'ಟಾಟಾ ಪಂಚ್' ವೇಗಕ್ಕೆ ಬ್ರೇಕ್ ಹಾಕಲು ಎರಡು ಅಗ್ಗದ ಕಾರುಗಳ ಬಿಡುಗಡೆಗೆ ಮಾರುತಿ, ಹ್ಯುಂಡೈ ಪ್ಲಾನ್?
ಭಾರತದಲ್ಲಿ ಮೈಕ್ರೋ ಎಸ್‌ಯುವಿ ವಿಭಾಗವು ಇತ್ತೀಚಗೆ ಭಾರೀ ಜನಪ್ರಿಯತೆ ಪಡೆಯತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ 'ಟಾಟಾ ಪಂಚ್', ಈ ಸಣ್ಣ ಫ್ಯಾಮಿಲಿ ಕಾರು ಮಾರಾಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಟಾಟಾ ಪಂಚ್‌ನ ಮಾರಾಟವನ್ನು ನೋಡಿದ ನಂತರ, ಮಾರುತಿ ಸುಜುಕಿ ಮತ್ತು ಹ್ಯುಂಡೈ ಈ ವಿಭಾಗದಲ್ಲಿ ಹೊಸ ವಾಹನಗಳನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿವೆ ಎಂದು ತಿಳಿದುಬಂದಿದೆ. ಪಂಚ್‌ಗೆ ಪ್ರತಿಸ್ಪರ್ಧಿಯೆಂದರೆ ಸ್ಪರ್ಧಾತ್ಮಕ ಬೆಲೆ, ಉತ್ತಮ ನಿರ್ಮಾಣ ಗುಣಮಟ್ಟ ಸೇರಿದಂತೆ ಮೈಲೇಜ್ ಕೂಡ ಹೆಚ್ಚಿರಬೇಕು. ಈ ನಿಟ್ಟಿನಲ್ಲಿ ಮಾರುತಿ ಹಾಗೂ ಹ್ಯುಂಡೈ ಕಾರುಗಳು ಹೇಗಿರಲಿವೆ ಎಂಬುದನ್ನು ಇಲ್ಲಿ ನೋಡೋಣ.
1. ಹ್ಯುಂಡೈ ಮೈಕ್ರೋ ಎಸ್‌ಯುವಿ: ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಈಗಾಗಲೇ ಆಧುನಿಕ ಸ್ಟೈಲಿಂಗ್‌ನೊಂದಿಗೆ 'ಎಕ್ಸ್‌ಟರ್' ಅನ್ನು ಹೊಂದಿದೆ. ಇದೇ ಮಾದರಿಯನ್ನು "ಇನ್‌ಸ್ಟರ್" ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸಲು ಹ್ಯುಂಡೈ ಸಜ್ಜಾಗಿದೆ. ಕ್ಲೋಸ್ಡ್-ಆಫ್ ಗ್ರಿಲ್ ಸೇರಿದಂತೆ ಕೆಲವು ಹೊಸ ವಿನ್ಯಾಸ ಅಂಶಗಳನ್ನು ಹೊರತುಪಡಿಸಿ ಮುಂಭಾಗದ ವಿನ್ಯಾಸವು ಹಾಗೆಯೇ ಇರಲಿದೆ.

