ಹೆಚ್ಚು ಸ್ಫೂರ್ತಿ ಪಡೆದಿದೆ. ಈ ಎಸ್‍ಯುವಿಯಲ್ಲಿ ಮುಂಭಾಗದಲ್ಲಿ, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್‌ಗಳು (DRL ಗಳು), ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ದೊಡ್ಡ ಸೆಂಟ್ರಲ್ ಏರ್ ಟೆಕ್ ನೊಂದಿಗೆ ಪರಿಷ್ಕೃತ ಬಂಪರ್ ಮತ್ತು LED ಹೆಡ್‌ಲೈಟ್‌ಗಳನ್ನು ಹೊಂದಿವೆ.

ಇನ್ನು ಈ ಹೊಸ ಮಹೀಂದ್ರಾ ಎಸ್‍ಯುವಿಯ ಸೈಡ್ ಪ್ರೊಫೈಲ್ ಬಹುಮಟ್ಟಿಗೆ ಬದಲಾಗದೆ ಉಳಿದಿದ್ದರೂ, ಡಾರ್ಕ್ ಕ್ರೋಮ್ ಫಿನಿಶ್ ಹೊಂದಿರುವ ಹೊಸ ಅಲಾಯ್ ವ್ಹೀಲ್ ಗಳು ಅದರ ಪೂರ್ವವರ್ತಿಯಿಂದ ಅದನ್ನು ಪ್ರತ್ಯೇಕಿಸುತ್ತದೆ. ಇನ್ನು ಫುಲ್ ಅಗಲದ ಎಲ್ಇಡಿ ಲೈಟ್ ಬಾರ್, ಬಂಪರ್-ಸಂಯೋಜಿತ ನೋಂದಣಿ ಪ್ಲೇಟ್ ಮತ್ತು ಸ್ಲೀಕರ್ ಸಿ-ಆಕಾರದ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿರುವ ನವೀಕರಿಸಿದ ಟೈಲ್‌ಗೇಟ್ ವಿನ್ಯಾಸದೊಂದಿಗೆ ಹಿಂಭಾಗದ ವಿಭಾಗವನ್ನು ಸಂಪೂರ್ಣವಾಗಿ ನವೀಕರಿಸಿದೆ.
ಹೊಸ ಮಹೀಂದ್ರಾ XUV 3XO ಎಸ್‍ಯುವಿಯಲ್ಲಿ 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಮತ್ತು 200 Nm ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.ಈ ಎಸ್‍ಯುವಿಯು 18.89 ಕಿ.ಮೀ ಮತ್ತು 20.1 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.


Click it and Unblock the Notifications