Mahindra: ಈ ಜನಪ್ರಿಯ ಫ್ಯಾಮಿಲಿ ಕಾರಿನ ಬೆಲೆ ದಿಢೀರ್ ಏರಿಕೆ.. ಎರಡು ಕುಟುಂಬ ಪ್ರಯಾಣಿಸಬಹುದು!
ಮಹೀಂದ್ರಾ (Mahindra) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಯಶಸ್ವಿಯಾಗಿ ಎಕ್ಸ್‌ಯುವಿ700 (XUV700) ಕಾರನ್ನು ಮಾರಾಟ ಮಾಡುತ್ತಿದೆ. ಇದೊಂದು ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಸದ್ಯ, ಈ 'ಎಕ್ಸ್‌ಯುವಿ700' ಕಾರಿನ ವಿವಿಧ ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ರೂ.50,000 ವರೆಗೆ ಏರಿಕೆ ಮಾಡಲಾಗಿದೆ. ಗುರುವಾರದಿಂದಲೇ ನೂತನ ದರಗಳು ಅನ್ವಯವಾಗಲಿದೆ ಎಂದು ವರದಿಯಾಗಿದೆ. ಬನ್ನಿ.. ಯಾವ ರೂಪಾಂತರಗಳ ಬೆಲೆ ಎಷ್ಟು ಹೆಚ್ಚಳಗೊಂಡಿದೆ ಎಂಬುದನ್ನು ತಿಳಿಯೋಣ.
ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿಯ ಎಎಕ್ಸ್7ಎಲ್ ಡೀಸೆಲ್ ಆಟೋಮೆಟಿಕ್ 7-ಸೀಟರ್, ಎಎಕ್ಸ್7ಎಲ್ ಡೀಸೆಲ್ ಆಟೋಮೆಟಿಕ್ ಎಡಬ್ಲ್ಯೂಡಿ 7-ಸೀಟರ್ ರೂಪಾಂತರಗಳ ಬೆಲೆ ರೂ.50,000 ವರೆಗೆ ಹೆಚ್ಚಳಗೊಂಡಿದೆ. ಎಎಕ್ಸ್7 ಪೆಟ್ರೋಲ್ ಆಟೋಮೆಟಿಕ್ 6-ಸೀಟರ್, ಎಎಕ್ಸ್7 ಪೆಟ್ರೋಲ್ ಆಟೋಮೆಟಿಕ್ 7-ಸೀಟರ್, ಎಎಕ್ಸ್7 ಡೀಸೆಲ್ ಆಟೋಮೆಟಿಕ್ 6-ಸೀಟರ್ ಹಾಗೂ ಎಎಕ್ಸ್7 ಡೀಸೆಲ್ ಆಟೋಮೆಟಿಕ್ 7-ಸೀಟರ್ ರೂಪಾಂತರಗಳ ದರ ರೂ.30,000 ವರೆಗೆ ಅಧಿಕಗೊಂಡಿದೆ.

ಎಎಕ್ಸ್7 ಪೆಟ್ರೋಲ್ ಮ್ಯಾನುವಲ್ 7-ಸೀಟರ್, ಎಎಕ್ಸ್7 ಪೆಟ್ರೋಲ್ ಮ್ಯಾನುವಲ್ 6-ಸೀಟರ್ ಮತ್ತು ಎಎಕ್ಸ್7 ಡೀಸೆಲ್ ಮ್ಯಾನುವಲ್ 7-ಸೀಟರ್ ಸೇರಿದಂತೆ ಒಂದಷ್ಟು ರೂಪಾಂತರಗಳ ಬೆಲೆ ಯಾವುದೇ ರೀತಿಯಲ್ಲಿ ಹೆಚ್ಚಳಗೊಂಡಿಲ್ಲ. ದರ ಏರಿಕೆ ನಂತರ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ ರೂ.13.99 ಲಕ್ಷದಿಂದ ರೂ.25.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಈ ಕಾರು, 2 ಪವರ್‌ಟ್ರೇನ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 450 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ನೂತನ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಬರೊಬ್ಬರಿ 17 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ. ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) & ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ಪಡೆದಿದೆ.
ಈ ಹೊಸ ಕಾರು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಇಂಗ್ಲಿಷ್ ಭಾಷೆಯ 'ಸಿ' ಅಕ್ಷರದಂತೆ ಇರುವ ಎಲ್ಇಡಿ ಡಿಆರ್‌ಎಲ್‌ಗಳು, ಕಾರ್ನರಿಂಗ್ ಲೈಟ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿದೆ. ಜೊತೆಗೆ ಎವರೆಸ್ಟ್ ವೈಟ್ & ಮಿಡ್ನೈಟ್ ಬ್ಲ್ಯಾಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ 6/ 7 ಆಸನ (ಸೀಟ್) ಆಯ್ಕೆ ವ್ಯವಸ್ಥೆಯನ್ನು ಕೂಡ ಪಡೆದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್, 12 - ಸ್ಪೀಕರ್ ಆಡಿಯೊ ಸಿಸ್ಟಮ್, ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಎಕ್ಸ್‌ಯುವಿ700 ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಯರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಈ ಕಾರಿಗೆ ಹ್ಯುಂಡೈ ಅಲ್ಕಾಜರ್, ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎಸ್‌ಯುವಿಗಳು ಪ್ರಬಲವಾಗಿ ಸ್ಪರ್ಧೆಯೊಡ್ಡುತ್ತವೆ.
ನಿಮ್ಮ ಗಮನಕ್ಕೆ.. ನೂತನ ದರಗಳಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿದ್ದರೂ ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