ಚಾರ್ಜಿಂಗ್ ಪೋರ್ಟ್ ಬಹುಶಃ ಹ್ಯುಂಡೈ ಲೋಗೋದ ಕೆಳಗೆ ಇರುತ್ತದೆ. ಹಿಂಭಾಗದಲ್ಲಿ, ಇದು ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್, ಗ್ಲೋಸ್-ಬ್ಲ್ಯಾಕ್ ಬಾರ್‌ನೊಂದಿಗೆ ಜೋಡಿಸಲಾದ ರೂಫ್ ಸ್ಪಾಯ್ಲರ್ ಅನ್ನು ಹೊಂದಿರಲಿದ್ದು, ಇದು ಟೈಲ್ ಲೈಟ್‌ಗಳನ್ನು ಸಂಪರ್ಕಿಸುತ್ತದೆ. ಹಾಗೆಯೇ ಮಧ್ಯದಲ್ಲಿ ಹ್ಯುಂಡೈ ಲೋಗೊವನ್ನು ಇರಲಿದೆ.
ಇಂಟೀರಿಯರ್ ವಿಷಯಕ್ಕೆ ಬಂದರೆ, ದೊಡ್ಡ 10.25-ಇಂಚಿನ ಇನ್ಫೋಟೈನ್ಮೆಂಟ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿರಬಹುದು. ವೈರ್ಲೆಸ್ ಚಾರ್ಜರ್ ಮತ್ತು ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ಆಟೋ ಕ್ಲೈಮೇಟ್ ಕಂಟ್ರೋಲ್ ಇರಲಿದೆ. ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360 ಡಿಗ್ರಿ ಸರೌಂಡ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಇನ್‌ಸ್ಟರ್ ಇವಿಯನ್ನು 42 ಕಿಲೋವ್ಯಾಟ್ ಮತ್ತು 49 ಕಿಲೋವ್ಯಾಟ್‌ನ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಬಹುದು. ಇದರ ಸಣ್ಣ ಬ್ಯಾಟರಿ 95 ಬಿಹೆಚ್‌ಪಿ ಪವರ್ ಮತ್ತು ದೊಡ್ಡ ಬ್ಯಾಟರಿ 113 ಬಿಹೆಚ್‌ಪಿ ಪವರ್ ಸೇರಿದಂತೆ ಎರಡಕ್ಕೂ 147 ಎನ್ಎಂ ಟಾರ್ಕ್ ಉತ್ಪಾದಿಸುವಂತೆ ಟ್ಯೂನ್ ಮಾಡುವುದಾಗಿ ವರದಿಯಾಗಿದೆ. ಈ ಮಾದರಿಯು ಗರಿಷ್ಠ 355 ಕಿ.ಮೀ ರೇಂಜ್ ನೀಡುತ್ತದೆ ಎಂದು ಹೇಳಲಾಗಿದೆ.
2. ಮಾರುತಿ ಸುಜುಕಿ ಮೈಕ್ರೊ ಎಸ್‌ಯುವಿ: ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಮಾರುತಿ ಈಗಾಗಲೇ ಎಸ್-ಪ್ರೆಸ್ಸೊ ಮತ್ತು ಇಗ್ನಿಸ್ ಕಾರುಗಳನ್ನು ನೀಡುತ್ತಿದೆ. ಆದ್ರೆ ಇತ್ತೀಚಿನ ವರದಿಗಳ ಪ್ರಕಾರ, ಮಾರುತಿಯ ಹೊಸ ಮೈಕ್ರೋ-ಎಸ್‌ಯುವಿ 2026 ರಲ್ಲಿ ಬಿಡುಗಡೆಯಾಗಲಿದೆ. ಈ ಕಾರನ್ನು ಬ್ರೆಝಾ ಕೆಳಗೆ ಇರಿಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ಇದು 4 ಮೀಟರ್‌ಗಿಂತ ಕಡಿಮೆ ಉದ್ದವಿರಲಿದೆ.

ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಗ್ರ್ಯಾಂಡ್ ವಿಟಾರಾ ಮತ್ತು ಫ್ರಾಂಕ್ಸ್ ಅನ್ನು ಹೋಲುತ್ತದೆ ಎಂದು ಮೂಲಗಳು ತಿಳಿಸಿವೆ. ಹೊಸ ಇಂಟೀರಿಯರ್‌ನೊಂದಿಗೆ ದೊಡ್ಡ ಹೆಡ್ಸ್-ಅಪ್ ಡಿಸ್ ಪ್ಲೇ, ಆಟೋ ಎಚ್‌ವಿಎಸಿ ಮತ್ತು ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಆರು ಏರ್ ಬ್ಯಾಗ್‌ಗಳು ಇರಲಿವೆ.
ಹೊಸ ಮೈಕ್ರೊ ಎಸ್‌ಯುವಿ 1.2-ಲೀಟರ್ ಝಡ್-ಸೀರಿಸ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಇರಲಿದೆ. ಬೆಲೆಯು ವಾಹನದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿರುವುದರಿಂದ ಪ್ರತಿಸ್ಪರ್ಧಿಗಳ ಬೆಲೆಗಳನ್ನು ಪರಿಗಣಿಸಿ, ಕಡಿಮೆ ಬೆಲೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.


Click it and Unblock the Notifications