4.99 ಲಕ್ಷ.. 34 ಕಿ.ಮೀ ಮೈಲೇಜ್.. 5 ಸೀಟರ್.. ಭಾರಿ ಸಂಖ್ಯೆಯಲ್ಲಿ ಈ ಜನಪ್ರಿಯ ಕಾರು ಮಾರಾಟ!
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವ ಹತ್ತಾರು ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಈಚೆಗೆ ಆಗಸ್ಟ್ ತಿಂಗಳ (2024) ಕಾರು ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಪ್ರಖ್ಯಾತ ಹ್ಯಾಚ್‌ಬ್ಯಾಕ್ ಸೆಲೆರಿಯೊ (Celerio) ಮಾರಾಟದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಈ ಕಾರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಆ ಕುರಿತಂತೆ ಸಂಪೂರ್ಣವಾದ ವಿವರ ಇಲ್ಲಿದೆ.
ಕಳೆದ ತಿಂಗಳು (ಆಗಸ್ಟ್ 2024) ಮಾರುತಿ ಸುಜುಕಿ ಬರೋಬ್ಬರಿ 3181 ಯುನಿಟ್ ಸೆಲೆರಿಯೊ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟಗೊಳಿಸಿದೆ. 2023ರ ಆಗಸ್ಟ್‌ನಲ್ಲಿ ಮಾರಾಟ ಮಾಡಿದ 2465 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 29.05% ಪ್ರಗತಿಯಾಗಿದೆ. ಮುಂಬರುವ ತಿಂಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಗಳು ಬರಲಿದ್ದು, ಈ ಕಾರು ಇನ್ನಷ್ಟು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

ಹೊಚ್ಚ ಹೊಸ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಹ್ಯಾಚ್‌ಬ್ಯಾಕ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.4.99 ಲಕ್ಷದಿಂದ ರೂ.7.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಸೇರಿದಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.
ಸೆಲೆರಿಯೊ ಕಾರು ಅತ್ಯಾಧುನಿಕ ವಿನ್ಯಾಸವನ್ನು (ಡಿಸೈನ್) ಹೊಂದಿದೆ. ಕೆಫೀನ್ ಬ್ರೌನ್, ಪರ್ಲ್ ಮಿಡ್ನೈಟ್ ಬ್ಲಾಕ್, ಗ್ಲಿಸ್ಟೆನಿಂಗ್ ಗ್ರೇ, ಸಿಲ್ಕಿ ಸಿಲ್ವರ್, ಸ್ಪೀಡಿ ಬ್ಲೂ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ. ಈ ಹ್ಯಾಚ್‌ಬ್ಯಾಕ್‌ನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 313 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ 2 ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1-ಲೀಟರ್ ಪೆಟ್ರೋಲ್ ಎಂಜಿನ್, 67 ಪಿಎಸ್ ಅಶ್ವ ಶಕ್ತಿ (ಪವರ್) ಮತ್ತು 89 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. ಸಿಎನ್‌ಜಿ ಚಾಲಿತ ಮಾದರಿಯು ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದಾಗ್ಯೂ 57 ಪಿಎಸ್ ಅಶ್ವ ಶಕ್ತಿ (ಪವರ್) ಹಾಗೂ 82 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ.
ಸೆಲೆರಿಯೊ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಪೆಟ್ರೋಲ್ (Petrol) ಚಾಲಿತ ರೂಪಾಂತರಗಳು 25.24 ರಿಂದ 26.68 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತವೆ. ಸಿಎನ್‌ಜಿ (Cng) ಚಾಲಿತ ರೂಪಾಂತರ ಮಾತ್ರ ಗರಿಷ್ಠ 34.43 ಕೆಎಂ/ಕೆಜಿವರೆಗೆ ಮೈಲೇಜ್ ಕೊಡುತ್ತದೆ.

ನೂತನ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) 7-ಇಂಚಿನ ಟಚ್‌ಸ್ಕ್ರೀನ್, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಕೀಲೆಸ್ ಎಂಟ್ರಿ ಹಾಗೂ ಮ್ಯಾನುವಲ್ ಎಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications