7 ಪ್ರೀಮಿಯಂ ಫೀಚರ್ಸ್‌ನೊಂದಿಗೆ ಮಾರುತಿ ಬ್ರೆಝಾಗಿಂತ ಕಡಿಮೆ ಬೆಲೆಯಲ್ಲಿ ಹೊಸ ಸ್ಕೋಡಾ ಎಸ್‌ಯುವಿ!
ಸ್ಕೋಡಾ ಬ್ರಾಂಡ್ ಇತ್ತೀಚೆಗೆ ಬಿಡುಗಡೆ ಮಾಡಿರುವ ತನ್ನ ಕೈಲಾಕ್ ಎಸ್‌ಯುವಿ ಭರ್ಜರಿ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಈ ಕಾರು ಮಾರುತಿ ಸುಜುಕಿ ಬ್ರೆಝಾಗೆ ಪೈಪೋಟಿ ನೀಡುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರೆಝಾ ಹೆಚ್ಚು ಮಾರಾಟ ಕಾಣುವ ಸಬ್-4 ಮೀಟರ್ ಎಸ್‌ಯುವಿಯಾಗಿದ್ದರೂ, ಇದಕ್ಕೆ ಚೆಕ್ ಇಡಲು ಈಗ ಸ್ಕೋಡಾ ಕೈಲಾಕ್ ಎಂಟ್ರಿಕೊಟ್ಟಿದೆ. ಪ್ರೀಮಿಯಂ ಕ್ಯಾಬಿನ್ ಅನುಭವದೊಂದಿಗೆ ಬ್ರೆಝಾದಲ್ಲಿ ಸಿಗದ 7 ಪ್ರಮುಖ ವೈಶಿಷ್ಟ್ಯಗಳನ್ನು ಸ್ಕೋಡಾ ಕೈಲಾಕ್ ಪಡೆದುಕೊಂಡಿದೆ, ಆ ಬಗ್ಗೆ ತಿಳಿಯೋಣ.
ವೆಂಟಿಲೇಟೆಡ್ ಸೀಟ್‌ಗಳು: ಸ್ಕೋಡಾ ಕೈಲಾಕ್‌ನಲ್ಲಿನ ಮುಂಭಾಗದ ಪ್ರಯಾಣಿಕರು ವೆಂಟಿಲೇಟೆಡ್ ಸೀಟ್‌ಗಳನ್ನು ಪಡೆಯಬಹುದು. ಸ್ಕೋಡಾ ಈ ಆರಾಮ ಮತ್ತು ಅನುಕೂಲಕರ ವೈಶಿಷ್ಟ್ಯವನ್ನು ಎಸ್‌ಯುವಿಯ ಹೈ-ಸ್ಪೆಕ್ ವೇರಿಯೆಂಟ್‌ಗಳಲ್ಲಿ ಮಾತ್ರ ಒದಗಿಸುತ್ತದೆ. ಈ ಫೀಚರ್ ನಿಮಗೆ ಬ್ರೆಝಾದಲ್ಲಿ ಸಿಗುವುದಿಲ್ಲ. ಬೇಸಿಗೆಯಲ್ಲಿ ಈ ವೆಂಟಿಲೇಟೆಡ್ ಸೀಟ್‌ಗಳು ತುಂಬಾ ಉಪಯುಕ್ತವಾಗಿರುತ್ತವೆ.

ಫುಲ್ಲಿ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್: ಹೊಸ ಸ್ಕೋಡಾ ಕೈಲಾಕ್ 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿದ್ದು ಆಧುನಿಕವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತದೆ. ಇತ್ತ ಬ್ರೆಝಾ ತನ್ನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಅನಲಾಗ್ ಡಯಲ್‌ಗಳನ್ನು ಹೊಂದಿದೆ. ಹೆಚ್ಚುವರಿ ಮಾಹಿತಿಗಾಗಿ ಮಧ್ಯದಲ್ಲಿ ಸಣ್ಣ ಮಲ್ಟಿ ಇನ್ಫೋ ಡಿಸ್ಪ್ಲೇ ಇದೆ.
ಆರು ಏರ್ ಬ್ಯಾಗ್: ಸುರಕ್ಷತೆಗೆ ಸಂಬಂಧಿಸಿದಂತೆ, ಮಾರುತಿ ಬ್ರೆಝಾ ತನ್ನ ಟಾಪ್-ಸ್ಪೆಕ್ ಝಡ್ಎಕ್ಸ್ಐ ಪ್ಲಸ್‌ನಲ್ಲಿ ಮಾತ್ರ ಆರು ಏರ್‌ಬ್ಯಾಗ್‌ಗಳನ್ನು ಪಡೆದಿದೆ. ಆದರೆ ಸ್ಕೋಡಾ ಕೈಲಾಕ್ ಎಲ್ಲಾ ರೂಪಾಂತರಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಎರಡೂ ಕಾರುಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳಂತಹ ಸುರಕ್ಷತಾ ಫೀಚರ್ಸ್ ಹೊಂದಿವೆ.

ಕಾರ್ನರಿಂಗ್ ಹೆಡ್ ಲೈಟ್: ಬ್ರೆಝಾದಲ್ಲಿ ಸಾಮಾನ್ಯ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಆದರೆ ಕೈಲಾಕ್ ಕಾರ್ನರಿಂಗ್ ಹೆಡ್ ಲೈಟ್‌ಗಳನ್ನು ಹೊಂದಿದೆ, ವಿಶೇಷವಾಗಿ ಕಡಿಮೆ ಗೋಚರತೆ ಸನ್ನಿವೇಶಗಳಲ್ಲಿ ಮತ್ತು ರಾತ್ರಿಯಲ್ಲಿ ಇದು ಮೂಲೆಗಳಲ್ಲಿಯೂ ಗೋಚರತೆಯನ್ನು ಸುಧಾರಿಸುತ್ತದೆ. ಎರಡೂ ಕಾರುಗಳು ಆಟೋಮ್ಯಾಟಿಕ್ ಹೆಡ್‌ಲೈಟ್ ಫಂಕ್ಷನ್ ಹೊಂದಿವೆ.
ಪವರ್ಡ್ ಫ್ರಂಟ್ ಸೀಟ್ಸ್: ಬ್ರೆಝಾದಲ್ಲಿ ಮ್ಯಾನುವಲ್ಲಿ ಅಡ್ಜಸ್ಟ್ ಮಾಡಬಹುದಾದ ಸೀಟ್ ನೀಡಲಾಗಿದೆ, ಅದು ಕೂಡ ಡ್ರೈವರ್ ಸೀಟ್‌ಗೆ ಮಾತ್ರ. ಸ್ಕೋಡಾ ಕೈಲಾಕ್‌ನಲ್ಲಿ 6-ವೇ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟುಗಳನ್ನು ನೀಡಲಾಗಿದೆ. ಈ ಪವರ್ಡ್ ಸೀಟ್‌ಗಳ ಅನುಕೂಲವೆಂದರೆ, ಅವು ಸೀಟುಗಳನ್ನು ಸರಿಹೊಂದಿಸಲು ಹೆಚ್ಚಿನ ಅನುಕೂಲ ಮತ್ತು ಉತ್ತಮ ನಿಯಂತ್ರಣವನ್ನು ನೀಡುತ್ತವೆ.

ದೊಡ್ಡ ಇನ್ಫೋಟೈನ್ಮೆಂಟ್: ಇನ್ಫೋಟೈನ್ಮೆಂಟ್ ಸಿಸ್ಟಂ ವಿಷಯಕ್ಕೆ ಬಂದರೆ, ಕೈಲಾಕ್ ಎಸ್‌ಯುವಿಯಲ್ಲಿ 10 ಇಂಚಿನ ಟಚ್ ಸ್ಕ್ರೀನ್ ಪಡೆದರೆ, ಬ್ರೆಝಾ 9 ಇಂಚಿನ ಸ್ಕ್ರೀನ್ ಹೊಂದಿದೆ. ಎರಡೂ ಸಿಸ್ಟಮ್‌ಗಳು ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಸಪೋರ್ಟ್ ಮಾಡುತ್ತವೆ. ಹಾಗೆಯೇ ಎರಡರಲ್ಲೂ ಕನೆಕ್ಟೆಡ್ ಕಾರ್ ಟೆಕ್ ಅನ್ನು ಪಡೆಯಬಹುದು.
ಬೆಲೆ: ಮಾರುತಿ ಸುಜುಕಿ ಬ್ರೆಝಾ ಬೆಲೆಯು ರೂ. 8.34 ಲಕ್ಷದಿಂದ 14.14 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ)ಇದೆ. ಸ್ಕೋಡಾ ತನ್ನ ಹೊಸ ಕೈಲಾಕ್ ಅನ್ನು 7.89 ಲಕ್ಷ ರೂ. (ಎಕ್ಸ್ ಶೋರೂಂ)ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಅಧಿಕೃತವಾಗಿ ಕೈಲಾಕ್ ಬುಕಿಂಗ್ ಕೂಡ ತೆರೆಯಲಾಗಿದೆ. ಕೈಲಾಕ್ ವಿತರಣೆಯು ಜನವರಿ 27, 2025 ರಿಂದ ಪ್ರಾರಂಭವಾಗಲಿದೆ.


Click it and Unblock the Notifications